×
Ad

ಉಸಾಮ ಹತ್ಯೆಯಾದ ಅಮೆರಿಕದ ದಾಳಿ ಪಾಕ್‌ಗೆ ತಿಳಿದಿತ್ತು: ಅಮೆರಿಕದ ಪತ್ರಕರ್ತ

Update: 2016-04-28 19:20 IST

ಇಸ್ಲಾಮಾಬಾದ್, ಎ. 28: ಅಲ್-ಖಾಯಿದ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಉಸಾಮ ಬಿನ್ ಲಾದನ್ ಮೇಲೆ ಅಮೆರಿಕ ನಡೆಸಿದ ದಾಳಿಯ ಬಗ್ಗೆ ತನಗೆ ಮಾಹಿತಿಯಿರಲಿಲ್ಲ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಅಮೆರಿಕದ ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ. ಉಸಾಮ ಹಲವು ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಬಂಧನದಲ್ಲಿದ್ದನು ಹಾಗೂ ಆ ದೇಶವು ಅಮೆರಿಕದೊಂದಿಗೆ ಒಡಂಬಡಿಕೆಯೊಂದಕ್ಕೆ ಬಂದ ಬಳಿಕ ಆತನನ್ನು ಹತ್ಯೆ ಮಾಡಲಾಯಿತು ಎಂದು ಅಮೆರಿಕದ ಪ್ರಸಿದ್ಧ ತನಿಖಾ ಪತ್ರಕರ್ತ ಸೈಮೂರ್ ಹರ್ಶ್ ಹೇಳಿಕೊಂಡಿದ್ದಾರೆ.

2011ರಲ್ಲಿ ಅಬೊಟಾಬಾದ್ ಪಟ್ಟಣದಲ್ಲಿ ಪಾಕಿಸ್ತಾನ ಸೇನೆಯ ಸುಸಜ್ಜಿತ ತರಬೇತಿ ಶಾಲೆಯ ಸಮೀಪದಲ್ಲಿರುವ ಲಾದನ್‌ನ ಮನೆಯ ಮೇಲೆ ಅಮೆರಿಕದ ನೇವಿ ಸೀಲ್‌ಗಳು ನಡೆಸಿದ ದಾಳಿಯ ಬಗ್ಗೆ ಪಾಕಿಸ್ತಾನಕ್ಕೆ ಗೊತ್ತಿತ್ತು ಎಂದು ಅವರು ಹೇಳಿದ್ದಾರೆ. ಈ ದಾಳಿಯಲ್ಲಿ ಉಸಾಮ ಮೃತಪಟ್ಟಿದ್ದನು.

ಬಿನ್ ಲಾದನ್ ಸ್ಥಾಪಿಸಿದ ಅಲ್ ಖಾಯಿದ ಭಯೋತ್ಪಾದಕ ಗುಂಪು 2001 ಸೆಪ್ಟಂಬರ್ 11ರಂದು ಅಮೆರಿಕದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಲಾದನ್‌ನ ಹತ್ಯೆ ಬಗ್ಗೆ ಅಮೆರಿಕ ನೀಡಿರುವ ಅಧಿಕೃತ ಹೇಳಿಕೆ ಸುಳ್ಳು ಎಂಬುದಾಗಿ ತಾನು ನಂಬಿದ್ದೆ; ಈ ನಂಬಿಕೆಯನ್ನು ಗಟ್ಟಿಗೊಳಿಸುವ ನೂತನ ಪುರಾವೆಯನ್ನು ತಾನು ಕಳೆದ ವರ್ಷ ನೋಡಿದೆ ಎಂದು ಪಾಕಿಸ್ತಾನದ ಸುದ್ದಿ ಚಾನೆಲ್ ‘ಡಾನ್’ಗೆ ನೀಡಿದ ಸಂದರ್ಶನವೊಂದರಲ್ಲಿ ಹರ್ಶ್ ಹೇಳಿದರು. ಪಾಕಿಸ್ತಾನ 2006ರಲ್ಲಿ ಉಸಾಮನನ್ನು ಬಂಧಿಸಿತ್ತು ಹಾಗೂ ಸೌದಿ ಅರೇಬಿಯದ ಬೆಂಬಲದೊಂದಿಗೆ ಆತನನ್ನು ಕೈದಿಯಾಗಿ ಇರಿಸಿಕೊಂಡಿತ್ತು ಎಂಬ ತನ್ನ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು. 

‘‘ಬಳಿಕ ಅಮೆರಿಕ ಮತ್ತು ಪಾಕಿಸ್ತಾನಗಳು ಒಪ್ಪಂದವೊಂದಕ್ಕೆ ಬಂದವು. ಅದರ ಪ್ರಕಾರ, ಅಮೆರಿಕವು ಉಸಾಮನ ಅಡಗುದಾಣದ ಮೇಲೆ ದಾಳಿ ನಡೆಸುತ್ತದೆ, ಆದರೆ ಇದು ಪಾಕಿಸ್ತಾನಕ್ಕೆ ಗೊತ್ತಿರಲಿಲ್ಲ ಎಂಬುದಾಗಿ ಬಿಂಬಿಸಲಾಗುತ್ತದೆ’’ ಎಂದರು.

‘‘ಭಾರತದ ಕಾರಣದಿಂದಾಗಿ ಪಾಕಿಸ್ತಾನ ನಿರಂತರ ಎಚ್ಚರಿಕೆಯಲ್ಲಿರುತ್ತದೆ. ಅದರ ರಾಡಾರ್‌ಗಳು ಗಮನಿಸುತ್ತಾ ಇರುತ್ತವೆ ಹಾಗೂ ಅದರ ಎಫ್-16 ವಿಮಾನಗಳು ಪ್ರತಿ ಕ್ಷಣವೂ ಸಿದ್ಧವಾಗಿರುತ್ತದೆ. ಹಾಗಾಗಿ ಪಾಕಿಸ್ತಾನಿಗಳ ಗಮನಕ್ಕೆ ಬಾರದೆ ಅಮೆರಿಕದ ಹೆಲಿಕಾಪ್ಟರ್‌ಗಳು ಆ ದೇಶ ಪ್ರವೇಶಿಸಲು ಸಾಧ್ಯವಿಲ್ಲ’’ ಎಂದು ಹರ್ಶ್ ಹೇಳುತ್ತಾರೆ.

ಸೇನೆ ಮತ್ತು ಐಎಸ್‌ಐ ಮುಖ್ಯಸ್ಥರು ಅಮೆರಿಕನ್ನರೊಂದಿಗೆ ಈ ಒಪ್ಪಂದ ಮಾಡಿಕೊಂಡರು. ಇದು ಅಂದಿನ ಪಾಕಿಸ್ತಾನ ವಾಯುಪಡೆಯ ಮುಖ್ಯಸ್ಥರನ್ನು ಕೆರಳಿಸಿತು. ಅವರು ಈ ವ್ಯವಹಾರವನ್ನು ಬಹಿರಂಗಪಡಿಸಲು ತಯಾರಿದ್ದರು. ಅವರ ಬಾಯಿ ಮುಚ್ಚಿಸಲು ನಿವೃತ್ತಿಯ ಬಳಿಕ ಅವರನ್ನು ಪಿಐಎ ಅಧ್ಯಕ್ಷರನ್ನಾಗಿ ಮಾಡಲಾಯಿತು ಎಂದು ಹರ್ಶ್ ಹೇಳಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News