ಪುಣೆ ಮತ್ತೊಂದು ಆಘಾತ: ಪ್ಲೆಸಿಸ್ ಟೂರ್ನಿಯಿಂದ ಔಟ್
ಪುಣೆ, ಎ.28: ಐಪಿಎಲ್‌ನ ಹೊಸ ಫ್ರಾಂಚೈಸಿ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಮತ್ತೊಮ್ಮೆ ತೀವ್ರ ಹಿನ್ನಡೆ ಅನುಭವಿಸಿದೆ. ದಕ್ಷಿಣ ಆಫ್ರಿಕದ ಟ್ವೆಂಟಿ-20 ತಂಡದ ನಾಯಕ ಎಫ್‌ಡು ಪ್ಲೆಸಿಸ್ ಬೆರಳುನೋವಿನಿಂದಾಗಿ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರ ಗುಳಿದಿದ್ದಾರೆ.
ಟೂರ್ನಿಯ ಮೊದಲ 3 ಪಂದ್ಯಗಳ ಪೈಕಿ ಎರಡು ಪಂದ್ಯಗಳಲ್ಲಿ ಅರ್ಧಶತಕವನ್ನು ಬಾರಿಸಿದ್ದ ಪ್ಲೆಸಿಸ್ ಪುಣೆಯ ಬ್ಯಾಟಿಂಗ್‌ಗೆ ಆಸರೆಯಾಗಿದ್ದರು. 31ರಹರೆಯದ ಪ್ಲೆಸಿಸ್ ಐಪಿಎಲ್ ಹರಾಜಿಗೆ ಮೊದಲು ನಡೆದ ಡ್ರಾಫ್ಟ್ ಸಿಸ್ಟಮ್‌ನಲ್ಲಿ ಪುಣೆಯಿಂದ ಆಯ್ಕೆಯಾದ ಐವರು ಆಟಗಾರರ ಪೈಕಿ ಓರ್ವರಾಗಿದ್ದಾರೆ.
ಪುಣೆ ಈಗಾಗಲೇ ಕೇವಿನ್ ಪೀಟರ್ಸನ್ ಸೇವೆಯಿಂದ ವಂಚಿತವಾಗಿದೆ. ಪೀಟರ್ಸನ್ ಟೂರ್ನಿಯ ವೇಳೆಯೇ ಗಾಯದ ಸಮಸ್ಯೆಗೆ ಸಿಲುಕಿದ್ದರು. ಇದೀಗ ಪ್ಲೆಸಿಸ್ ಗಾಯಗೊಂಡು ಟೂರ್ನಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ನಾಯಕ ಎಂಎಸ್ ಧೋನಿ ಹಾಗೂ ಕೋಚ್ ಸ್ಟೀಫನ್ ಫ್ಲೆಮಿಂಗ್‌ಗೆ ತಂಡದ ಆಯ್ಕೆಯಲ್ಲಿ ಗೊಂದಲ ಉಂಟಾಗಿದೆ.
ಪೀಟರ್ಸನ್ ಬದಲಿಗೆ ಆಟಗಾರರನ್ನು ಇನ್ನೂ ಆಯ್ಕೆ ಮಾಡದ ಪುಣೆ ತಂಡಕ್ಕೆ ಮತ್ತೋರ್ವ ಆಟಗಾರ ಗಾಯಗೊಂಡಿರುವುದು ಸಂಕಷ್ಟಕ್ಕೆ ಸಿಲುಕಿಸಿದೆ.