×
Ad

ಮಾಧ್ಯಮಗಳ ವರದಿ, ಪೊಲೀಸರ ಹೇಳಿಕೆಗಳ ಆಧಾರದಲ್ಲಿ ಓರ್ವ ನಿರಾಪರಾಧಿಗೆ "ಭಯೋತ್ಪಾದಕ" ಪಟ್ಟ ನೀಡುತ್ತೇವೆ . ಆದರೇ ……

Update: 2016-04-26 19:12 IST

ಪ್ರೀತಿಗೆ ಗಡಿ, ಧರ್ಮ ಅಥವಾ ಇನ್ನಿತರ ಯಾವುದೇ ಅಡೆತಡೆಗಳಿಲ್ಲವೆಂಬುದು ಸಾಮಾನ್ಯ ವಾದ. ಆದರೆ ಇಲ್ಲಿ ಗಡಿ ಮೀರಿದ ಪ್ರೀತಿ ಒರ್ವ ಸಾಮಾನ್ಯ ಯುವಕನನ್ನು 11 ವರ್ಷಗಳ ಕಾಲ ಜೈಲಿನಲ್ಲಿ ಕೊಳೆಯವಂತೆ ಮಾಡಿದೆ. ಹೌದು ಆತ ಜಾವೀದ್. ಹೆಸರಿನಿಂದಲೇ ತಿಳಿಯುತ್ತೆ ಆತ ಮುಸ್ಲಿಮನೆಂದು! ಉತ್ತರ ಭಾರತದ ರಾಮಪುರ ಎಂಬ ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಯುವಕ. ಶ್ರಮಜೀವಿ ಕೂಡ ಹೌದು. ಹಾಗಾದರೆ ಹನ್ನೊಂದು ವರ್ಷ ಜೈಲಿನಲ್ಲಿ ಕೊಳೆಯಲು ಈತ ಮಾಡಿದ ಅಪರಾಧವೇನು? ಪ್ರಶ್ನೆ ಸಹಜವಾಗಿ ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡುತ್ತದೆ. ಆಶ್ಚರ್ಯವಾದರೂ ಸತ್ಯ, ಈತನ ಅಪರಾಧ ಗಡಿ ಮೀರಿ ಪ್ರೀತಿಸಿದ್ದು. ಹೌದು ಈತನ ಹತ್ತಿರದ ಸಂಬಂಧಿ ಮುಬೀನಾ ಎಂಬ ಯುವತಿಯನ್ನು 1990 ರಲ್ಲಿ love at first sight ಎಂಬಂತೆ ಪ್ರೀತಿಸತೊಡಗಿದ.ಆಕೆಯ ಕುಟುಂಬ 1947ರ ವಿಭಜನೆಯಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿತ್ತು.

ವೃತ್ತಿಯಲ್ಲಿ ಎಲೆಕ್ಟ್ರಾನಿಕ್ ಸಾಮಾನುಗಳನ್ನು ರಿಪೇರಿ ಮಾಡುತ್ತಿದ್ದ ಜಾವೀದ್. ಹತ್ತಿರದ ಟೆಲಿಫೋನ್ ಬೂತಿನಲ್ಲಿ ಬಹುತೇಕ ಮುಬೀನಾಳೊಂದಿಗೆ ಮಾತನಾಡಿ ದುಡಿದ ಹಣ ವ್ಯಯಿಸುತ್ತಿದ್ದ. ಹೀಗೆ ಮುಂದುವರಿದ ಗಾಢ ಪ್ರೀತಿಗಾಗಿ, ಅವಳನ್ನು ಭೇಟಿಯಾಗಲು ಭಾರತದಿಂದ ಕರಾಚಿಗೂ ಹೊರಟ! ಅಲ್ಲಿ ಮೂರುವರೇ ತಿಂಗಳು ಮುಬೀನಾಳ ಕುಟುಂಬಸ್ಥರೊಂದಿಗೆ ಕಾಲ ಕಳೆದ. ನಂತರ ಭಾರತಕ್ಕೆ ಮರಳಿ ತನ್ನ ವೃತ್ತಿಯಲ್ಲಿ ತಲ್ಲಿನನಾದ. ಕೊನೆಗೆ ಮತ್ತೊಮ್ಮೆ ಜಾವೀದ್ ಪಾಕಿಸ್ತಾನಕ್ಕೆ ತೆರಳುತ್ತಾನೆ. ಈ ಸಂದರ್ಭದಲ್ಲಿ ಇವರ ನಡುವಿನ ಪ್ರೀತಿಯ ವಿಷಯ ಮುಬೀನಳ ಮನೆಯಲ್ಲಿ ತಿಳಿಯುತ್ತದೆ.ಇತ್ತ ಜಾವೀದ್ ನ ಕುಟುಂಬದವರಿಗೂ ಗೊತ್ತಾಗಿ ಬಿಡುತ್ತದೆ. ಆದರೆ ಎರಡು ಕುಟುಂಬದಲ್ಲಿ ಯಾವುದೆ ಪ್ರತಿರೋಧ ಕಂಡು ಬರುದಿಲ್ಲ. ಆದರೆ ಜಾವೀದ್ ಮನೆಯವರು ಮುಬೀನಾ ಭಾರತಕ್ಕೆ ಬರಬೇಕು ಅಂದ್ರೆ, ಅತ್ತ ಮುಬೀನಾಳ ಕುಟುಂಬಸ್ಥರು ಜಾವೀದ್ ಪಾಕಿಸ್ತಾನದಲ್ಲೇ settle ಆಗ್ಬೇಕಂತ ಹಠ! ಅಂತೂ ಇಂತೂ ಮುಬೀನಾ ಜಾವೀದ್ ಗೆ ತಿಳಿ ಹೇಳಿ, ನೀವು ಭಾರತಕ್ಕೆ ಹೋಗಿ ಬನ್ನಿ, ನಾನು ನನ್ನ ಕುಟುಂಬದ ಮನವೋಲಿಸುತ್ತೇನೆ. ನಾನೇ ನಿಮ್ಮೊಂದಿಗೆ ಭಾರತಕ್ಕೆ ಬರುತ್ತೇನೆಂದು ಹುರಿದುಂಭಿಸಿ ಜಾವೀದ್ ಭಾರತಕ್ಕೆ ಬರುತ್ತಾನೆ. ಈಗ ಇರುವುದು ಕಹಾನಿಯಲ್ಲಿ ರಿಯಾಲ್ ಟ್ವಿಸ್ಟ್.

 ಭಾರತಕ್ಕೆ ಬಂದ ಜಾವೀದ್ ತನ್ನ ಟಿವಿ ರಿಪೇರಿ ವೃತ್ತಿಯಲ್ಲಿ ತಲ್ಲೀನನಾದ, ಒಂದು ದಿನ ಜಾವೀದ್ ನ ಬದುಕೇ ಸರ್ವನಾಶಗೊಳಿಸುವ ಸರಕಾರಿ ಪ್ರಯೋಜಿತ ಷಡ್ಯಂತ್ರ ನಡೆಯುತ್ತದೆ. ಅಂದು ಆಗಸ್ಟ್ 10 2002 ಶನಿವಾರ ಒಮ್ಮಲೇ ಒರ್ವ ವ್ಯಕ್ತಿ ಬಂದು ಟಿವಿ ರಿಪೇರಿ ಮಾಡಲು ಇದೆ ಮನೆಗೆ ಬಾ ಎಂದು ಕರೆಯುತ್ತಾನೆ. ಅದರಂತೆ ಜಾವೀದ್ ಮನಸ್ಸಿಲ್ಲದ ಮನಸ್ಸಿನಲ್ಲಿ ಆಗಂತುಕನೊಂದಿಗೆ ಹೆಜ್ಜೆ ಹಾಕಲು ಶುರು ಇಟ್ಟ, ಸ್ವಲ್ಪ ದೂರ ನಡೆಯುತ್ತಿದ್ದಂತೆ ಹಿಂದಿನಿಂದ ಅಪರಿಚಿತ ಕಾರೊಂದು ಬಂದು ಜಾವೀದ್ ನನ್ನು ಕಾರಿನೊಳಗೆ ತಳ್ಳಿ, ಪಕ್ಕ ಸಿನಿಮೀಯ ರೀತಿಯಲ್ಲಿ ಅಪಹರಣ ಮಾಡಲಾಗುತ್ತದೆ. ಮೊದಲಿಗೆ ಅಪಹರಣಗಾರರು ಗೂಂಡಾಗಳೆಂದು ಭಾವಿಸಿದ್ದ ಜಾವೀದ್, ನಂತರ ಅವರೆಲ್ಲರೂ ಪೊಲೀಸರೆಂಬುದು ಖಚಿತವಾಗುತ್ತದೆ!! ಜಾವೀದ್ ಬಳಿಯಿದ್ದ ಮುಬೀನಳ ಎರಡು "ಲವ್ ಲೆಟರ್" ಕಿತ್ತುಕೊಳ್ಳುತ್ತಾರೆ. ಎಷ್ಟೇ ರೋಧಿಸಿ ಅಂಗಲಾಚಿ ಬಿಡಲು ಕೇಳಿ ಕೊಂಡರು, ಅತ್ತ ಕಡೆಯಿಂದ ಬಂದ ಉತ್ತರ ನಾವು ನಿಮ್ಮ ಕುಟುಂಬವನ್ನು ಅಪಹರಿಸಿದ್ದೇವೆ.

ನೀನು ಸುಮ್ಮನಿರದಿದ್ದರೇ ಗುಂಡು ಹಾರಿಸಿ ಕೊಲ್ಲುತ್ತೇವೆಂಬ ಬೆದರಿಕೆ ಬರುತ್ತದೆ! ನಂತರ ಮೂರು ದಿನಗಳ ಕಾಲ ಜಾವೀದ್ ನ ಮೇಲೆ ಕ್ರೂರವಾದ ದೌರ್ಜನ್ಯವನ್ನು ಮಾಡಲಾಗುತ್ತದೆ. ತಲೆ ಕೆಳಗೆ ಮಾಡಿ ನೀರಿನಲ್ಲಿ ಮುಳುಗಿಸಿ ಎತ್ತಲಾಗುತ್ತದೆ. ಕೈ ಕಾಲಿನ ಗಂಟುಗಳಿಗೆ ರಕ್ತ ಹೆಬ್ಬು ಗಟ್ಟುವಂತೆ ಹೊಡೆಯಲಾಗುತ್ತದೆ. ನೋವನ್ನು ಸಹಿಸಲಾಗದ ಜಾವೀದ್ ನನ್ನನ್ನು ಕೊಂದು ಬಿಡಿಯೆಂದು ಅಂಗಲಾಚುತ್ತಾನೆ. ಈತನೊಂದಿಗೆ,ಗೆಳೆಯರಾದ ಮಕ್ಸೂದ್, ತಾಜ್ ಹಾಗೂ ಮಾಮ್ತಾಜ್ ಮಿಯಾನನ್ನು ಕೂಡ ಪೋಲೀಸರು ಅಪಹರಿಸುತ್ತಾರೆ! ಪೊಲೀಸರು ಇವರು ಪಾಕಿಸ್ತಾನದ isi ನ ಏಜೆಂಟ್ ಗಳು, ಹಾಗೂ ಭಾರತದ ಮೇಲೆ ಯುದ್ಧ ನಡೆಸಲು ಪ್ರಯತ್ನಿಸುತ್ತೀರುವ "ಭಯೋತ್ಪಾದಕರು" ಎಂಬ ಆರೋಪವನ್ನು ಹೊರಿಸುತ್ತಾರೆ! ಸುಮಾರು ಒಂದು ತಿಂಗಳಿನ ನಂತರ ಭಾರತದ ವಿವಾದಾಸ್ಪದ ಕಾಯ್ದೆ prevention of terrorism act (potato) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ.

ಜಾವೀದ್ ಪ್ರತಿ ಕ್ಷಣ ಅಲ್ಲಿನ ಪೊಲೀಸರೊಂದಿಗೆ ಅಂಗಲಾಚಿದ, ದಯೆ ಭೀಕ್ಷೆ ಬೇಡಿದ. ದೌರ್ಜನ್ಯ ಸಹಿಸಲಾಗದಾಗ ಮರಣ ದಂಡನೆ ನೀಡಲು ವಿನಂತಿಸಿದ! ಆದರೆ ಕೇಳುವವರ್ಯಾರು?! ಅತ್ತ ಜಾವೀದ್ ತನ್ನ ಪ್ರೀತಿಯ ನೆನಪಿನಲ್ಲಿ ಜೈಲಿನಲ್ಲಿ ದಿನದೂಡಲಾರಂಭಿಸಿದ.ಜಾವೀದ್ ತಂದೆ ತನ್ನ ಮಗನನ್ನು ಬಿಡುಗಡೆಗೊಳಿಸಲು, ಇದ್ದ ಜಮೀನು, ಚಿನ್ನ ಎಲ್ಲವನ್ನು ಮಾರುತ್ತಾರೆ. ನ್ಯಾಯ ತಡವಾದರೂ ಮರೀಚಿಕೆಯಲ್ಲವೆಂಬತೆ ಜಾವೀದ್ ಸುಮಾರು ಹನ್ನೊಂದು ವರ್ಷಗಳ ಕಠಿಣ, ದೌರ್ಜನ್ಯಯುಕ್ತ ಸೆರೆವಾಸದಿಂದ ದೋಷಮುಕ್ತಗೊಂಡು ಜನವರಿ 19 2014 ರಲ್ಲಿ ಬಿಡುಗಡೆಯಾಗುತ್ತಾರೆ.

 ಪತ್ರಕರ್ತ ಒಬ್ಬ ಅವರಲ್ಲಿ ವಿಚಾರಿಸಿದಾಗ ಬಹಳ ಬೇಸರದಿಂದ, ನನ್ನ ಯೌವನ ಇಡೀ ಜೈಲಿನಲ್ಲಿ ಕಳೆದು ಹೋಯಿತು. ನಾನು ಮಾಡದ ತಪ್ಪಿಗೆ 11 ವರ್ಷಗಳ ಕಾಲ ದೌರ್ಜನ್ಯ ಅನುಭವಿಸಿದೆ ಎಂದು ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತಾರೆ. ಮುಬೀನಾಳ ಬಗ್ಗೆ ವಿಚಾರಿಸಿದಾಗ, ನಾನು ಅವಳನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ಅಲೋಚನೆಯಿಂದ ದೂರಗೊಳಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ನನ್ನ ಹೃದಯ ಅವಳನ್ನು ಮರೆಯಲು ವ್ಯಥೆ ಪಡುತ್ತಿದೆಯೆಂದು ಜಾವೀದ್ ಮತ್ತೆ ಹಿಂದಿನಂತೆ ಟಿ.ವಿ ರಿಪೇರಿ ಮಾಡಲು ತೊಡಗುತ್ತಾನೆ. ಇದು ಜಾವೀದ್ ಒಬ್ಬನ ಕಥೆಯಲ್ಲ. ಜಾವೀದ್ ನಂತೆ ಜೈಲಿನಲ್ಲಿ ವ್ಯವಸ್ಥೆಯ ಪೂರ್ವಗ್ರಹ ಪೀಡಿತಕ್ಕೆ ಒಳಗಾಗಿ ಕೊಳೆಯುತ್ತಿರುವ ಸಾವಿರಾರು ಯುವಕರ ವ್ಯಥೆ.

ನಾವೆಲ್ಲರೂ ನಮ್ಮನ್ನು ಸುಶಿಕ್ಷಿತರು, ಪ್ರಜ್ಞಾವಂತರು ಎಂಬ ಸ್ವಯಂ ಘೋಷಿತ ಬಿರುದುಗಳನ್ನು ನೀಡುತ್ತಾ ಬಂದಿದ್ದೇವೆ. ಆದರು ಇನ್ನು ಕೂಡ ಪೂರ್ವಗ್ರಹ ಪೀಡಿತ ಭಾವೋದ್ವೇಗದಲ್ಲಿ ನರಳುದನ್ನು ಬಿಟ್ಟಿಲ್ಲ. ಸತ್ಯ ಮಿಥ್ಯಗಳ ನಡುವಿನ ಅಂತರವನ್ನು ವಿವೇಚಿಸಲು ಹೋಗುದಿಲ್ಲ. ಎಲ್ಲವನ್ನು ಮಾಧ್ಯಮಗಳ ಕಪೋಕಲ್ಪಿತ ವರದಿ, ಪೊಲೀಸರ ಸುಳ್ಳು ಹೇಳಿಕೆಗಳ ಆಧಾರದಲ್ಲಿ ಒರ್ವ ನಿರಾಪರಾಧಿಗೆ ಸೆರೆ ಹಿಡಿದ ಮೊದಲ ದಿನವೇ "ಭಯೋತ್ಪಾದಕನ" ಪಟ್ಟ ನೀಡಿ ಬಿಡುತ್ತೇವೆ. ಅದರ ಸತ್ಯಾಸತ್ಯತೆಯನ್ನು ಕಂಡು ಹಿಡಿಯುವಲ್ಲಿ ಸೋಲುತ್ತೇವೆ. ಆ ಕಾರಣಕ್ಕಾಗಿ ಸೆರೆ ಹಿಡಿಯುವಾಗ ನೋವು ತೋರುವ ಉದ್ರೇಕತೆ, ದೋಷ ಮುಕ್ತನಾಗಿ ಜೈಲಿನಿಂದ ಹೊರಬರುವಾಗ ಇರುವುದೇ ಇಲ್ಲ!! ಕನಿಷ್ಠ ಪಕ್ಷ ಆತನ ಯೌವನ ಪೊಲೀಸರ ಬೂಟುಗಾಲಿನ ಕೆಳಗೆ ಸರ್ವನಾಶ ಆಗಿರುವುದಕ್ಕೆ ಅನುಕಂಪವೂ ತೋರುದಿಲ್ಲ!! ಇಂತಹ ಕ್ರೂರ ವ್ಯವಸ್ಥೆಯೊಂದಿಗೆ ವಿನಂತಿಯೊಂದನಷ್ಟೇ ಮಾಡಬಲ್ಲೆ.....,ಹಲವು ಅಪರಾಧಿಗೂ ಶಿಕ್ಷೆಯಾಗದಿದ್ದರೂ, ನಿಮ್ಮ ಪೂರ್ವಗ್ರಹಕ್ಕಾಗಿ ದಯವಿಟ್ಟು ಒರ್ವ ನಿರಪರಾಧಿಗೆ ಶಿಕ್ಷೆಯಾಗುವಂತೆ ಮಾಡಬೇಡಿ!

Writer - -ಯಾಸೀನ್ ಕೋಡಿಬೆಂಗ್ರೆ

contributor

Editor - -ಯಾಸೀನ್ ಕೋಡಿಬೆಂಗ್ರೆ

contributor

Similar News