×
Ad

ಮಕ್ಕಾ, ಮದೀನದಲ್ಲಿ ಸೌದಿಯೇತರರಿಗೆ ಸೊತ್ತಿನ ಮಾಲಕತ್ವವಿಲ್ಲ ಶೂರ ನಿರ್ಧಾರದಲ್ಲಿ ಬದಲಾವಣೆಯಿಲ್ಲ

Update: 2016-04-27 17:44 IST

ರಿಯಾದ್, ಎ. 27: ಮಕ್ಕಾ ಮತ್ತು ಮದೀನಗಳಲ್ಲಿ ಸೌದಿಯೇತರರು ಆಸ್ತಿ ಹೊಂದುವಂತಿಲ್ಲ ಹಾಗೂ ಹೂಡಿಕೆ ಮಾಡುವಂತಿಲ್ಲ ಎಂಬ ತನ್ನ ಹಿಂದಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ಶೂರ ಮಂಡಳಿ ಸೋಮವಾರ ನಿರ್ಧರಿಸಿದೆ.

ಶೂರ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಅದರ ಅಧ್ಯಕ್ಷ ಶೇಖ್ ಅಬ್ದುಲ್ಲಾ ಅಲ್-ಅಶೇಖ್ ವಹಿಸಿದರು ಎಂದು ಸೌದಿ ಪ್ರೆಸ್ ಏಜನ್ಸಿ ವರದಿ ಮಾಡಿದೆ. ಮಂಡಳಿಯ ಆರ್ಥಿಕ ಮತ್ತು ಇಂಧನ ಸಮಿತಿಯ ಅಧ್ಯಕ್ಷ ಅಬ್ದುರಹ್ಮಾನ್ ಅಲ್-ರಶೀದ್ ಮಂಡಿಸಿದ ವರದಿಯನ್ನು ಸಭೆ ಆಲಿಸಿತು. ಆಸ್ತಿ ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ಸೌದಿಯೇತರ ಮಾಲೀಕತ್ವ ಕಾನೂನಿನ 5ನೆ ವಿಧಿಯಲ್ಲಿರುವ ‘‘ಸೌದಿಯೇತರ’’ ಪದವನ್ನು ನಿರೂಪಿಸಬೇಕು ಎನ್ನುವ ಪ್ರಸ್ತಾಪ ವರದಿಯಲ್ಲಿತ್ತು ಎಂದು ಮಂಡಳಿಯ ಸಹಾಯಕ ಅಧ್ಯಕ್ಷ ಯಾಹ್ಯಾ ಅಲ್-ಸಮಾನ್ ತಿಳಿಸಿದರು.

ಶೂರ ಕಾನೂನಿನ 17ನೆ ವಿಧಿಗೆ ಅನುಗುಣವಾಗಿ ಮಂಡಳಿಯು ಪ್ರಸ್ತಾಪವನ್ನು ಪರಿಶೀಲಿಸಿತು ಎಂದು ಅಲ್-ಸಮಾನ್ ಹೇಳಿದರು. ಈ ಪದದ ವ್ಯಾಖ್ಯೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧವಾಗಲು ಸಭೆ ನಿರ್ಧರಿಸಿತು. ಈ ನಿರ್ಧಾರದ ಪ್ರಕಾರ, ಸೌದಿ ಪೌರತ್ವ ಹೊಂದಿರದವರು ‘‘ಸೌದಿಯೇತರ’’ರಾಗುತ್ತಾರೆ. ಸೌದಿಯೇತರ ಕಂಪೆನಿಗಳು ಹಾಗೂ ಸೌದಿಯೇತರರು ಸ್ಥಾಪಿಸಿದ ಅಥವಾ ಸ್ಥಾಪನೆಯಲ್ಲಿ ಪಾಲ್ಗೊಂಡ ಅಥವಾ ಸೌದಿಯೇತರರು ಶೇರುಗಳನ್ನು ಹೊಂದಿರುವ ಸೌದಿ ಕಂಪೆನಿಗಳನ್ನು ‘ಸೌದಿಯೇತರ’ ಎಂಬುದಾಗಿ ಪರಿಗಣಿಸಲಾಗುವುದು ಎಂದರು. ಸೌದಿಯೇತರರಿಗೆ ಪಿತ್ರಾರ್ಜಿತವಾಗಿ ಬಂದಿದ್ದರೆ ಮಾತ್ರ ಆಸ್ತಿಯನ್ನು ಹೊಂದಬಹುದು ಎಂದು ಕಾನೂನಿನ 5ನೆ ವಿಧಿ ಹೇಳುತ್ತದೆ. ಆದಾಗ್ಯೂ, ಸೌದಿಯೇತರರು ಮಕ್ಕಾ ಮತ್ತು ಮದೀನಗಳಲ್ಲಿ ಎರಡು ವರ್ಷಗಳ ಅವಧಿಗೆ ಆಸ್ತಿಗಳನ್ನು ಲೀಸ್‌ನಲ್ಲಿ ಪಡೆಯಬಹುದು ಹಾಗೂ ಅದನ್ನು ಇಷ್ಟೇ ಅವಧಿಗೆ ನವೀಕರಿಸುತ್ತಾ ಹೋಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News