ಪುಣೆಗೆ ಇಂದು ಬಲಿಷ್ಠ ಗುಜರಾತ್ ಲಯನ್ಸ್ ಎದುರಾಳಿ
ಪುಣೆ, ಎ.28: ಮಳೆ ಬಾಧಿತ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಗೆಲುವು ಸಾಧಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ರೈಸಿಂಗ್ ಪುಣೆ ಸೂಪರ್ ಜಯಂಟ್ಸ್ ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಗುಜರಾತ್ ಲಯನ್ಸ್ ತಂಡದ ವಿರುದ್ಧ ಕಠಿಣ ಸವಾಲು ಎದುರಿಸಲಿದೆ.
ಟೂರ್ನಿಯಲ್ಲಿ ಆಡಿದ ತನ್ನ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಜಯ ಸಾಧಿಸಿ ಶುಭಾರಂಭ ಮಾಡಿದ್ದ ಪುಣೆ ಆ ಬಳಿಕ ಆಡಿರುವ ಸತತ ನಾಲ್ಕು ಪಂದ್ಯಗಳಲ್ಲೂ ಸೋತಿತ್ತು.
ಕಳೆದ ಮಂಗಳವಾರ ನಡೆದ ಪಂದ್ಯದಲ್ಲ್ಲಿ ಹೈದರಾಬಾದ್‌ನ ವಿರುದ್ಧ ಡಕ್‌ವರ್ತ್-ಲೂಯಿಸ್ ನಿಯಮದ ಪ್ರಕಾರ 34 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಈ ವರ್ಷದ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‌ನಲ್ಲಿರುವ ಸುರೇಶ್ ರೈನಾ ನಾಯಕತ್ವದ ಗುಜರಾತ್ ಲಯನ್ಸ್ ತಂಡ ಆರು ಪಂದ್ಯಗಳಲ್ಲಿ ಐದನೆ ಜಯ ಸಾಧಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ. ಗುಜರಾತ್ ತಂಡ ಹೈದರಾಬಾದ್ ತಂಡವನ್ನು ಹೊರತುಪಡಿಸಿ ಉಳಿದೆಲ್ಲಾ ತಂಡವನ್ನು ಸದೆ ಬಡಿದಿದೆ.
ರಾಜ್‌ಕೋಟ್‌ನಲ್ಲಿ ನಡೆದ ಪಂದ್ಯದಲ್ಲಿ ಲಯನ್ಸ್ ತಂಡ ಪುಣೆಯನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿತ್ತು. ಇದೀಗ ಪುಣೆ ತಂಡಕ್ಕೆ ತನ್ನ ತವರು ಮೈದಾನದಲ್ಲಿ ಲಯನ್ಸ್ ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶ ಲಭ್ಯವಾಗಿದೆ. ಲಯನ್ಸ್ ತಂಡಕ್ಕೆ ಆ್ಯರೊನ್ ಫಿಂಚ್, ಬ್ರೆಂಡನ್ ಮೆಕಲಮ್ ಹಾಗೂ ನಾಯಕ ಸುರೇಶ್ ರೈನಾ ಆಸರೆಯಾಗುತ್ತಾ ಬಂದಿದ್ದಾರೆ.
ಫಿಂಚ್ ಇದೀಗ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಫಿಂಚ್ ಬದಲಿಗೆ ಲಯನ್ಸ್ ಇನಿಂಗ್ಸ್ ಆರಂಭಿಸುತ್ತಿರುವ ಡ್ವೇಯ್ನಿ ಸ್ಮಿತ್ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ 30 ಎಸೆತಗಳಲ್ಲಿ 52 ರನ್ ಗಳಿಸಿದ್ದರು.
ಬೌಲರ್‌ಗಳ ಪೈಕಿ ವೇಗಿದ್ವಯರಾದ ಡ್ವೇಯ್ನ ಬ್ರಾವೊ ಹಾಗೂ ಧವಳ್ ಕುಲಕರ್ಣಿ ಕ್ರಮವಾಗಿ ಏಳು ಹಾಗು ಆರು ವಿಕೆಟ್‌ಗಳನ್ನು ಉರುಳಿಸಿ ಲಯನ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಸ್ಪಿನ್‌ದ್ವಯರಾದ ಪ್ರವೀಣ್ ತಾಂಬೆ ಹಾಗೂ ರವೀಂದ್ರ ಜಡೇಜ ಕ್ರಮವಾಗಿ 5 ಹಾಗೂ 4 ವಿಕೆಟ್‌ಗಳನ್ನು ಪಡೆದಿದ್ದಾರೆ.
ಪುಣೆ ತಂಡದಲ್ಲಿ ಆರಂಭಿಕ ಜೋಡಿಗಳಾದ ಅಜಿಂಕ್ಯ ರಹಾನೆ(223) ಹಾಗೂ ಎಫ್‌ಡು ಪ್ಲೆಸಿಸ್(206) ಅಗ್ರ ಸ್ಕೋರರ್‌ಗಳಾಗಿದ್ದಾರೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಪುಣೆ ತಂಡ ದೊಡ್ಡ ಸ್ಕೋರನ್ನು ಬೆನ್ನಟ್ಟಬೇಕಾದರೆ ಅಥವಾ ಎದುರಾಳಿ ತಂಡದ ಗರಿಷ್ಠ ಸವಾಲು ವಿಧಿಸಬೇಕಾದರೆ ಸ್ಟೀವನ್ ಸ್ಮಿತ್ ಹಾಗೂ ಎಂಎಸ್ ಧೋನಿ ಸಿಡಿದೇಳಬೇಕಾಗಿದೆ.
ಹೈದರಾಬಾದ್ ವಿರುದ್ಧ ಆಡಿರುವ ಏಕೈಕ ಪಂದ್ಯದಲ್ಲಿ 3 ವಿಕೆಟ್‌ಗಳನ್ನು ಬಾಚಿಕೊಂಡಿರುವ ಪಶ್ಚಿಮ ಬಂಗಾಳದ ವೇಗದ ಬೌಲರ್ ಅಶೋಕ್ ದಿಂಡಾ ಅವರ ಮೇಲೆ ಎಲ್ಲ ಚಿತ್ತವಿದೆ. ಭಾರತದ ಅಗ್ರ ಸ್ಪಿನ್ನರ್ ಆರ್.ಅಶ್ವಿನ್ ಟೂರ್ನಿಯಲ್ಲಿ ಈ ತನಕ ಎದುರಾಳಿ ದಾಂಡಿಗರಿಗೆ ಸವಾಲಾಗಿಲ್ಲ. ಸ್ಪಿನ್ನರ್‌ಗಳಾದ ಎಂ.ಅಶ್ವಿನ್ ಹಾಗೂ ತಿಸ್ಸಾರ ಪೆರೇರಾ ಕ್ರಮವಾಗಿ 7 ಹಾಗೂ 6 ವಿಕೆಟ್‌ಗಳನ್ನು ಗಳಿಸಿದ್ದಾರೆ.
ಪಂದ್ಯದ ಸಮಯ: ರಾತ್ರಿ 8:00