ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್ ಆಡಲು ಕಿವೀಸ್ ಒಲವು
ಹ್ಯಾಮಿಲ್ಟನ್, ಎ.26: ಈ ವರ್ಷಾಂತ್ಯದಲ್ಲಿ ಭಾರತಕ್ಕೆ ಪ್ರವಾಸ ಕೈಗೊಳ್ಳಲಿರುವ ನ್ಯೂಝಿಲೆಂಡ್ ಕ್ರಿಕೆಟ್ ತಂಡ ಹಗಲು-ರಾತ್ರಿ ಟೆಸ್ಟ್ ಆಡುವ ಕುರಿತು ಒಲವು ವ್ಯಕ್ತಪಡಿಸಿದೆ.
ಕ್ರಿಕೆಟ್ ಸ್ಟೇಡಿಯಂನತ್ತ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಬಿಸಿಸಿಐ ಭಾರತದಲ್ಲಿ ಮೊತ್ತ ಮೊದಲ ಬಾರಿ ನ್ಯೂಝಿಲೆಂಡ್ ವಿರುದ್ಧ ಪಿಂಕ್ ಚೆಂಡನ್ನು ಬಳಸಿಕೊಂಡು ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಬಗ್ಗೆ ಕಳೆದ ವಾರ ಆಸಕ್ತಿಯನ್ನು ವ್ಯಕ್ತಪಡಿಸಿತ್ತು.
ನ್ಯೂಝಿಲೆಂಡ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡೇವಿಡ್ ವೈಟ್, ಕಳೆದ ವಾರ ದುಬೈನಲ್ಲಿ ನಡೆದಿದ್ದ ಐಸಿಸಿ ಸಭೆಯಲ್ಲಿ ಭಾರತದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದರು.
ಬಿಸಿಸಿಐ ಯೋಚನೆಯನ್ನು ನಾವು ಸ್ವೀಕರಿಸಿದ್ದೇವೆ. ಟ್ರಯಲ್ಸ್ ಕುರಿತು ಭಾರತ ಸಮಾಧಾನ ವ್ಯಕ್ತಪಡಿಸಿದರೆ ನಮ್ಮ ದೃಷ್ಟಿಯಲ್ಲಿ ಅದೊಂದು ಧನಾತ್ಮಕ ಅಂಶವಾಗಲಿದೆ. ಹಗಲು-ರಾತ್ರಿ ಟೆಸ್ಟ್ ಕ್ರಿಕೆಟ್ ಪಂದ್ಯ ಕ್ರಿಕೆಟ್‌ನ ಉಜ್ವಲ ಭವಿಷ್ಯಕ್ಕೆ ಪೂರಕವಾಗಲಿದೆ ಎಂದು ವೈಟ್ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಝಿಲೆಂಡ್ ಹೆರಾಲ್ಡ್ ವರದಿ ಮಾಡಿದೆ.
ಉಭಯ ಕ್ರಿಕೆಟ್ ತಂಡಗಳು ಯೋಜನೆಯಂತೆ ನಡೆದುಕೊಂಡರೆ ಮುಂಬೈನಲ್ಲಿ ಪಂದ್ಯ ನಡೆಯುವ ಸಾಧ್ಯತೆಯಿದೆ. ನ್ಯೂಝಿಲೆಂಡ್ ಭಾರತಕ್ಕೆ ಪ್ರವಾಸ ಕೈಗೊಳ್ಳುವ ಮೊದಲು ದೇಶೀಯ ಪಂದ್ಯದಲ್ಲಿ ಪಿಂಕ್ ಬಾಲ್‌ನ್ನು ಬಳಸಲಿದೆ.