ಒಲಿಂಪಿಕ್ಸ್‌ಗೆ ಜೊತೆಯಾಗಲಿರುವ ಪೇಸ್-ಭೂಪತಿ?
ಹೊಸದಿಲ್ಲಿ, ಎ.26: ಪರಸ್ಪರ ಮುನಿಸಿಕೊಂಡು ದೂರವಾಗಿದ್ದ ಭಾರತದ ಅತ್ಯಂತ ಯಶಸ್ವಿ ಪುರುಷರ ಡಬಲ್ಸ್ ಟೆನಿಸ್ ಜೋಡಿ ಲಿಯಾಂಡರ್ ಪೇಸ್ ಹಾಗೂ ಮಹೇಶ್ ಭೂಪತಿ ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ಮತ್ತೊಮ್ಮೆ ಜೊತೆಯಾಗಿ ಆಡುವ ಸಾಧ್ಯತೆಯಿದೆ.
ಕೆಲವೇ ದಿನಗಳ ಹಿಂದೆ ಮುಂಬೈನಲ್ಲಿ ಭೇಟಿಯಾಗಿರುವ ಈ ಇಬ್ಬರು ಆಟಗಾರರು ಒಲಿಂಪಿಕ್ಸ್‌ನಲ್ಲಿ ಒಟ್ಟಿಗೆ ಆಡುವ ಕುರಿತಂತೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಈ ಇಬ್ಬರು ಭಿನ್ನಾಭಿಪ್ರಾಯವನ್ನು ಬದಿಗೊತ್ತಿ ಆಡಿದರೆ ಅದೊಂದು ಸ್ವಾಗತಾರ್ಹ ಬೆಳವಣಿಗೆಯಾಗಲಿದೆ. ಈ ಇಬ್ಬರು ಆಟಗಾರರ ನಡುವಿನ ವೈಮನಸ್ಸಿಗೆ ತೆರೆ ಬೀಳಲಿದೆ.
17 ಬಾರಿ ಗ್ರಾನ್‌ಸ್ಲಾಮ್ ಚಾಂಪಿಯನ ಆಗಿರುವ, 1996ರಲ್ಲಿ ಅಟ್ಲೆಂಟಾ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿರುವ ಪೇಸ್ ಏಳನೆ ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲಿರುವ ಭಾರತದ ಮೊದಲ ಆಟಗಾರ ನೆಂಬ ಕೀರ್ತಿಗೆ ಭಾಜನರಾಗಲು ಎದುರು ನೋಡುತ್ತಿದ್ದಾರೆ.
ಮತ್ತೊಂದೆಡೆ, ಮಹೇಶ್ ಭೂಪತಿ 2013ರ ನಂತರ ಹೆಚ್ಚು ಸ್ಪರ್ಧಾತ್ಮಕ ಟೆನಿಸ್‌ನಲ್ಲಿ ಕಾಣಿಸಿಕೊಂಡಿಲ್ಲ. ‘ಇಂಡಿಯನ್ ಎಕ್ಸ್‌ಪ್ರೆಸ್’ ಖ್ಯಾತಿಯ ಪೇಸ್-ಭೂಪತಿ 303-103 ಗೆಲುವು-ಸೋಲು ದಾಖಲೆ ಹೊಂದಿದ್ದಾರೆ. ಡೇವಿಸ್ ಕಪ್‌ನಲ್ಲಿ ಸತತ 23 ಪಂದ್ಯಗಳನ್ನು ಜಯಿಸಿ ಹೊಸ ದಾಖಲೆ ಬರೆದಿದ್ದರು.
2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಭೂಪತಿ ಹಾಗೂ ರೋಹನ್ ಬೋಪಣ್ಣ ಅವರು ಪೇಸ್‌ರೊಂದಿಗೆ ಡಬಲ್ಸ್ ಪಂದ್ಯ ಆಡಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಪೇಸ್ ಅವರು ವಿಷ್ಣುವರ್ಧನ ಅವರೊಂದಿಗೆ ಲಂಡನ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.
ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಝಾ ರಿಯೋ ಗೇಮ್ಸ್‌ನಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿದ್ದಾರೆ. ಪ್ರಸ್ತುತ ಪುರುಷರ ಡಬಲ್ಸ್‌ನಲ್ಲಿ 11ನೆ ಸ್ಥಾನದಲ್ಲಿರುವ ರೋಹನ್ ಬೋಪಣ್ಣ ರ್ಯಾಂಕಿಂಗ್‌ನಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದರೆ ರಿಯೋ ಗೇಮ್ಸ್‌ಗೆ ತೇರ್ಗಡೆಯಾಗುತ್ತಾರೆ.