×
Ad

ಜೆಕೆಎಲ್‌ಎಫ್ ಸಹಸ್ಥಾಪಕ ಅಮಾನುಲ್ಲಾ ಖಾನ್ ನಿಧನ

Update: 2016-04-26 23:05 IST

ಶ್ರೀನಗರ,ಎ.26: ಜಮ್ಮು-ಕಾಶ್ಮೀರ ವಿಮೋಚನಾ ರಂಗ(ಜೆಕೆಎಲ್‌ಎಫ್)ದ ಸಹಸ್ಥಾಪಕ ಹಾಗೂ ಕಾಶ್ಮೀರದಲ್ಲಿ ಹಿಂಸಾತ್ಮಕ ಪ್ರತ್ಯೇಕತಾವಾದಿ ಆಂದೋಲನದ ಮುಖ್ಯ ರೂವಾರಿ ಅಮಾನುಲ್ಲಾ ಖಾನ್(82) ಮಂಗಳವಾರ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಿಧನ ಹೊಂದಿದ್ದಾನೆ.
ಖಾನ್ ಮೂಲತಃ ಪಾಕ್ ಆಕ್ರಮಿತ ಕಾಶ್ಮೀರದ ಗಿಲ್ಗಿಟ್ ನಿವಾಸಿಯಾಗಿದ್ದು, ಆತನ ಪುತ್ರಿ ಆಸ್ಮಾ ಜಮ್ಮು-ಕಾಶ್ಮೀರದ ಬಿಜೆಪಿ-ಪಿಡಿಪಿ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿರುವ ಕಾಶ್ಮೀರಿ ನಾಯಕ ಸಜ್ಜಾದ್ ಲೋನೆ ಅವರ ಪತ್ನಿಯಾಗಿದ್ದಾರೆ.
ತನ್ನ ಸಚಿವಾಲಯಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್‌ನ್ನು ಭೇಟಿಯಾಗಲು ದಿಲ್ಲಿಯಲ್ಲಿದ್ದ ಲೋನೆ ತನ್ನ ಮಾವನ ಅಂತ್ಯಸಂಸ್ಕಾರಕ್ಕೆ ಪಾಕಿಸ್ತಾನಕ್ಕೆ ತೆರಳದಿರಲು ನಿರ್ಧರಿಸಿದ್ದಾರೆ. ಆದರೆ ಅವರ ಪತ್ನಿ ಆಸ್ಮಾ ಅನಾರೋಗ್ಯ ಪೀಡಿತ ತಂದೆಯನ್ನು ನೋಡಿಕೊಳ್ಳಲು ನಾಲ್ಕು ದಿನಗಳ ಹಿಂದೆಯೇ ಪಾಕ್‌ಗೆ ಪ್ರಯಾಣಿಸಿದ್ದಾರೆ. ಲೋನೆ ಶ್ರೀನಗರಕ್ಕೆ ಮರಳಿದ ಒಂದೆರಡು ದಿನಗಳ ಬಳಿಕ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿದವು.
1940 ಮತ್ತು 50ರ ದಶಕಗಳಲ್ಲಿ ಶ್ರೀನಗರದಲ್ಲಿ ವಿದ್ಯಾಭ್ಯಾಸ ಮಾಡಿದ್ದ ಖಾನ್ 1952ರಲ್ಲಿ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದು, ಅಲ್ಲಿ ಭಾರತದಿಂದ ಜಮ್ಮು-ಕಾಶ್ಮೀರದ ಸ್ವಾತಂತ್ರಕ್ಕಾಗಿ ರಾಜಕೀಯ ಚಳವಳಿಯೊಂದನ್ನು ಆರಂಭಿಸಿದ್ದರು. 1963ರಲ್ಲಿ ಮಕ್ಬೂಲ್ ಭಟ್ ಜೊತೆಗೂಡಿ ಜೆಕೆ ನ್ಯಾಷನಲ್ ಲಿಬರೇಷನ್ ಫ್ರಂಟ್(ಎನ್‌ಎಲ್‌ಎಫ್)ನ್ನು ಸ್ಥಾಪಿಸಿದ್ದರು.
1971ರಲ್ಲಿ ಹಾಶಿಮ್ ಕುರೇಷಿ ಮತ್ತು ಆತನ ಸೋದರ ಸಂಬಂಧಿ ಇಂಡಿಯನ್ ಏರ್‌ಲೈನ್ಸ್‌ನ ವಿಮಾನವನ್ನು ಹೈಜಾಕ್ ಮಾಡಿದಾಗ ಎನ್‌ಎಲ್‌ಎಫ್ ಹೆಸರು ಮುಂಚೂಣಿಗೆ ಬಂದಿತ್ತು ಹಾಗೂ ಖಾನ್ ಮತ್ತು ಆತನ ಗುಂಪು ಪಾಕಿಸ್ತಾನದಲ್ಲಿ ತಲೆಮರೆಸಿಕೊಳ್ಳುವಂತಾಗಿತ್ತು. 1976ರಲ್ಲಿ ಬ್ರಿಟನ್ನಿಗೆ ಸ್ಥಳಾಂತರಗೊಂಡಿದ್ದ ಖಾನ್ 1977,ಮೇ ತಿಂಗಳಿನಲ್ಲಿ ಎನ್‌ಎಲ್‌ಎಫ್‌ನ ಹೆಸರನ್ನು ಜೆಕೆಎಲ್‌ಎಫ್ ಎಂದು ಬದಲಿಸಿ ಹೊಸದಾಗಿ ಸಂಘಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News