ಭಯೋತ್ಪಾದನೆಯನ್ನು ಅಲ್ಲಗಳೆಯದೆ ಸ್ಪಷ್ಟ ಕ್ರಮ ಕೈಗೊಳ್ಳುವಂತೆ ಪಾಕ್‌ಗೆ ಭಾರತದ ತಾಕೀತು
ಹೊಸದಿಲ್ಲಿ,ಎ.26: ಭಾರತ ಮತ್ತು ಪಾಕಿಸ್ಥಾನದ ವಿದೇಶಾಂಗ ಕಾರ್ಯದರ್ಶಿಗಳು ಮಂಗಳವಾರ ಇಲ್ಲಿ ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಸುಮಾರು 90 ನಿಮಿಷಗಳ ಕಾಲ ನಡೆದ ಭೇಟಿ ಸಂದರ್ಭ ದ್ವಿಪಕ್ಷೀಯ ಸಂಬಂಧದ ಮೇಲೆ ಭಯೋತ್ಪಾದನೆಯು ಪರಿಣಾಮವನ್ನು ಬೀರುತ್ತಿದೆ ಎನ್ನುವುದನ್ನು ನಿರಾಕರಿಸದಂತೆ ಭಾರತವು ಪಾಕ್‌ಗೆ ಸ್ಪಷ್ಟವಾದ ಶಬ್ದಗಳಲ್ಲಿ ತಿಳಿಸಿತು. ಇದೇ ವೇಳೆ ಕಾಶ್ಮೀರ ಕುರಿತಂತೆ ತನ್ನ ಹಳೆಯ ರಾಗವನ್ನೇ ಹಾಡಿದ ಪಾಕಿಸ್ತಾನವು, ಅದು ಪ್ರಮುಖ ವಿಷಯವಾಗಿದೆ ಎಂದು ಹೇಳಿಕೊಂಡಿತು.
ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಐಝಾಝ್ ಅಹ್ಮದ್ ಚೌಧರಿ ಅವರ ನಡುವಿನ ಮಾತುಕತೆಯಲ್ಲಿ ಪಠಾಣಕೋಟ್ ಭಯೋತ್ಪಾದಕ ದಾಳಿ ಕುರಿತು ತನಿಖೆ,26/11ರ ದಾಳಿಯ ವಿಚಾರಣೆ ಮತ್ತು ಸಮರೆತಾ ಎಕ್ಸಪ್ರೆಸ್ ಸ್ಫೋಟ ತನಿಖೆ ಸೇರಿದಂತೆ ಜಟಿಲ ವಿಷಯಗಳು ಪ್ರಸ್ತಾಪಗೊಂಡವು.
ಮುಖ್ಯವಾಗಿ ‘ಹಾರ್ಟ್ ಆಫ್ ಏಷ್ಯಾ’ ಸಮ್ಮೇಳನದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಚೌಧರಿ ಮತ್ತು ಜೈಶಂಕರ ನಡುವಿನ ಈ ಭೇಟಿಯು ಜನವರಿಯಲ್ಲಿ ಪಠಾಣಕೋಟ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ತಮ್ಮ ನಡುವಿನ ನಿಗದಿತ ಮಾತುಕತೆ ಮುಂದೂಡಲ್ಪಟ್ಟ ಬಳಿಕ ಮೊದಲ ವಿಧ್ಯುಕ್ತ ಮಾತುಕತೆಯಾಗಿದೆ.
ಮಾತುಕತೆ ಸಂದರ್ಭ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ ಜಾಧವ ಅವರ ‘ಅಪಹರಣ’ ವಿಷಯವನ್ನು ಪ್ರಸ್ತಾಪಿಸಿದ ಭಾರತವು, ಅವರನ್ನು ಪಾಕಿಸ್ತಾನಕ್ಕೆ ಒಯ್ಯಲಾಗಿದೆ ಎಂದು ಹೇಳಿತಲ್ಲದೆ ಅವರಿಗೆ ತಕ್ಷಣ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿತು. ಜಾಧವ ಅವರನ್ನು ಅಪಹರಿಸಲಾಗಿದೆಯೆಂದು ಭಾರತವು ಇದೇ ಮೊದಲ ಬಾರಿಗೆ ಸ್ಪಷ್ಟವಾಗಿ ಹೇಳಿದೆ.
ಆದರೆ ತನ್ನ ಹೇಳಿಕೆಯಲ್ಲಿ ಪಾಕಿಸ್ತಾನವು ತಾನು ಜಾಧವ ‘ಬಂಧನ’ವನ್ನು ಪ್ರಸ್ತಾಪಿಸಿದ್ದೆ ಎಂದು ತಿಳಿಸಿದೆಯಲ್ಲದೆ,ಬಲೂಚಿಸ್ತಾನ ಮತತ್ತು ಕರಾಚಿಯಲ್ಲಿ ಬುಡಮೇಲು ಕೃತ್ಯಗಳಲ್ಲಿ ರಾ ಕೈವಾಡವಿದೆ ಎಂದು ಆರೋಪಿಸಿ ಕಳವಳ ವ್ಯಕ್ತಪಡಿಸಿದೆ. ಅದರ ಈ ಆರೋಪವನ್ನು ಭಾರತವು ನಿರಾಕರಿಸಿದೆ.
ದ್ವಿಪಕ್ಷೀಯ ಸಂಬಂಧದ ಮೇಲೆ ಭಯೋತ್ಪಾದನೆಯ ಪರಿಣಾಮವನ್ನು ಪಾಕಿಸ್ತಾನವು ನಿರಾಕರಿಸುವಂತಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಆ ರಾಷ್ಟ್ರಕ್ಕೆ ಸ್ಪಷ್ಟವಾಗಿ ತಿಳಿಸಿದರು. ಭಾರತವನ್ನು ತಮ್ಮ ಗುರಿಯಾಗಿಸಿಕೊಂಡಿರುವ ಪಾಕ್‌ನಲ್ಲಿಯ ಭಯೋತ್ಪಾದಕ ಗುಂಪುಗಳು ನಿರ್ಭೀತಿಯಿಂದ ಕಾರ್ಯಾಚರಿಸಲು ಅವಕಾಶ ನೀಡಕೂಡದು ಎಂದು ಅವರು ತಾಕೀತು ಮಾಡಿದರು ಎಂದು ಮಾತುಕತೆಗಳ ಬಳಿಕ ಹೇಳಿಕೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.
ಚೌಧರಿಯವರು ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದರು ಮತ್ತು ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಂತೆ ಮತ್ತು ಕಾಶ್ಮೀರದ ಜನತೆಯ ಬಯಕೆಯಂತೆ ನ್ಯಾಯಯುತ ಪರಿಹಾರವನ್ನು ಕಂಡುಕೊಳ್ಳಬೇಕಾಗಿರುವ ಪ್ರಮುಖ ವಿಷಯವಾಗಿದೆ ಎಂದು ಒತ್ತಿ ಹೇಳಿದರು ಎಂದು ಪಾಕಿಸ್ತಾನವು ಹೇಳಿಕೆಯಲ್ಲಿ ತಿಳಿಸಿದೆ.