ರೋಗ ನಿರೋಧಕ ಔಷಧಿ ‘ಒಂದೆಲಗ’ : ಉಪಯೋಗ ರಹಿತವಾಗುತ್ತಿದೆ ಈ ಹಳ್ಳಿ ಔಷಧಿ
ಪುತ್ತೂರು: ಹಳ್ಳಿ ಔಷಧಿಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿರುವ ‘ಒಂದೆಲಗ’ ಮಾನವನ ದೇಹಕ್ಕೆ ಬೇಕಾಗಿರುವ ಎಲ್ಲಾ ರೀತಿಯ ರೋಗನಿರೋಧಕ ಶಕ್ತಿಯನ್ನು ನೀಡುವ ಏಕೈಕ ಔಷಧಿಯಾಗಿದೆ. ಅಡಿಕೆತೋಟ, ಗದ್ದೆಗಳ ಬದಿಯಲ್ಲಿ ಕಂಡು ಬರುವ ಈ ಒಂದೆಲಗ ಗಿಡವನ್ನು ತುಳುವರು ‘ತಿಮರೆ’ ಎನ್ನುತ್ತಾರೆ. ತಿಮರೆ ಕುರಿತು ಅರಿಯದ ಹಳ್ಳಿಗರು ಯಾರೂ ಇಲ್ಲ. ಕನ್ನಡದಲ್ಲಿ ಒಂದೆಲಗ ಎಂಬ ಹೆಸರಿನಲ್ಲಿ ಕರೆಯಲ್ಪಡುವ ಈ ಗಿಡದ ಬೇರು , ಎಲೆ, ಬಳ್ಳಿ ಎಲ್ಲದರಲ್ಲೂ ಔಷಧೀಯ ಗುಣವೇ ತುಂಬಿಕೊಂಡಿದೆ. ಆದರೆ ಆಧುನಿಕ ಆಹಾರ ಪದ್ದತಿಗೆ ಒಗ್ಗಿಕೊಂಡಿರುವ ಬಹುತೇಕರು ಒಂದೆಲಗ ಉಪಯೋಗ ಮಾಡುವುದು ಕಡಿಮೆಯಾಗಿದೆ.
ಸುಡು ಬೇಸಿಗೆಯಲ್ಲಿ ಹಳ್ಳಿಗೆ ಹೋದರೆ ಮಧ್ಯಾಹ್ನ ಊಟಕ್ಕೆ ತಿಮರೆ ಚಟ್ನಿ ಇದ್ದೇ ಇರುತ್ತದೆ. ತೋಟ ಹಾಗೂ ಗದ್ದೆ ಬದಿಗಳಲ್ಲಿ ಹೆಚ್ಚಾಗಿ ದೊರೆಯುವ ಈ ಸಂಜೀವಿನಿ ಎಂದರೆ ಹಳ್ಳಿಯ ಹಿರಿಯ ಜೀವಗಳಿಗೆ ಅಷ್ಟೊಂದು ಪ್ರೀತಿ. ಬೇರಿನಿಂದ ಬಳ್ಳಿಯವರೆಗೂ ಔಷಧೀಯ ಭಂಡಾರವನ್ನೇ ಹೊತ್ತುಕೊಂಡಿರುವುದು ತಿಮರೆಯ ಶಕ್ತಿ. ಇಷ್ಟೊಂದು ಔಷದೀಯ ಗುಣವನ್ನು ಹೊಂದಿರುವ ತಿಮರೆ ಇಂದು ನಮಗೆ ಬೇಡವಾಗಿದೆ. ಯಾಕೆಂದರೆ ನಮಗೆ ಅದೆಲ್ಲವನ್ನೂ ತಿನ್ನುವ ಆಸಕ್ತಿ ಇಲ್ಲದಾಗಿದೆ. ಏನಿದ್ದರೂ ಅಂಗಡಿಯಲ್ಲಿ ಸಿಗುವ ರೆಡಿಮೇಡ್ ಆಹಾರವೇ ಇಷ್ಟವಾಗಿ, ನಮ್ಮ ದೇಹವನ್ನೂ ಅದಕ್ಕೆ ಸಿದ್ದಗೊಳಿಸಿದ್ದೇವೆ.
ಹಿರಿಯರು ಹೇಳಿದ ಪ್ರಯೋಜನಗಳು:
ಒಂದೆಲಗವನ್ನು ನಿತ್ಯವೂ ಸೇವಿಸುವುದರಿಂದ ಬುದ್ದಿ ಶಕ್ತಿ ಅಥವಾ ನೆನಪಿನ ಶಕ್ತಿ ವೃದ್ದಿಸುತ್ತದೆ. ಮಕ್ಕಳಿಗೆ ಇದರ ಸೊಪ್ಪನ್ನು ದಿನಕ್ಕೆ ಒಂದರಂತೆ ತಿಂದರೆ ಬುದ್ದಿ ಮತ್ತು ಸ್ಮರಣೆ ಶಕ್ತಿ ಅಕವಾಗುತ್ತದೆ. ಎಳೆಯ ಮಕ್ಕಳಿಗೆ ಇದರ ಬೇರನ್ನು ಅರೆದುಕುಡಿಸುವುದರಿಂದ ಜೀರ್ಣ ಶಕ್ತಿ ಉಂಟಾಗುತ್ತದೆ. ಚಟ್ನಿ ಮಾಡಿ ಸೇವಿಸುವುದರಿಂದ ದೇಹಕ್ಕೆ ತಂಪು ನೀಡುತ್ತದೆ. ಒಂದೆಲಗದ ಎಲೆಯನ್ನು ನಿತ್ಯವೂ ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ದಿಸಲು ಸಾಧ್ಯವಾಗುತ್ತದೆ.
ನೀವೂ ಬೆಳೆಯಬಹುದು
ತೋಟ ಮತ್ತು ಗದ್ದೆಗಳಲ್ಲಿ ಹೆಚ್ಚಾಗಿ ಬೆಳೆಯುವ ಗಿಡವನ್ನು ಮನೆ ಅಂಗಲದಲ್ಲಿಯೂ ಬೆಳೆಯಬಹುದು. ಹೂವಿನ ಚಟ್ಟಿಯಲ್ಲಿಯೂ ಬೆಳಸಬಹುದಾಗಿದೆ. ಒಂದು ಗಿಡಿವನ್ನು ನಾಟಿ ಮಾಡಿದರೆ ಒಂದೆರಡು ತಿಂಗಳಲ್ಲಿ ಸೊಂಪಾಗಿ ಬೆಳೆಯುತ್ತದೆ. ಗಿಡಕ್ಕೆ ಯಾವುದೇ ಕೊಳಚೆ ನೀರನ್ನು ಹಾಕದೆ ಶುದ್ದ ನೀರನ್ನು ಮಾತ್ರ ಬಳಸಬೇಕು.
ಭಿನ್ನ ಹೆಸರುಗಳು; ಸಂಸ್ಕೃತದಲ್ಲಿ ಬ್ರಾಹ್ಮಿ ಎಂದು ಕರೆದರೆ ಕನ್ನಡದಲ್ಲಿ ಒಂದೆಲಗ ಮತ್ತು ತುಳುವಿನಲ್ಲಿ ತಿಮರೆ ಎಂದು ಕರೆಯುವ ಗಿಡ ಅವಿಭಜಿತ ದ.ಕ. ಜಿಲ್ಲೆಯಲ್ಲಿ ತಿಮರೆ ಎಂದೇ ಹೆಸರುವಾಸಿ.
ನಾಶವಾಗಿದೆ: ತೋಟದಲ್ಲಿ ಬೆಳೆಯುವ ಕಳೆಯನ್ನು ನಾಶ ಮಾಡಲು ಯಂತ್ರಗಳ ಬಳಕೆ ಪ್ರಾರಂಭವಾದಾಗಿನಿಂದ ಒಂದೆಲಗವೂ ನಾಶವಾಗಲಾರಂಭಿಸಿದೆ. ಇದೀಗ ಕೆಲವು ತೋಟಗಳಲ್ಲಿ ಮಾತ್ರ ಕಾಣಸಿಗುತ್ತಿದೆ.
ಒಂದೆಲಗ ಹಿಂದಿನ ಕಾಲದಲ್ಲಿ ಸಾಧಾರಣವಾಗಿ ಎಲ್ಲಾ ಮನೆಗಳಲ್ಲಿಯೂ ಉಪಯೋಗಿಸುತ್ತಿದ್ದರು. ಆದರೆ ಈಗ ಜನ ಇ ಔ ಷೀಯ ಗಿಡವನ್ನು ಮರೆಯುತ್ತಿದ್ದಾರೆ. ಮೆಡಿಕಲ್ ಶಾಫ್‌ಗಳಲ್ಲಿ ಬ್ರಾಹ್ಮೀ ಫೌಡರ್, ಮತ್ತು ಲೇಹಗಳು ದೊರೆಯುವ ಕಾರಣ ಜನರು ನೈಸರ್ಗಿಕವಾಗಿ ದೊರೆಯುವ ಗಿಡವನ್ನು ಬಳಸುವುದನ್ನು ಕಡಿಮೆ ಮಾಡುತ್ತಿದ್ದಾರೆ. ಒಂದೆಲಗವನ್ನು ನಿತ್ಯವೂ ಬಳಸುವುದರಿಂದ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಹಲವಾರು ನಾಟಿ ಔಷಗಳಲ್ಲಿ ಒಂದೆಲಗವನ್ನು ಬಳಸಲಾಗುತ್ತದೆ.
ಡಾ. ಬಾಲಕೃಷ್ಣ ಡೆಚ್ಚಾರ್, ನಾಟಿ ವೈದ್ಯರು ಪುತ್ತೂರು.