×
Ad

ಪಾಕ್‌ಗೆ ಕಾಶ್ಮೀರಪ್ರಧಾನ ವಿಷಯ ಭಾರತಕ್ಕೆ ಪಾಕ್ ಕಿರಿಕ್

Update: 2016-04-26 23:48 IST

ಭಯೋತ್ಪಾದನೆ ವಿರುದ್ಧ ಸ್ಪಷ್ಟ ಕ್ರಮ ಕೈಗೊಳ್ಳಿ: ಪಾಕ್‌ಗೆ ಭಾರತದ ತಾಕೀತು

ಹೊಸದಿಲ್ಲಿ, ಎ.26: ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಎಜಾಝ್ ಅಹ್ಮದ್ ಚೌಧರಿ ಮಂಗಳವಾರ ತನ್ನ ಭಾರತೀಯ ಸೋದ್ಯೋಗಿ ಎಸ್.ಜೈಶಂಕರ್‌ರೊಂದಿಗೆ ಕಾಶ್ಮೀರ ಸಮಸ್ಯೆಯ ಬಗ್ಗೆ ನೇರವಾಗಿ ಪ್ರಸ್ತಾಪಿಸಿದ್ದಾರೆ. ಅದು ಪಾಕಿಸ್ತಾನಕ್ಕೆ ಪ್ರಧಾನ ವಿಷಯವಾಗಿಯೇ ಉಳಿದಿದೆಯೆಂದು ಅವರು ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನವು ಜಮ್ಮು-ಕಾಶ್ಮೀರ ಸಮಸ್ಯೆಗೆ ಹೊಸ ಒತ್ತು ನೀಡಲು ಇಚ್ಛಿಸಿದೆ. ವಿದೇಶಾಂಗ ಕಾರ್ಯದರ್ಶಿಗಳ ಸಭೆಯು ಮುಕ್ತಾಯಗೊಳ್ಳುವುದಕ್ಕೂ ಮೊದಲೇ, ಕಾಶ್ಮೀರವು ತನ್ನ ಚರ್ಚೆಯ ಪ್ರಧಾನ ವಿಷಯವಾಗಿದೆ ಎಂದು ಇಸ್ಲಾಮಾಬಾದ್ ಘೋಷಿಸಿತ್ತು. ಅದೇ ಮಾದರಿಯಲ್ಲಿ ಪಾಕಿಸ್ತಾನ ತನ್ನ ನಿಲುವನ್ನು ಮುಂದುವರಿಸಿದೆ. ಭಾರತದೊಂದಿಗೆ ಸ್ನೇಹಯುತ ಸಂಬಂಧಕ್ಕೆ ಪಾಕಿಸ್ತಾನ ಬದ್ಧವಾಗಿದೆಯೆಂದು ಚೌಧರಿ ಒತ್ತಿ ಹೇಳಿದರಾದರೂ, ಕಾಶ್ಮೀರ ವಿವಾದಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಪ್ರಕಾರ ನ್ಯಾಯಬದ್ಧವಾದ ಪರಿಹಾರವೊಂದು ಅಗತ್ಯವಾಗಿದೆಯೆಂದು ಸಭೆಯಲ್ಲಿ ಪ್ರತಿಪಾದಿಸಿದರು.

ದ್ವಿಪಕ್ಷೀಯ ವಿಚಾರಗಳಲ್ಲಿ ಇತ್ತೀಚಿನ ಬೆಳವಣಿಗೆಗಳ ಕುರಿತಾಗಿ ಅಭಿಪ್ರಾಯ ವಿನಿಮಯಕ್ಕೆ ಸಭೆಯು ಉಪಯುಕ್ತ ಅವಕಾಶವನ್ನು ಒದಗಿಸಿದೆಯೆಂದು ಅವರು ಹೇಳಿದರು. ಸಭೆಯಲ್ಲಿ ಯಾವ ವಿಚಾರಗಳ ಕುರಿತು ಚರ್ಚಿಸಲಾಯಿತೆಂಬ ಕುರಿತು ಭಾರತವು ಶೀಘ್ರವೇ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ.

ತನ್ನ ಕಾಶ್ಮೀರ ಕಾರ್ಯಸೂಚಿ ದುರ್ಬಲಗೊಂಡಿಲ್ಲವೆಂಬುದನ್ನು ಖಚಿತಪಡಿಸಲು ಪಾಕಿಸ್ತಾನವು ಉನ್ನತ ರಾಜತಂತ್ರಜ್ಞರಿಬ್ಬರೊಳಗಿನ ಈ ಭೇಟಿಯ ಬಗ್ಗೆ ಉತ್ಸುಕವಾಗಿತ್ತು. ಅದರಂತೆಯೇ ಭಾರತವು ದ್ವಿಪಕ್ಷೀಯ ಸಂಬಂಧದಲ್ಲಿ ಭಯೋತ್ಪಾದನೆಯ ಪರಿಣಾಮದ ಕುರಿತು ಮನವರಿಕೆ ಮಾಡಿಸುವುದನ್ನು ಮುಂದುವರಿಸಿದೆ.

ಕಳೆದ ವರ್ಷ ಉಫಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಝ್ ಶರೀಫ್‌ರನಡುವೆ ನಡೆದಿದ್ದ ಸಭೆಯಲ್ಲಿ ಶರೀಫ್ ಕಾಶ್ಮೀರದ ವಿಷಯವನ್ನು ನೇರವಾಗಿ ಎತ್ತಿರಲಿಲ್ಲ. ಸಭೆಯ ಬಳಿಕದ ಜಂಟಿ ಹೇಳಿಕೆಯಲ್ಲೂ ನಿರ್ದಿಷ್ಟವಾಗಿ ಕಾಶ್ಮೀರದ ಕುರಿತು ಉಲ್ಲೇಖಿಸಿರಲಿಲ್ಲ. ಇದು ಪಾಕಿಸ್ತಾನದ ದಂಡನಾಯಕ ರಹೀಲ್ ಶರೀಫ್‌ರ ಅಸಮಾಧಾನಕ್ಕೆ ಕಾರಣವಾಗಿತ್ತು.
‘ಏಶ್ಯ-ಇಸ್ತಾಂಬುಲ್ ಪ್ರಕ್ರಿಯೆಯ ಹೃದಯ’ ಸಮ್ಮೇಳನದ ಪಾರ್ಶ್ವದಲ್ಲಿ ಮಂಗಳವಾರ ಸೌತ್ ಬ್ಲಾಕ್‌ನಲ್ಲಿ ಚೌಧರಿ ಜೈಶಂಕರ್ ಭೇಟಿಯಾಗಿದ್ದರು.
 ಈ ಭೇಟಿಯನ್ನು ವಿದೇಶಾಂಗ ಸಚಿವಾಲಯದ ಅಧಿಕೃತ ಟ್ವಿಟರ್ ಖಚಿತಪಡಿಸಿದೆ.


♦♦♦

ಭಯೋತ್ಪಾದನೆ ವಿರುದ್ಧ ಸ್ಪಷ್ಟ ಕ್ರಮ ಕೈಗೊಳ್ಳಿ: ಪಾಕ್‌ಗೆ ಭಾರತದ ತಾಕೀತು

ಹೊಸದಿಲ್ಲಿ, ಎ.26: ಭಾರತ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿಗಳು ಮಂಗಳವಾರ ಇಲ್ಲಿ ದ್ವಿಪಕ್ಷೀಯ ವಿಷಯಗಳ ಕುರಿತು ಮಾತುಕತೆ ನಡೆಸಿದರು. ಸುಮಾರು 90 ನಿಮಿಷಗಳ ಕಾಲ ನಡೆದ ಭೇಟಿ ಸಂದರ್ಭ ದ್ವಿಪಕ್ಷೀಯ ಸಂಬಂಧದ ಮೇಲೆ ಭಯೋತ್ಪಾದನೆಯು ಪರಿಣಾಮವನ್ನು ಬೀರುತ್ತಿದೆ ಎನ್ನುವುದನ್ನು ನಿರಾಕರಿಸದಂತೆ ಭಾರತವು ಪಾಕ್‌ಗೆ ಸ್ಪಷ್ಟವಾದ ಶಬ್ದಗಳಲ್ಲಿ ತಿಳಿಸಿತು. ಇದೇ ವೇಳೆ ಕಾಶ್ಮೀರ ಕುರಿತಂತೆ ತನ್ನ ಹಳೆಯ ರಾಗವನ್ನೇ ಹಾಡಿದ ಪಾಕಿಸ್ತಾನವು, ಅದು ಪ್ರಮುಖ ವಿಷಯವಾಗಿದೆ ಎಂದು ಹೇಳಿಕೊಂಡಿತು.

 ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಎಜಾಝ್ ಅಹ್ಮದ್ ಚೌಧರಿ ಅವರ ನಡುವಿನ ಮಾತುಕತೆಯಲ್ಲಿ ಪಠಾಣಕೋಟ್ ಭಯೋತ್ಪಾದಕ ದಾಳಿ ಕುರಿತು ತನಿಖೆ, 26/11ರ ದಾಳಿಯ ವಿಚಾರಣೆ ಮತ್ತು ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ತನಿಖೆ ಸೇರಿದಂತೆ ಜಟಿಲ ವಿಷಯಗಳು ಪ್ರಸ್ತಾಪಗೊಂಡವು.

ಮುಖ್ಯವಾಗಿ ‘ಹಾರ್ಟ್ ಆಫ್ ಏಷ್ಯಾ’ ಸಮ್ಮೇಳನದಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿರುವ ಚೌಧರಿ ಮತ್ತು ಜೈಶಂಕರ ನಡುವಿನ ಈ ಭೇಟಿಯು ಜನವರಿಯಲ್ಲಿ ಪಠಾಣಕೋಟ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ತಮ್ಮ ನಡುವಿನ ನಿಗದಿತ ಮಾತುಕತೆ ಮುಂದೂಡಲ್ಪಟ್ಟ ಬಳಿಕ ಮೊದಲ ವಿದ್ಯುಕ್ತ ಮಾತುಕತೆಯಾಗಿದೆ.

ಮಾತುಕತೆ ಸಂದರ್ಭ ಮಾಜಿ ನೌಕಾಪಡೆ ಅಧಿಕಾರಿ ಕುಲಭೂಷಣ ಜಾಧವ ಅವರ ‘ಅಪಹರಣ’ ವಿಷಯವನ್ನು ಪ್ರಸ್ತಾಪಿಸಿದ ಭಾರತವು, ಅವರನ್ನು ಪಾಕಿಸ್ತಾನಕ್ಕೆ ಒಯ್ಯಲಾಗಿದೆ ಎಂದು ಹೇಳಿತಲ್ಲದೆ ಅವರಿಗೆ ತಕ್ಷಣ ರಾಯಭಾರಿ ಕಚೇರಿಯೊಂದಿಗೆ ಸಂಪರ್ಕಕ್ಕೆ ಅವಕಾಶ ನೀಡುವಂತೆ ಆಗ್ರಹಿಸಿತು. ಜಾಧವ ಅವರನ್ನು ಅಪಹರಿಸಲಾಗಿದೆಯೆಂದು ಭಾರತವು ಇದೇ ಮೊದಲ ಬಾರಿಗೆ ಸ್ಪಷ್ಟವಾಗಿ ಹೇಳಿದೆ.

ಆದರೆ ತನ್ನ ಹೇಳಿಕೆಯಲ್ಲಿ ಪಾಕಿಸ್ತಾನವು ತಾನು ಜಾಧವ್ ‘ಬಂಧನ’ವನ್ನು ಪ್ರಸ್ತಾಪಿಸಿದ್ದೆ ಎಂದು ತಿಳಿಸಿದೆಯಲ್ಲದೆ, ಬಲೂಚಿಸ್ತಾನ ಮತ್ತು ಕರಾಚಿಯಲ್ಲಿ ಬುಡಮೇಲು ಕೃತ್ಯಗಳಲ್ಲಿ ರಾ ಕೈವಾಡವಿದೆ ಎಂದು ಆರೋಪಿಸಿ ಕಳವಳ ವ್ಯಕ್ತಪಡಿಸಿದೆ. ಅದರ ಈ ಆರೋಪವನ್ನು ಭಾರತವು ನಿರಾಕರಿಸಿದೆ.

 ದ್ವಿಪಕ್ಷೀಯ ಸಂಬಂಧದ ಮೇಲೆ ಭಯೋತ್ಪಾದನೆಯ ಪರಿಣಾಮವನ್ನು ಪಾಕಿಸ್ತಾನವು ನಿರಾಕರಿಸುವಂತಿಲ್ಲ ಎಂದು ವಿದೇಶಾಂಗ ಕಾರ್ಯದರ್ಶಿ ಎಸ್.ಜೈಶಂಕರ್ ಅವರು ಆ ರಾಷ್ಟ್ರಕ್ಕೆ ಸ್ಪಷ್ಟವಾಗಿ ತಿಳಿಸಿದರು. ಭಾರತವನ್ನು ತಮ್ಮ ಗುರಿಯಾಗಿಸಿಕೊಂಡಿರುವ ಪಾಕ್‌ನಲ್ಲಿಯ ಭಯೋತ್ಪಾದಕ ಗುಂಪುಗಳು ನಿರ್ಭೀತಿಯಿಂದ ಕಾರ್ಯಾಚರಿಸಲು ಅವಕಾಶ ನೀಡಕೂಡದು ಎಂದು ಅವರು ತಾಕೀತು ಮಾಡಿದರು ಎಂದು ಮಾತುಕತೆಗಳ ಬಳಿಕ ಹೇಳಿಕೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿಳಿಸಿದೆ.

ಚೌಧರಿಯವರು ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸಿದರು ಮತ್ತು ಅದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಂತೆ ಮತ್ತು ಕಾಶ್ಮೀರದ ಜನತೆಯ ಬಯಕೆಯಂತೆ ನ್ಯಾಯಯುತ ಪರಿಹಾರವನ್ನು ಕಂಡುಕೊಳ್ಳಬೇಕಾಗಿರುವ ಪ್ರಮುಖ ವಿಷಯವಾಗಿದೆ ಎಂದು ಒತ್ತಿ ಹೇಳಿದರು ಎಂದು ಪಾಕಿಸ್ತಾನವು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News