×
Ad

ಸಂಸದೀಯ ಸಮಿತಿಯೆದುರು ಸಾಧ್ವಿ ಉದ್ಧಟತನ, ಕ್ಷಮೆಯಾಚನೆಗೆ ನಿರಾಕರಣೆ

Update: 2016-04-27 23:47 IST

ಹೊಸದಿಲ್ಲಿ, ಎ.27: ರಾಜ್ಯಸಭೆಯ ಹಕ್ಕುಗಳ ಸಮಿತಿಯೆದುರು ಬುಧವಾರ ಹಾಜರಾದ ವಿಹಿಂಪ ನಾಯಕಿ ಸಾಧ್ವಿ ಪ್ರಾಚಿ ಅವರು ಉದ್ಧಟತನ ಪ್ರದರ್ಶಿಸಿದರಲ್ಲದೆ, ಸಂಸತ್ತಿನಲ್ಲಿ ಭಯೋತ್ಪಾದಕರಿದ್ದಾರೆ ಎಂದು ತಾನು ನೀಡಿದ್ದ ವಿವಾದಾತ್ಮಕ ಹೇಳಿಕೆಗಳಿಗೆ ಅಂಟಿಕೊಂಡರು. ಸಮಿತಿಯಲ್ಲಿನ ಪ್ರತಿಪಕ್ಷ ಸದಸ್ಯರು ಬೇಷರತ್ ಕ್ಷಮೆ ಯಾಚಿಸುವಂತೆ ಅವರಿಗೆ ಸೂಚಿಸಿದ್ದರು.
 ಸಾಧ್ವಿ ಹೇಳಿಕೆಗಳಿಗಾಗಿ ಮಳೆಗಾಲದ ಅಧಿವೇಶನದ ಸಂದರ್ಭ ಅವರ ವಿರುದ್ಧ ಪ್ರತಿಪಕ್ಷ ಸಂಸದರು ಸಲ್ಲಿಸಿದ್ದ ದೂರನ್ನು ಪಿ.ಜೆ.ಕುರಿಯನ್ ನೇತೃತ್ವದ ಸಮಿತಿಯು ಪರಿಶೀಲಿಸುತ್ತಿದೆ. ಸಮಿತಿಯು ಬುಧವಾರ ಅವರನ್ನು ತನ್ನೆದುರು ಕರೆಸಿಕೊಂಡಿತ್ತು.
ಸಭೆಯಿಂದ ಹೊರಗೆ ಬಂದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾಧ್ವಿ,ನಾನು ಈ ದೇಶದ ಮಗಳು. ನಾನು ನನ್ನ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಕ್ಷಮೆ ಯಾಚಿಸುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ. ಅವರು(ಸಮಿತಿ ಸದಸ್ಯರು) ನನ್ನ ಮೇಲೆ ವಾಗ್ದಾಳಿ ನಡೆಸಿದರು. ನನಗೂ ಮಾತನಾಡುವ ಹಕ್ಕು ಇದೆಯೆಂದು ನಾನು ಅವರಿಗೆ ತಿಳಿಸಿದೆ ಎಂದರು.
ಸಮಿತಿಯ ಅಧ್ಯಕ್ಷರು ಕ್ಷಮೆ ಯಾಚಿಸುವಂತೆ ಸಾಧ್ವಿಯವರಿಗೆ ಪದೇಪದೇ ಸೂಚಿಸಿದರು. ಆದರೆ ಅವರು ‘ಶರತ್ತುಬದ್ಧ ಕ್ಷಮೆಯಾಚನೆ’ಯ ಬಗ್ಗೆಯೇ ಮಾತನಾಡುತ್ತಿದ್ದರು. ಆದರೆ ಸಮಿತಿಯು ಬೇಷರತ್ ಕ್ಷಮೆಯಾಚನೆಗೆ ಪಟ್ಟು ಹಿಡಿದಿತ್ತು ಎಂದು ಮೂಲಗಳು ತಿಳಿಸಿದವು.
ರೂರ್ಕಿಯಲ್ಲಿ ಬಹಿರಂಗ ಸಭೆಯೊಂದರಲ್ಲಿ ಮಾತನಾಡಿದ್ದ ಸಾಧ್ವಿ, 1993ರ ಮುಂಬೈ ಸರಣಿಸ್ಫೋಟದ ದೋಷಿ ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸುವುದನ್ನು ವಿರೋಧಿಸಿದವರನ್ನು ತರಾಟೆಗೆತ್ತಿಕೊಂಡಿದ್ದರು.
 ಭಾರತೀಯ ಸಂಸತ್ತಿನಲ್ಲಿ ಒಂದಿಬ್ಬರು ಭಯೋತ್ಪಾದಕರಿದ್ದಾರೆ ಎನ್ನುವುದು ಬಹು ದೊಡ್ಡ ದುರದೃಷ್ಟವಾಗಿದೆ. ಯಾಕೂಬ್ ಭಯೋತ್ಪಾದಕ ಎಂದು ಘೋಷಿಸಿದ್ದ ನ್ಯಾಯಾಲಯದ ತೀರ್ಪಿಗೆ ಅವರು ಗೌರವ ನೀಡುತ್ತಿಲ್ಲ. ಭಾರತದ ಪಾಲಿಗೆ ಇದಕ್ಕಿಂತ ದೊಡ್ಡ ದುರದೃಷ್ಟ ಇನ್ನೊಂದಿಲ್ಲ ಎಂದು ಯಾಕೂಬ್‌ಗೆ ಗಲ್ಲನ್ನು ವಿರೋಧಿಸಿದ್ದ ಸಂಸದರನ್ನು ಪ್ರಸ್ತಾಪಿಸಿ ಅವರು ಹೇಳಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News