×
Ad

2017ರೊಳಗೆ 2 ಲಕ್ಷಕ್ಕೂ ಹೆಚ್ಚು ಕೇಂದ್ರ ಸರಕಾರಿ ಉದ್ಯೋಗ ಸೃಷ್ಟಿ?

Update: 2016-04-25 23:59 IST

ಹೊಸದಿಲ್ಲಿ, ಎ.25: ಕೇಂದ್ರ ಸರಕಾರವು ತನ್ನ ವಿವಿಧ ಇಲಾಖೆಗಳಲ್ಲಿ ಅಂದಾಜು 2 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸಲು ನಿರ್ಧರಿಸಿದೆ.

2017ರೊಳಗೆ ಈಗಿರುವ 33.05 ಲಕ್ಷ ನೌಕರ ಬಲಕ್ಕೆ ಸುಮಾರು 2.18 ಲಕ್ಷದಷ್ಟು ಸೇರಿಸುವ ಪ್ರಸ್ತಾಪವನ್ನು ಕೇಂದ್ರ ಸರಕಾರವು 2016-17ರ ಬಜೆಟ್ ಅಂದಾಜಿನಲ್ಲಿ ಬಿಂಬಿಸಿದೆ. ಗೃಹ ಸಚಿವಾಲಯವು 5,635 ಹೊಸ ಹುದ್ದೆಗಳನ್ನು ಸೃಷ್ಟಿಸಿ ತನ್ನ ಬಲವನ್ನು 2017ರೊಳಗಾಗಿ 22,006ಕ್ಕೆ ಏರಿಸಿಕೊಳ್ಳಲಿದೆ.ಅದೇ ರೀತಿ ಪೊಲೀಸ್ ಇಲಾಖೆಯಲ್ಲಿ 47,264 ಹೊಸ ಹುದ್ದೆಗಳು ಸೃಷ್ಟಿಯಾಗಲಿದ್ದು, ಅದರ ಒಟ್ಟು ಬಲವು 10,28,077 ರಿಂದ (2015ರಲ್ಲಿ) 10,75,341 ಕ್ಕೆ ಹೆಚ್ಚಲಿದೆಯೆಂದು ಸರಕಾರ ತಿಳಿಸಿದೆ.

ರಕ್ಷಣಾ ಸಚಿವಾಲಯದಲ್ಲಿ 10,894 ಸಿಬ್ಬಂದಿ ಹೆಚ್ಚಳವಾಗಿ 2017ಕ್ಕೆ ಮಾನವ ಶಕ್ತಿಯ ಲೆಕ್ಕವನ್ನು 51,084ಕ್ಕೊಯ್ಯಲಿದೆಯೆಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಂಡಿಸಿದ ಬಜೆಟ್ ಅಂದಾಜು ಹೇಳಿದೆ.

ಸೂಕ್ತ ಪರಿಶೀಲನೆ ಹಾಗೂ ಸರಕಾರದ ಭವಿಷ್ಯದ ನೋಟವನ್ನು ಗಮನದಲ್ಲಿರಿಸಿ ಇದನ್ನು ಬಿಂಬಿಸಲಾಗಿದೆ.ಸರಕಾರವು ಅಗತ್ಯವಿರುವ ಕಡೆಗಳಲ್ಲಿ ಹೊಸ ಹುದ್ದೆಗಳ ಸೃಷ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಿದೆ.ಕೇಂದ್ರ ಸರಕಾರದ ಸಂಸ್ಥಾಪನೆಗಳ ಕುರಿತು ಬಜೆಟ್ ಅಂದಾಜುಗಳು ಉತ್ತಮ ಆಡಳಿತ ನೀಡಲು ಸಹಾಯ ಮಾಡಲಿವೆಯೆಂದು ಸಿಬ್ಬಂದಿ, ಸಾರ್ವಜನಿಕ ದೂರು ಹಾಗೂ ಪಿಂಚಣಿ ಸಹಾಯಕ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಅಣು ಶಕ್ತಿ ಇಲಾಖೆಯ 6,353 ಹೊಸ ಹುದ್ದೆಗಳನ್ನು ಸೇರಿಸಿ ಸಿಬ್ಬಂದಿ ಬಲವನ್ನು 38,025ಕ್ಕೆ ಹೆಚ್ಚಿಸಲಿದೆ.ನಾಗರಿಕ ವಿಮಾನಯಾನ ಸಚಿವಾಲಯವು 1,080 ಹೊಸ ಹುದ್ದೆಗಳೊಂದಿಗೆ 2015ರಲ್ಲಿ 1,060ಇದ್ದ ಸಿಬ್ಬಂದಿ ಸಂಖ್ಯೆಯನ್ನು 2,140ಕ್ಕೆ ವೃದ್ಧಿಸಿಕೊಳ್ಳಲಿದೆ.2015ರಲ್ಲಿ 8,913 ಇದ್ದ ವಿದೇಶಾಂಗ ಸಚಿವಾಲಯದ ಬಲ 2,072 ಹುದ್ದೆಗಳ ಸೃಷ್ಟಿಯಿಂದ 2017ಕ್ಕೆ 10,985 ಕ್ಕೇರಲಿದೆ.

ಗಣಿ ಸಚಿವಾಲಯದಲ್ಲಿ 4,399 ಹೊಸ ಹುದ್ದೆಗಳು ಸೃಷ್ಟಿಯಾಗಲಿವೆ.ಸಿಬ್ಬಂದಿ ಸಚಿವಾಲಯವು 1,796 ಹೊಸ ಹುದ್ದೆಗಳೊಂದಿಗೆ ಬಲವನ್ನು ಹೆಚ್ಚಿಸಿಕೊಳ್ಳಲಿದೆ.

ಸಂಪುಟ ಕಾರ್ಯಾಲಯವು ಎಲ್ಲ ಸಚಿವಾಲಯಗಳಿಗೆ ‘ಉದ್ಯೋಗ ಸೃಷ್ಟಿ ಸಾಮರ್ಥ್ಯ’ ವನ್ನು ಪ್ರತಿ ಯೋಜನೆಯಲ್ಲಿ ನಮೂದಿಸುವಂತೆ ಸೂಚಿಸಿದ್ದು ,ಕೇಂದ್ರ ಸಂಪುಟ ಹಾಗೂ ಅದರ ಸಮಿತಿಗಳಿಂದ ಮಂಜೂರಾತಿಯನ್ನು ಕೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News