ಭಾರತೀಯರನ್ನು ಅಣಕಿಸಿದ ಟ್ರಂಪ್‌ಗೆ ಹಿಲರಿ ಗುಂಪು ತರಾಟೆ
ವಾಶಿಂಗ್ಟನ್, ಎ. 25: ಭಾರತೀಯ ಕಾಲ್ ಸೆಂಟರ್ ಉದ್ಯೋಗಿಯೊಬ್ಬನ ಉಚ್ಚಾರಣೆಯನ್ನು ಅಣಕಿಸಿದ ರಿಪಬ್ಲಿಕನ್ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ರನ್ನು ಡೆಮಾಕ್ರಟಿಕ್ ಅಭ್ಯರ್ಥಿ ಆಕಾಂಕ್ಷಿ ಹಿಲರಿ ಕ್ಲಿಂಟನ್‌ರ ಅಧ್ಯಕ್ಷೀಯ ಪ್ರಚಾರ ಸಮಿತಿ ಟೀಕಿಸಿದೆ. ಇದು ಭಾರತೀಯ ಸಮುದಾಯದ ಬಗ್ಗೆ ಅವರಿಗಿರುವ ಅಸಡ್ಡೆ ಹಾಗೂ ಅವರ ವಿಭಜನವಾದಿ ನೀತಿಯನ್ನು ತೋರಿಸುತ್ತದೆ ಎಂದು ಅದು ಬಣ್ಣಿಸಿದೆ.
‘‘ಅವರು ವಿಭಜನವಾದಿ ಪ್ರಚಾರವನ್ನು ನಡೆಸುತ್ತಿದ್ದಾರೆ. ನಮಗೆ ಸ್ನೇಹಿತರು, ಮಿತ್ರ ಪಕ್ಷಗಳು ಬೇಕಿರುವಾಗ ಇದನ್ನು ಮಾಡುವುದು ದೇಶದ ಪಾಲಿಗೆ ಅಪಾಯಕಾರಿಯಾಗುತ್ತದೆ. ಅವರು ನಡೆಸುತ್ತಿರುವ ಮಾದರಿಯ ಪ್ರಚಾರ ಜಗತ್ತಿನಾದ್ಯಂತ ನಮ್ಮ ಬಗ್ಗೆ ಅಗೌರವವನ್ನು ಸೃಷ್ಟಿಸುತ್ತದೆ ಹಾಗೂ ಇಲ್ಲಿ ನಮ್ಮ ದೇಶದಲ್ಲಿ ವಿಭಜನೆ ಮತ್ತು ಅಪಾಯವನ್ನು ಹುಟ್ಟಿಸುತ್ತದೆ’’ ಎಂದು ಹಿಲರಿ ಕ್ಲಿಂಟನ್‌ರ ಪ್ರಚಾರ ಸಮಿತಿಯ ಮುಖ್ಯಸ್ಥ ಜಾನ್ ಪೊಡೆಸ್ಟ ಹೇಳಿದರು.
ಮೇರಿಲ್ಯಾಂಡ್ ರಾಜ್ಯದ ಜರ್ಮನ್‌ಟೌನ್‌ನಲ್ಲಿ ರವಿವಾರ ‘ಇಂಡಿಯನ್-ಅಮೆರಿಕನ್ಸ್ ಫಾರ್ ಹಿಲರಿ’ ಎಂಬ ಗುಂಪನ್ನು ಉದ್ಘಾಟಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.