‘‘ಅಸ್ಥಿರ’’ ಪಾಕಿಸ್ತಾನವನ್ನು ನಿಭಾಯಿಸಲು ಭಾರತದ ಸಹಾಯ ಪಡೆಯುವೆ: ಟ್ರಂಪ್
ವಾಶಿಂಗ್ಟನ್, ಎ. 28: ‘‘ಅರೆ-ಅಸ್ಥಿರ’’ಗೊಂಡಿರುವ ಪರಮಾಣು ಶಕ್ತ ಪಾಕಿಸ್ತಾನದ ‘‘ಸಮಸ್ಯೆ’’ಯನ್ನು ಪರಿಹರಿಸಲು ಭಾರತ ಮತ್ತು ಇತರ ದೇಶಗಳ ಸಹಾಯವನ್ನು ಕೋರುವ ಇಂಗಿತವನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಮುಂಚೂಣಿ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.
ಇಂಡಿಯಾನಪೊಲೀಸ್ ಟೌನ್‌ಹಾಲ್‌ನಲ್ಲಿ ಬುಧವಾರ ನಡೆದ ಪ್ರಚಾರ ಸಭೆಯ ವೇಳೆ ಅವರು ಈ ಮಾತುಗಳನ್ನು ಹೇಳಿದರು. ಅಮೆರಿಕದೊಂದಿಗೆ ಕೆಲವು ಸಲ ಎರಡು ರೀತಿಯಲ್ಲಿ ವರ್ತಿಸುವ ಪಾಕಿಸ್ತಾನದಂಥ ದೇಶಗಳೊಂದಿಗೆ ನೀವು ಹೇಗೆ ವ್ಯವಹರಿಸುತ್ತೀರಿ ಎಂಬ ಪ್ರಶ್ನೆಯೊಂದಕ್ಕೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.
‘‘ನಾವು ಅವರಿಗೆ (ಪಾಕಿಸ್ತಾನ) ಹಣ ಕೊಟ್ಟಿದ್ದೇವೆ. ಆದರೆ, ಅವರು ಅಮೆರಿಕದೊಂದಿಗೆ ಎರಡು ರೀತಿಯಲ್ಲಿ ವ್ಯವಹರಿಸುತ್ತಿದ್ದಾರೆ’’ ಎಂದು ಪ್ರಶ್ನೆ ಕೇಳಿದವರು ಹೇಳಿದರು.
‘‘ಹೌದು, ಆದರೆ ಪಾಕಿಸ್ತಾನದೊಂದಿಗಿನ ಸಮಸ್ಯೆಯೇನೆಂದರೆ, ಅವರು ಪರಮಾಣು ಅಸ್ತ್ರಗಳನ್ನು ಹೊಂದಿದ್ದಾರೆ. ಅದೊಂದು ದೊಡ್ಡ ಸಮಸ್ಯೆಯಾಗಿದೆ’’ ಎಂದು ಟ್ರಂಪ್ ಹೇಳಿದರು.
‘‘ನಮ್ಮ ಒಂದೇ ಒಂದು ದೊಡ್ಡ ಸಮಸ್ಯೆಯೆಂದರೆ ಈ ದೇಶಗಳು ಪರಮಾಣು ಅಸ್ತ್ರಗಳನ್ನು ಹೊಂದಿರುವುದು. ಅದು ಒಂದೇ ಅಲ್ಲ, ಪರಮಾಣು ಅಸ್ತ್ರಗಳನ್ನು ಹೊಂದಿದ 9 ದೇಶಗಳಿವೆ’’ ಎಂದರು.
‘‘ಆದರೆ, ಪಾಕಿಸ್ತಾನ ಅರೆ ಅಸ್ಥಿರ ದೇಶ. ಅದನ್ನು ಸಂಪೂರ್ಣ ಅಸ್ಥಿರ ದೇಶವನ್ನಾಗಿ ನೋಡಲು ನಾವು ಬಯಸುವುದಿಲ್ಲ. ಅದರೊಂದಿಗೆ ನಮಗೆ ಕೊಂಚ ಉತ್ತಮ ಸಂಬಂಧವಿದೆ. ಅದನ್ನು ಉಳಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ’’ ಎಂದು ಟ್ರಂಪ್ ನುಡಿದರು.
‘‘ನಾವು ಅವರಿಗೆ ಹಣ ನೀಡುತ್ತೇವೆ ಹಾಗೂ ಸಹಾಯ ಮಾಡುತ್ತೇವೆ. ನಾವು ಹೀಗೆ ಮಾಡದಿದ್ದರೆ ಅದು ಇನ್ನೊಂದು ಕಡೆಗೆ ವಾಲುತ್ತದೆ ಹಾಗೂ ಅದು ಅಪಾಯಕಾರಿಯಾಗಿರಬಹುದಾಗಿದೆ’’ ಎಂದರು.
‘‘ಅದೇ ವೇಳೆ, ಭಾರತ ಮತ್ತು ಇತರ ದೇಶಗಳನ್ನು ಗಣನೆಗೆ ತೆಗೆದುಕೊಂಡರೆ, ಅವುಗಳು ನಮಗೆ ಸಹಾಯ ಮಾಡಬಹುದಾಗಿದೆ. ನಾವು ತುಂಬಾ ದೇಶಗಳಿಗೆ ತುಂಬಾ ಹಣ ಕೊಡುತ್ತೇವೆ, ಆದರೆ, ನಮಗೆ ಅದಕ್ಕೆ ಪ್ರತಿಯಾಗಿ ಏನೂ ಸಿಗುವುದಿಲ್ಲ. ಇದಕ್ಕೆ ಶೀಘ್ರದಲ್ಲೇ ಕಡಿವಾಣ ಬೀಳಲಿದೆ’’ ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಹೇಳಿದರು.