×
Ad

ಗ್ಯಾಂಗ್ರಿನ್ ಪೀಡಿತ ದಾವೂದ್‌ಗೆ ಈಗ ಕಾಲು ಕಳೆದುಕೊಳ್ಳುವ ಭೀತಿ

Update: 2016-04-25 23:48 IST

ಹೊಸದಿಲ್ಲಿ,ಎ.25: ಭಾರತದ ‘ಮೋಸ್ಟ್ ವಾಂಟೆಡ್’ ಭಯೋತ್ಪಾದಕ ದಾವೂದ್ ಇಬ್ರಾಹೀಂ ಗ್ಯಾಂಗ್ರಿನ್‌ನಿಂದ ನರಳುತ್ತಿದ್ದಾನೆ. ಕಾಯಿಲೆಯೀಗ ಮುಂದುವರಿದ ಹಂತದಲ್ಲಿದ್ದು ಸಂಪೂರ್ಣವಾಗಿ ಗುಣಮುಖವಾಗುವ ಸಾಧ್ಯತೆಗಳು ಕಡಿಮೆ. 1993ರ ಮುಂಬೈ ಸರಣಿ ಬಾಂಬ್ ಸ್ಫೋಟಗಳ ಮೂಲಕ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ಭೂಗತ ಲೋಕದ ಈ ಪಾತಕಿಯೀಗ ಕಾಲು ಕಳೆದುಕೊಳ್ಳುವ ಭೀತಿಯಲ್ಲಿದ್ದಾನೆ. ಹೀಗೆಂದು ಸುದ್ದಿವಾಹಿನಿ ನ್ಯೂಸ್ 18 ವರದಿ ಮಾಡಿದೆ.

ದಾವೂದ್ ಅಧಿಕ ರಕ್ತದೊತ್ತಡ ಮತ್ತು ಮಧುಮೇಹ ಪೀಡಿತನಾಗಿದ್ದು, ಕಾಲಿನ ನರಗಳಿಗೆ ಸರಿಯಾಗಿ ರಕ್ತ ಪೂರೈಕೆಯಾಗದೇ ಗ್ಯಾಂಗ್ರಿನ್ ಆತನನ್ನು ಅಮರಿಕೊಂಡಿದೆ ಎನ್ನುವುದು ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಅಭಿಪ್ರಾಯ. ಆತನ ಜೀವಕ್ಕೇ ಬೆದರಿಕೆಯಿದ್ದು,ಕಾಲುಗಳಲ್ಲಿಯ ಜೀವಕೋಶಗಳು ಈಗಾಗಲೇ ಸತ್ತು ಹೋಗಿವೆ ಎಂದೂ ವರದಿಯು ಹೇಳಿದೆ. ಭೂಗತ ಪಾತಕಿ ಕರಾಚಿಯಲ್ಲಿ ಐಎಸ್‌ಐ ಭದ್ರತೆಯಲ್ಲಿದ್ದು, ಆತನನ್ನು ಕರಾಚಿಯಿಂದ ಹೊರಗೆ ಸಾಗಿಸುವಂತಿಲ್ಲ ಎಂದು ಮೂಲಗಳು ತಿಳಿಸಿವೆ.

 ದಾವೂದ್ ಚಿಕಿತ್ಸೆಗೆ ಸೇನೆಯ ವೈದ್ಯರು ನೆರವಾಗಲಿದ್ದಾರೆ ಎಂದೂ ವರದಿಯು ಹೇಳಿದೆ. ಆತನ ದೇಹಸ್ಥಿತಿ ಇನ್ನಷ್ಟು ಹದಗೆಟ್ಟು ಪಾಕಿಸ್ತಾನದಲ್ಲಿಯೇ ಕೊನೆಯುಸಿರೆಳೆದರೆ ಮುಂಬೈ ಸರಣಿ ಸ್ಫೋಟ ಸೇರಿದಂತೆ ಆತ ತನ್ನ ತಾಯಿನಾಡಿನಲ್ಲಿ ಎಸಗಿರುವ ಅಪರಾಧಗಳಿಗಾಗಿ ಆತನ ವಿಚಾರಣೆ ಭಾರತದಲ್ಲಿಯೇ ನಡೆಯಬೇಕು ಎಂದು ಕಾಯುತ್ತಿರುವವರಿಗೆ ತೀವ್ರ ನಿರಾಶೆಯಾಗಲಿದೆ.

66ರ ಹರೆಯದ ಈ ಮಾಜಿ ಮುಂಬೈ ಪೊಲೀಸನ ಮಗ 257 ಜೀವಗಳ ಬಲಿ ಮತ್ತು 717 ಜನರು ಗಾಯಗೊಳ್ಳಲು ಕಾರಣವಾಗಿದ್ದ ಮುಂಬೈ ಸರಣಿಸ್ಫೋಟ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು,ಭಾರತಕ್ಕೆ ‘ಮೋಸ್ಟ್ ವಾಂಟೆಡ್’ ಕ್ರಿಮಿನಲ್ ಆಗಿದ್ದಾನೆ. ಈತನ ಸಹಚರರ ಪೈಕಿ ಯಾಕೂಬ್ ಮೆಮನ್ 2015 ಜುಲೈನಲ್ಲಿ ಗಲ್ಲಿಗೇರಿದ್ದರೆ, ಆತನ ಅಣ್ಣ ಟೈಗರ್ ಮೆಮನ್ ಪಾಕ್‌ನಲ್ಲಿ ತಲೆಮರೆಸಿಕೊಂಡಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News