ಜೆಎನ್‌ಯು ವಿವಾದ: ಕನ್ಹಯ್ಯ ಕುಮಾರ್‌ಗೆ ದಂಡ ಉಮರ್ ಸಹಿತ ಮೂವರು ಅಮಾನತು
ಹೊಸದಿಲ್ಲಿ,ಎ.25: ದೇಶ ವಿರೋಧಿ ಘೋಷಣೆಗಳನ್ನು ಕೂಗಲಾಗಿತ್ತೆನ್ನಲಾದ ಫೆ.9ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರಗೆ 10,000 ರೂ.ದಂಡವನ್ನು ವಿಧಿಸಲಾಗಿದ್ದರೆ, ಸಹವಿದ್ಯಾರ್ಥಿ ಉಮರ್ ಖಾಲಿದ್‌ನನ್ನು ಒಂದು ಸೆಮೆಸ್ಟರ್ ಅವಧಿಗೆ ಅಮಾನತುಗೊಳಿಸಲಾಗಿದೆ. ಇಬ್ಬರನ್ನೂ ದೇಶದ್ರೋಹ ಆರೋಪದಲ್ಲಿ ಬಂಧಿಸಿ ತಿಹಾರ ಜೈಲಿಗೆ ಕಳುಹಿಸಲಾಗಿದ್ದು,ಕಳೆದ ತಿಂಗಳು ಜಾಮೀನಿನಲ್ಲಿ ಬಿಡುಗಡೆಯಾಗಿದ್ದಾರೆ.
ಉನ್ನತ ಮಟ್ಟದ ವಿಚಾರಣಾ ಸಮಿತಿಯ ಶಿಫಾರಸಿನ ಮೇರೆಗೆ ವಿವಿ ಆಡಳಿತವು ಸಂಸತ್ ದಾಳಿಯ ದೋಷಿ ಅಫ್ಝಲ್ ಗುರು ಪರ ಘೋಷಣೆಗಳನ್ನು ಕೂಗಲಾಗಿದ್ದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಜೀಬ್ ಗಟ್ಟೂ ಮತ್ತು ಅನಿರ್ಬಾಣ ಭಟ್ಟಾಚಾರ್ಯ ಸೇರಿದಂತೆ ಇತರ 14 ವಿದ್ಯಾರ್ಥಿಗಳ ವಿರುದ್ಧವೂ ಕಠಿಣ ಕ್ರಮವನ್ನು ಕೈಗೊಂಡಿದೆ.
ಸಂಶೋಧನಾ ವಿದ್ಯಾರ್ಥಿಗಳಾಗಿರುವ ಭಟ್ಟಾಚಾರ್ಯ,ಖಾಲಿದ್ ಮತ್ತು ಗಟ್ಟೂ ಅವರನ್ನು ತರಗತಿಗಳಿಂದ ಅಮಾನತುಗೊಳಿಸಲಾಗಿದೆ. ಭಟ್ಟಾಚಾರ್ಯರನ್ನು 2016,ಜುಲೈ 15ರವರೆಗೆ ಅಮಾನತುಗೊಳಿಸಲಾಗಿದೆ ಮತ್ತು 2016,ಜುಲೈ 23ರಿಂದ ಐದು ವರ್ಷಗಳ ಅವಧಿಗೆ ಕ್ಯಾಂಪಸ್ ಪ್ರವೇಶವನ್ನು ನಿಷೇಧಿಸಲಾಗಿದೆ. ಖಾಲಿದ್‌ಗೆ ಅಮಾನತಿನ ಜೊತೆಗೆ 20,000 ರೂ.ಗಳ ದಂಡವನ್ನೂ ವಿಧಿಸಲಾಗಿದೆ. ಗಟ್ಟೂವನ್ನು ಎರಡು ಸೆಮೆಸ್ಟರ್ ಅವಧಿಗೆ ಅಮಾನತುಗೊಳಿಸಲಾಗಿದೆ.
ಕನ್ಹಯ್ಯ ಮತ್ತು ಜೆಎನ್‌ಯು ವಿದ್ಯಾರ್ಥಿ ಸಂಘದ ಜಂಟಿ ಕಾರ್ಯದರ್ಶಿ ಸೌರಭ ಶರ್ಮಾಗೆ ತಲಾ 10,000 ರೂ.ದಂಡ ವಿಧಿಸಲಾಗಿದೆ. ಆದರೆ ಕಠಿಣ ದಂಡನೆಗೆ ಗುರಿಯಾಗಿರುವುದು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಅಶುತೋಷ ಕುಮಾರ. 20,000 ರೂ.ದಂಡದ ಜೊತೆಗೆ ವಿವಿಯು ಅವರಿಗೆ ನೀಡಿದ್ದ ಹಾಸ್ಟೆಲ್ ಸೌಲಭ್ಯವನ್ನು ವಾಪಸ್ ಪಡೆದಿದೆ.