ಇರಾಕ್ ಯುದ್ಧ ತಪ್ಪು, ಸದ್ದಾಮ್ ನಿಂದ ಅಮೆರಿಕಕ್ಕೆ ಅಪಾಯವಿರಲಿಲ್ಲ: ಒಪ್ಪಿಕೊಂಡ ಮಾಜಿ ರಕ್ಷಣಾ ಸಚಿವ ಚಕ್ ಹಗೆಲ್
ಅಬುಧಾಬಿ, ಎ. 27 : ಅಮೆರಿಕ 2003ರಲ್ಲಿ ಇರಾಕ್ ವಿರುದ್ಧ ಯುದ್ಧ ಮಾಡಿದ್ದು ಒಂದು ತಪ್ಪು ನಿರ್ಧಾರವಾಗಿತ್ತು ಹಾಗೂ 2006ರಲ್ಲಿ ಗಲ್ಲಿಗೇರಿಸಲ್ಪಟ್ಟ ಸದ್ದಾಂ ಹುಸೇನ್ ನಿಂದ ತಮ್ಮ ದೇಶಕ್ಕೆ ಯಾವುದೇ ದೊಡ್ಡ ಅಪಾಯವಿರಲಿಲ್ಲ ಎಂಬುದನ್ನು ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಚಕ್ ಹಗೆಲ್ ಹೇಳಿದ್ದಾರೆ.
ಅಬು ಧಾಬಿಯಲ್ಲಿ ಭಾಷಣ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಗೆಲ್ ಇರಾಕ್ ಮೇಲೆ ನಡೆದ ಯುದ್ಧದ ಬಗೆಗಿನ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ‘‘ನಾವು ಆ ಯುದ್ಧವನ್ನು ಮಾಡುವ ಅಗತ್ಯವಿರಲಿಲ್ಲ,’’ಎಂದರು.
‘‘ಸದ್ದಾಂಗೆ ಅದಾಗಲೇ ಉತ್ತರ ಇರಾಕ್- ಖರ್ಡಿಸ್ಥಾನ್ ಹಾಗೂ ದಕ್ಷಿಣ ಇರಾಕ್ ನ 20% ಪ್ರದೇಶಗಳ ಮೇಲೆ ಹಿಡಿತವಿರಲಿಲ್ಲ,’’ಎಂದು ಹೇಳಿದ ಹಗೆಲ್, ಈ ಯುದ್ಧದಿಂದ ಸಿರಿಯಾ, ಲಿಬಿಯಾ ದೇಶಗಳು ಪಂಥೀಯ ಹಿಂಸೆಯಿಂದ ಅಸ್ಥಿರತೆಯ ಸಮಸ್ಯೆ ಎದುರಿಸುವಂತಾಯಿತು. ಮೇಲಾಗಿ ಆಂತರಿಕ ಯುದ್ಧಗಳು, ಆರ್ಥಿಕ ಕುಸಿತ ಹಾಗೂ ಉಗ್ರ ಸಂಘಟನೆಗಳ ಬೆಳವಣಿಗೆಗೆ ಅದು ಹೇತುವಾಯಿತು,’’ಎಂದವರು ಹೇಳಿದರು.
‘ದೇಶವೊಂದರ ಮೇಲೆ ಪ್ರಜಾಪ್ರಭುತ್ವವನ್ನು ಹೇರುವುದು ಕೆಲವೊಮ್ಮೆ ವಿನಾಶಕಾರಿಯಾಗಬಹುದು. ಇರಾಕ್ ಸಮಸ್ಯೆಗಳಿಗೆ ನಾನು ಅಮೆರಿಕ ದೇಶವನ್ನು ಮಾತ್ರ ದೂಷಿಸುತ್ತಿಲ್ಲ. ಅದಕ್ಕೆ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಆಯಾಮಗಳೂ ಇವೆ,’’ಎಂದರು.
‘‘2003ರ ಆಕ್ರಮಣ ದೇಶದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ,’’ಎಂದವರು ಅಭಿಪ್ರಾಯ ಪಟ್ಟರು. ‘‘ಇರಾಕ್ ಜನರು ಪ್ರಜಾಪ್ರಭುತ್ವದತ್ತ ತನ್ನಿಂತಾನಾಗಿಯೇ ಬರುವರು.ನಾವು ಮಾನವ ಹಕ್ಕುಗಳು ಹಾಗೂ ಪ್ರಜಾತಾಂತ್ರಿಕ ಮೌಲ್ಯಗಳನ್ನು ಉತ್ತೇಜಿಸಬಹುದು ಆದರೆ ಅವುಗಳನ್ನು ಬಲವಂತವಾಗಿ ಹೇರಲು ಸಾಧ್ಯವಿಲ್ಲ,’’ಎಂದವರು ತಿಳಿಸಿದರು.