ಶೌಚಾಲಯ, ರೈತರ ಸೆಸ್ ಕೊಳೆಯುತ್ತಿದೆ 1.3 ಲಕ್ಷ ಕೋಟಿ ರೂ.!
ದೇಶಾದ್ಯಂತ ರೆಸ್ಟೋರೆಂಟ್, ಟೆಲಿಫೋನ್ ಹಾಗೂ ಕ್ಲಬ್ ಬಿಲ್ಲುಗಳಲ್ಲಿ ಎಸ್‌ಬಿಸಿ ಎಂಬ ಉಲ್ಲೇಖವನ್ನು ನೀವು ಗಮನಿಸಿರಬಹುದು. ಅದು ಸ್ವಚ್ಛಭಾರತ ಸೆಸ್ ಎನ್ನುವುದರ ಸಂಕ್ಷಿಪ್ತ ರೂಪ. ನೇರವಾಗಿ ಕೇಂದ್ರದ ಬೊಕ್ಕಸ ಸೇರುವ ಹತ್ತು ಸೆಸ್‌ಗಳ ಪೈಕಿ ಇದು ಕೂಡಾ ಒಂದು. 2016-17ನೆ ಸಾಲಿನ ಅಂತ್ಯದ ವೇಳೆಗೆ ಈ ವಿಶೇಷ ಸುಂಕದ ನಿಧಿ 1.65 ಲಕ್ಷ ಕೋಟಿ ರೂ.ಗೆ ಬೆಳೆಯುವ ನಿರೀಕ್ಷೆ ಇದೆ.
2015-16ನೆ ಸಾಲಿನಲ್ಲಿ ಸಂಗ್ರಹವಾದ ಮೊತ್ತಕ್ಕಿಂತ ಇದು ಶೇ.22ರಷ್ಟು ಅಧಿಕ ಹಾಗೂ 2014-15ನೆ ಸಾಲಿನಲ್ಲಿ ಸಂಗ್ರಹವಾದ 83 ಸಾವಿರ ಕೋಟಿ ರೂ. ಸೆಸ್‌ನ ದುಪ್ಪಟ್ಟು ಪ್ರಮಾಣದ್ದು ಎನ್ನುವುದು ಬಜೆಟ್ ವಿಶ್ಲೇಷಣೆಯಿಂದ ತಿಳಿದುಬರುತ್ತದೆ.
ಇಂತಹ ವಿಶೇಷ ತೆರಿಗೆಗಳ ಬಳಕೆ ಬಗ್ಗೆ ಇದೀಗ ಎಚ್ಚರಿಕೆ ಗಂಟೆ ಮೊಳಗಿದೆ. ಕಳೆದ ದಶಕದಲ್ಲಿ ಸಂಗ್ರಹವಾದ ಕನಿಷ್ಠ 1.3 ಲಕ್ಷ ಕೋಟಿ ರೂ. ಅಥವಾ ಒಟ್ಟು ಸಂಗ್ರಹವಾದ ಸೆಸ್‌ನ ಶೇ.41ರಷ್ಟು ಪಾಲು ಬಳಕೆಯಾಗದೇ ಕೊಳೆಯುತ್ತಿವೆ ಎಂಬ ಅಂಶವನ್ನು ಸರಕಾರಿ ಲೆಕ್ಕಪರಿಶೋಧಕರು ಬಹಿರಂಗಪಡಿಸಿದ್ದಾರೆ.
2015-16ನೆ ಸಾಲಿನಲ್ಲಿ 18 ಲಕ್ಷ ಕೋಟಿ ರೂ. ಇದ್ದ ತೆರಿಗೆ ಆದಾಯ ಶೇ.8.7ರಷ್ಟು ಪ್ರಗತಿ ಕಂಡು ಪ್ರಸಕ್ತ ಹಣಕಾಸು ವರ್ಷದ ಕೊನೆಗೆ 19.6 ಲಕ್ಷ ಕೋಟಿ ರೂ.ಗೆ ಹೆಚ್ಚುವ ನಿರೀಕ್ಷೆಯಿದೆ. ಅದರಂತೆ ಸೆಸ್ ಸಂಗ್ರಹ ಕೂಡಾ ವೇಗವಾಗಿ ವೃದ್ಧಿಯಾಗಲಿದೆ.
ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷಿ ಯೋಜನೆಗೆ ಹಣ ಒದಗಿಸುವ ಸಲುವಾಗಿ ವಿಧಿಸಿದ ಸ್ವಚ್ಛಭಾರತ ಸೆಸ್ ಹೊರತಾಗಿ, ಇದೇ ಬಗೆಯ ಶಿಕ್ಷಣ, ಪರಿಸರ, ಕೃಷಿ, ಮೂಲಸೌಕರ್ಯ, ನೈರ್ಮಲ್ಯ ಹಾಗೂ ಸಂವಹನ ಕ್ಷೇತ್ರದ ಪ್ರತ್ಯೇಕ ವಿಶೇಷ ತೆರಿಗೆಗಳೂ ಚಾಲ್ತಿಯಲ್ಲಿವೆ.
ಹೆಚ್ಚುತ್ತಿದೆ ಸೆಸ್
ತೆರಿಗೆ ಸಂಗ್ರಹದಲ್ಲಿ ರಾಜ್ಯಗಳು ಹೆಚ್ಚಿನ ಪಾಲು ಪಡೆದಷ್ಟೂ, ಕೇಂದ್ರ ಸರಕಾರ ರಾಜ್ಯದೊಂದಿಗೆ ಹಂಚಿಕೊಳ್ಳದ ಸೆಸ್ ಏರಿಸುತ್ತಲೇ ಹೋಗುತ್ತದೆ. 14ನೆ ಹಣಕಾಸು ಆಯೋಗ ಕೇಂದ್ರದ ತೆರಿಗೆ ಆದಾಯದ ಶೇ.42ರಷ್ಟನ್ನು ರಾಜ್ಯಗಳಿಗೆ ವರ್ಗಾಯಿಸುವಂತೆ ಶಿಫಾರಸು ಮಾಡಿದೆ. ಈ ಮುನ್ನ ಅದು ಶೇ.32ರಷ್ಟಿತ್ತು. ಇದನ್ನು ಸರಿದೂಗಿಸಿಕೊಳ್ಳಲು ಕೇಂದ್ರ ಸರಕಾರ ಸೆಸ್ ಹೆಚ್ಚಿಸಿದೆ. ಈ ಸೆಸ್ ಆದಾಯವನ್ನು ಕೇಂದ್ರ ಸರಕಾರ ರಾಜ್ಯಗಳ ಜತೆ ಹಂಚಿಕೊಳ್ಳಬೇಕಾಗಿಲ್ಲ.
ರಾಜ್ಯಗಳಿಗೆ ಹೆಚ್ಚು ಹಣ ನೀಡಿದಾಗ, ಕೇಂದ್ರ ಸರಕಾರಕ್ಕೆ ಆದಾಯದ ಕೊರತೆ ಕಾಡುತ್ತದೆ. ನಿರ್ದಿಷ್ಟ ಉದ್ದೇಶದ ಯೋಜನೆಗಳಿಗೆ ಹಣ ಒದಗಿಸಲು ತೆರಿಗೆ ಸಾಧನಗಳಾದ ವಿಶೇಷ ತೆರಿಗೆ ವಿಧಿಸುವ ಮೂಲಕ ಈ ಕೊರತೆ ನೀಗಿಸಿಕೊಳ್ಳುತ್ತದೆ ಎಂದು ಕ್ರಿಸೆಲ್ ರೇಟಿಂಗ್ ಏಜೆನ್ಸಿಯ ಮುಖ್ಯ ಅರ್ಥಶಾಸ್ತ್ರಜ್ಞರಾದ ಧರ್ಮಕೃತಿ ಜೋಶಿ ಹೇಳುತ್ತಾರೆ. ಈ ವಿಶೇಷ ತೆರಿಗೆಗೆ ಯಾವ ವಿಶೇಷ ಕಾನೂನು ಅಥವಾ ಕಾಯ್ದೆ ಬೇಕಾಗಿಲ್ಲ. ಸಂಸತ್ತಿನ ಅನುಮೋದನೆಯೂ ಬೇಡ. ಇದು ಹಣಕಾಸು ಮಸೂದೆಯಲ್ಲೇ ಒಳಗೊಂಡಿರುತ್ತದೆ. ಅಂದರೆ ಬಜೆಟ್‌ನಲ್ಲಿ ಸೇರಿರುತ್ತದೆ. ರಸ್ತೆ ಹಾಗೂ ನೈರ್ಮಲ್ಯಕ್ಕೆ ವಿಧಿಸಿದ ಸೆಸ್ ಪ್ರಯೋಜನಕಾರಿಯಾದರೂ ಮಾಧ್ಯಮಿಕ ಶಿಕ್ಷಣ, ದೂರಸಂಪರ್ಕ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಸೆಸ್‌ಗಳು ಫಲ ನೀಡಲಿಲ್ಲ.
2015-16ರಲ್ಲಿ 73 ಸಾವಿರ ಕೋಟಿ ರೂ. ದಾಖಲೆ ಪ್ರಮಾಣದ ರಸ್ತೆ ಸುಂಕ ಸಂಗ್ರಹವಾಯಿತು. ಇದು 2014-15ರಲ್ಲಿ ಸಂಗ್ರಹವಾದ 25121 ಕೋಟಿ ರೂ.ಗೆ ಹೋಲಿಸಿದರೆ, ಶೇ. 190ರಷ್ಟು ಅಧಿಕ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಶೇ.75ರಷ್ಟು ಇಳಿದ ಕಾರಣದಿಂದ ರಸ್ತೆ ಸುಂಕವನ್ನು ಮೂರು ಪಟ್ಟು ಅಧಿಕಗೊಳಿಸಲಾಯಿತು. ಇದರಿಂದ ಬಂದ ಲಾಭವನ್ನು ಸರಕಾರ ಆದಾಯ ಕೊರತೆ ಸಮಸ್ಯೆ ಬಗೆಹರಿಸಿಕೊಳ್ಳಲು ಬಳಕೆ ಮಾಡಿಕೊಂಡಿತು.
2016-17ನೆ ಸಾಲಿನಲ್ಲಿ ರಸ್ತೆ ಸುಂಕ 78 ಸಾವಿರ ಕೋಟಿಗೆ ಹೆಚ್ಚಲಿದೆ. ಜಾಗತಿಕ ತೈಲ ಬೆಲೆಯಲ್ಲಿ ಮತ್ತಷ್ಟು ಕುಸಿತ ಸಾಧ್ಯತೆ ಇಲ್ಲದ ಕಾರಣ ಈ ಪ್ರಗತಿ ಅಲ್ಪಪ್ರಮಾಣಕ್ಕೆ ಸೀಮಿತವಾಗಲಿದೆ. ಆದರೆ ಈ ಅವಧಿಯಲ್ಲಿ ರಸ್ತೆ ಹಾಗೂ ಸೇತುವೆ ಅನುದಾನ ಮೂರು ಪಟ್ಟು ಹೆಚ್ಚಿದೆ. 2014-15ರಲ್ಲಿ 34 ಸಾವಿರ ಕೋಟಿ ರೂ. ಇದ್ದ ಅನುದಾನ, 2016-17ರ ಬಜೆಟ್‌ನಲ್ಲಿ ಒಂದು ಲಕ್ಷ ಕೋಟಿಗೆ ಹೆಚ್ಚುವ ನಿರೀಕ್ಷೆ ಇದೆ.
ಸೆಸ್ ಬಳಕೆ ಅಕ್ರಮ
ಕಳೆದ ಎರಡು ದಶಕಗಳಲ್ಲಿ ನಾಲ್ಕು ಸೆಸ್‌ಗಳಿಂದ ಸಂಗ್ರಹಿಸಲಾದ 3.1 ಲಕ್ಷ ಕೋಟಿ ರೂ.ಗಳ ಪೈಕಿ ಶೇ.41ರಷ್ಟು ಮಾತ್ರ ನಿಗದಿತ ಉದ್ದೇಶಕ್ಕೆ ಬಳಕೆಯಾಗಿದೆ ಎಂದು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಅವರ ವರದಿ ಸ್ಪಷ್ಟಪಡಿಸಿದೆ. ಈ ಬಗ್ಗೆ ಸರಕಾರದ ನಿರ್ಲಕ್ಷ್ಯವನ್ನು ಸಿಎಜಿ ಕಟುವಾಗಿ ಟೀಕಿಸಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಅವಧಿಯಲ್ಲೂ ಈ ಹಣ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ಸಿಎಜಿ ವರದಿ ಹೇಳಿದೆ.
ಸಂಶೋಧನೆ ಹಾಗೂ ಅಭಿವೃದ್ಧಿ ಸುಂಕವಾಗಿ ಸಂಗ್ರಹಿಸಿದ 5700 ಕೋಟಿ ರೂ.ಗಳಲ್ಲಿ, 1228 ಕೋಟಿ ರೂ. ಅಥವಾ ಶೇಕಡ 21ರಷ್ಟು ಹಣ ಮಾತ್ರ1996-97ರಿಂದ 2014-15ರವರೆಗಿನ 18 ವರ್ಷಗಳ ಅವಧಿಯಲ್ಲಿ ಬಳಕೆಯಾಗಿದೆ. ಹಣಕಾಸು ಮಸೂದೆಯಲ್ಲಿ ಹೇಳಿದ್ದ ನಿಗದಿತ ಉದ್ದೇಶದಿಂದ ಈ ಹಣ ಬೇರೆ ಉದ್ದೇಶಗಳಿಗೆ ವಿಮುಖವಾಗಿರುವ ಸಾಧ್ಯತೆ ಇದೆ ಎಂದು ಸಿಎಜಿ ವರದಿ ಹೇಳಿದೆ.
ಕಳೆದ ಬಜೆಟ್ ಕೂಡಾ ಸೇವಾ ತೆರಿಗೆಯನ್ನು ಶೇಕಡ 14.5ರಿಂದ ಶೇಕಡ 15ಕ್ಕೆ ಹೆಚ್ಚಿಸಿದೆ. ಕೆಲ ಆಯ್ದ ಸೇವೆಗಳ ಮೇಲೆ ಶೇ.0.5ರಷ್ಟು ಕೃಷಿ ಕಲ್ಯಾಣ ಸೆಸ್ ವಿಧಿಸಿದೆ. ಈ ಹಣವನ್ನು ಕೃಷಿ ಕ್ಷೇತ್ರಕ್ಕೆ ವಿನಿಯೋಗಿಸಲಾಗುತ್ತದೆ ಎನ್ನುವುದು ಸರಕಾರದ ಸಮರ್ಥನೆ.
ಈ ಸೆಸ್ ಬಳಕೆ ತಾತ್ಕಾಲಿಕವಾಗಿದ್ದು, ನಿರ್ದಿಷ್ಟ ಉದ್ದೇಶಗಳಿಗಷ್ಠೆ ಬಳಕೆಯಾಗಬೇಕು. ಇದು ತೆರಿಗೆ ಮಾದರಿಯ ಕಾಯಂ ಲಕ್ಷಣವಾದರೆ, ಅದು ಅಧಿಕ ಪ್ರಮಾಣದ ತೆರಿಗೆಗಿಂತ ಭಿನ್ನವೇನೂ ಅಲ್ಲ ಎಂದು ಕ್ರಿಸೆಲ್‌ನ ಜೋಶಿ ವಿವರಿಸುತ್ತಾರೆ.
ಪರೋಕ್ಷ ತೆರಿಗೆಯನ್ನು ಶ್ರೀಮಂತರು ಮತ್ತು ಬಡವರ ಮೇಲೆ ಸಮಾನವಾಗಿ ವಿಧಿಸಲಾಗುತ್ತದೆ. ಯಾರ ಮೇಲೆ ತೆರಿಗೆ ವಿಧಿಸಲಾಗುತ್ತದೆಯೋ ಅವರೇ ಅದರ ಫಲಾನುಭವಿಗಳು ಕೂಡಾ.
ಪ್ರಾಥಮಿಕ ಶಿಕ್ಷಣಕ್ಕೆ ಸಂಗ್ರಹಿಸಿದ ಶೇಕಡ 90ರಷ್ಟು ಸೆಸ್ ಅನ್ನು ಪ್ರಾರಂಭಿಕ ಶಿಕ್ಷಾ ಕೋಶಕ್ಕೆ ವರ್ಗಾಯಿಸಿ, ಪ್ರಾಥಮಿಕ ಶಿಕ್ಷಣ ವಲಯಕ್ಕೆ ವಿನಿಯೋಗಿಸಲು ಮೀಸಲಿಡಲಾಗಿದೆ. 2004-05ರಿಂದ 2014-15ರವರೆಗೆ ಒಟ್ಟು ಸಂಗ್ರಹದ 1.54 ಲಕ್ಷ ಕೋಟಿ ರೂ. ಪೈಕಿ 1.4 ಲಕ್ಷ ಕೋಟಿ ರೂ.ಯನ್ನು ಪ್ರಾಥಮಿಕ ಶಿಕ್ಷಣಕ್ಕೆ ವಿನಿಯೋಗಿಸಲಾಗಿದೆ.
2015ರ ನವೆಂಬರ್‌ನಿಂದ ಸ್ವಚ್ಛಭಾರತ ಸೆಸ್ ಸಂಗ್ರಹಿಸುವ ಮೂಲಕ ರಾಷ್ಟ್ರಾದ್ಯಂತ ಅಗತ್ಯವಿರುವ ಕಡೆ ಶೌಚಾಲಯ ನಿರ್ಮಿಸಲು ನೆರವು ನೀಡಲಾಗುತ್ತದೆ. ಕಳೆದ ಎರಡು ವರ್ಷಗಳಲ್ಲಿ 16 ದಶಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದು ಸರಕಾರಿ ಅಂಕಿ ಅಂಶ ಹೇಳುತ್ತದೆ. ಮುಂದಿನ ಮೂರು ವರ್ಷಗಳಲ್ಲಿ 95 ದಶಲಕ್ಷ ಶೌಚಾಲಯಗಳನ್ನು ನಿರ್ಮಿಸಬೇಕಾಗಿದೆ. ಆಗ ಮಾತ್ರ 2019ರೊಳಗೆ ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವ ಕೇಂದ್ರದ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ.
2015ರ ಮಾರ್ಚ್‌ನಿಂದ 2016ರ ಫೆಬ್ರವರಿವರೆಗೆ ಸುಮಾರು ಒಂದು ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 2013-14ರಲ್ಲಿ ಸುಮಾರು 50 ಲಕ್ಷ, 2014-15ರಲ್ಲಿ 58 ಲಕ್ಷ ಶೌಚಾಲಯಗಳು ನಿರ್ಮಾಣವಾಗಿದ್ದವು.
ಪರಿಸರ ಸುಂಕ, ಮಾಧ್ಯಮಿಕ ಶಿಕ್ಷಣ ಸುಂಕ ವಿಫಲ
ಸ್ವಚ್ಛ ಪರಿಸರ ಸುಂಕವನ್ನು ಸರಕಾರ 2010-11ನೆ ವರ್ಷದಿಂದ ಇದುವರೆಗೆ 28 ಸಾವಿರ ಕೋಟಿಯಷ್ಟು ಸಂಗ್ರಹಿಸಿದೆ. ಈ ಪೈಕಿ ಅರ್ಧದಷ್ಟು ಹಣವನ್ನು ರಾಷ್ಟ್ರೀಯ ಸ್ವಚ್ಛ ಇಂಧನ ನಿಧಿಗೆ ವರ್ಗಾಯಿಸಲಾಗಿದ್ದು, ಈ ಕ್ಷೇತ್ರದ ಸಂಶೋಧನೆ ಹಾಗೂ ಅನುಶೋಧನೆಗೆ ನೆರವು ನೀಡಲಾಗುತ್ತಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿಯವರು, ಸ್ವಚ್ಛ ಪರಿಸರ ಸುಂಕವನ್ನು ಈ ವರ್ಷದ ಬಜೆಟ್‌ನಲ್ಲಿ ದುಪ್ಪಟ್ಟುಗೊಳಿಸಿದ್ದು, ಪ್ರತಿ ಟನ್ ಕಲ್ಲಿದ್ದಲಿನ ಮೇಲೆ 200 ರೂ. ಬದಲಾಗಿ ಇದೀಗ 400 ರೂ.ಗೆ ಹೆಚ್ಚಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ಸಂಪರ್ಕ ವ್ಯವಸ್ಥೆ ಬಲಪಡಿಸುವ ಉದ್ದೇಶದಿಂದ 2002-03 ರಿಂದ 2014-15ರವರೆಗೆ ಒಟ್ಟು ಸಂಗ್ರಹವಾದ ಒಟ್ಟು ಸುಂಕದ ಪೈಕಿ ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದ ಹಣ ಬಳಕೆಯಾಗಿದೆ.
ಒಂದು ದಶಕದಲ್ಲಿ 64 ಸಾವಿರ ಕೋಟಿ ರೂ. ಮಾಧ್ಯಮಿಕ ಮತ್ತು ಉನ್ನತ ಶಿಕ್ಷಣ ಸೆಸ್ ಸಂಹ್ರಹಿಸಲಾಗಿದ್ದರೂ, ಇದಕ್ಕಾಗಿ ವಿಶೇಷ ನಿಧಿಯನ್ನು ಇದುವರೆಗೆ ಸಂಗ್ರಹಿಸಿಲ್ಲ. ಈ ಹಣವನ್ನು ಹೇಗೆ ಬಳಕೆ ಮಾಡಲಾಗಿದೆ ಎಂಬ ಬಗ್ಗೆಯೂ ಸ್ಪಷ್ಟತೆ ಇಲ್ಲ.
ಕೃಪೆ: ಇಂಡಿಯಾಸ್ಪೆಂಡ್.ಕಾಮ್