ಟ್ರಂಪ್‌ಗೆ ಅಡ್ಡಗಾಲು ಹಾಕಲು ಒಂದಾದ ರಿಪಬ್ಲಿಕನ್ ಆಕಾಂಕ್ಷಿಗಳು
ವಾಶಿಂಗ್ಟನ್, ಎ. 25: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ಅಗತ್ಯವಿರುವ ನಿಯೋಗಿ (ಡೆಲಿಗೇಟ್)ಗಳನ್ನು ಪಡೆಯಲು ಡೊನಾಲ್ಡ್ ಟ್ರಂಪ್‌ಗೆ ಸಾಧ್ಯವಾಗದಂತೆ ನೋಡಿಕೊಳ್ಳುವುದಕ್ಕಾಗಿ, ಇನ್ನುಳಿದ ರಾಜ್ಯಗಳ ಪ್ರೈಮರಿ ಚುನಾವಣೆಗಳಲ್ಲಿ ಜೊತೆಗೂಡಿ ತಂತ್ರಗಾರಿಕೆ ರೂಪಿಸಲು ಪಕ್ಷದ ಅವರ ಪ್ರತಿಸ್ಪರ್ಧಿಗಳು ರವಿವಾರ ನಿರ್ಧರಿಸಿದ್ದಾರೆ.
ಆಧುನಿಕ ಕಾಲದ ಅಮೆರಿಕದ ರಾಜಕೀಯದಲ್ಲೇ ಅಭೂತಪೂರ್ವ ಎನಿಸಿರುವ ಕ್ರಮವೊಂದರಲ್ಲಿ, ಟೆಡ್ ಕ್ರೂಝ್ ಮತ್ತು ಜಾನ್ ಕ್ಯಾಸಿಚ್ ಇದಕ್ಕೆ ಸಂಬಂಧಿಸಿದ ಹೇಳಿಕೆಗಳನ್ನು ಹೊರಡಿಸಿದ್ದಾರೆ.
ಕ್ಯಾಸಿಚ್‌ರ ಪ್ರಚಾರ ಅಭಿಯಾನವು ಇಂಡಿಯಾನದಲ್ಲಿ ಕ್ರೂಝ್‌ಗೆ ಮುಕ್ತ ಮಾರ್ಗವನ್ನು ಒದಗಿಸಲಿದೆ. ಅದಕ್ಕೆ ಪ್ರತಿಯಾಗಿ, ಒರೆಗಾನ್ ಮತ್ತು ನ್ಯೂ ಮೆಕ್ಸಿಕೊ ರಾಜ್ಯಗಳಲ್ಲಿ ಕ್ರೂಝ್ ಬಣವು ಕ್ಯಾಸಿಚ್‌ಗೆ ಮುಕ್ತ ಮಾರ್ಗವನ್ನು ಒದಗಿಸಲಿದೆ.
‘‘ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ರಿಪಬ್ಲಿಕನ್ ಪಕ್ಷದಿಂದ ಟಿಕೆಟ್ ಗಿಟ್ಟಿಸುವ ಆಕಾಂಕ್ಷಿಗಳ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಪ್ರಥಮ ಸ್ಥಾನದಲ್ಲಿರುವುದು ಖಂಡಿತವಾಗಿಯೂ ರಿಪಬ್ಲಿಕನ್ ಪಕ್ಷಕ್ಕೆ ಅನಾಹುತಕಾರಿಯಾಗಲಿದೆ’’ ಎಂದು ಕ್ರೂಝ್‌ರ ಪ್ರಚಾರ ನಿರ್ವಾಹಕ ಜೆಫ್ 3ರೋ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಅಥವಾ ಬರ್ನೀ ಸ್ಯಾಂಡರ್ಸ್ ವಿರುದ್ಧ ಟ್ರಂಪ್ ಕೊಚ್ಚಿಹೋಗುವುದು ಮಾತ್ರವಲ್ಲ, ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಿದರೆ ಪಕ್ಷವು ಒಂದು ತಲೆಮಾರಿನಷ್ಟು ಹಿಂದೆ ಹೋದಂತಾಗುತ್ತದೆ’’ ಎಂದು ಅವರು ಹೇಳಿದ್ದಾರೆ.
ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ಈ ಕ್ರಮದಿಂದ ತನ್ನ ಎದುರಾಳಿಗಳಿಗೆ ಪ್ರಯೋಜನವಾಗುವುದಿಲ್ಲ ಎಂದು ಹೇಳಿದ್ದಾರೆ.