ಕೊಹಿನೂರನ್ನು ಬ್ರಿಟನ್‌ಗೆ ಬಹುಮಾನ ನೀಡಿರಲಿಲ್ಲ: ಭರ್ತೃಹರಿ ಮಹ್ತಾಬ್
ಹೊಸದಿಲ್ಲಿ, ಎ.28: ಬ್ರಿಟನ್‌ನಿಂದ ಪ್ರಸಿದ್ಧ ಕೊಹಿನೂರು ವಜ್ರವನ್ನು ಹಿಂದೆ ತರಬೇಕೆಂಬ ಪ್ರಬಲ ಮನವಿಯೊಂದನ್ನು ಬಿಜೆಡಿ ಸದಸ್ಯರೊಬ್ಬರು ಗುರುವಾರ ಲೋಕಸಭೆಯಲ್ಲಿ ಮಾಡಿದ್ದಾರೆ. ತಕ್ಷಣವೇ ಅದಕ್ಕೆ ಅಕಾಲಿದಳ ಸೇರಿದಂತೆ ಹಲವು ಪಕ್ಷಗಳ ಸದಸ್ಯರಿಂದ ಬೆಂಬಲ ದೊರೆತಿದೆ.
ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಡಿ ಸಂಸದ ಭರ್ತೃ ಹರಿ ಮಹ್ತಾಬ್ ಬ್ರಿಟನ್‌ಗೆ ವಜ್ರವನ್ನು ಉಡುಗೊರೆಯಾಗಿ ನೀಡಲಾಗಿದೆಯೆಂಬ ಮಾತನ್ನು ತಳ್ಳಿ ಹಾಕಿದರು. ಅದನ್ನು ಖ್ಯಾತ ಸಿಖ್ ಆಡಳಿತಗಾರ ಮಹಾರಾಜ ರಕಾಜಿತ್ ಸಿಂಗ್‌ರ ಪುತ್ರ ದುಲೀಪ್ ಸಿಂಗ್‌ರಿಂದ ಅವರು ಬಲಾತ್ಕಾರವಾಗಿ ಕಿತ್ತುಕೊಂಡು ಹೋಗಿದ್ದರೆಂದು ಅವರು ಒತ್ತಿ ಹೇಳಿದರು.
1884ರ ಆಂಗ್ಲೊ-ಸಿಖ್ ಯುದ್ಧದ ಬಳಿಕ, ಯಾವ ಪರಿಸ್ಥಿತಿಯಲ್ಲಿ ವಜ್ರವು ಬ್ರಿಟಿಷರಿಗೆ ಹೋಗಿತ್ತೆಂಬುದನ್ನು ಲಾಹೋರ್‌ನಲ್ಲಿದ್ದ ಬ್ರಿಟಿಷರ ರಾಜಕೀಯ ಏಜೆಂಟ್ ಒಬ್ಬ ಗವರ್ನರ್ ಜನರಲ್ ಡಾಲ್‌ಹೌಸಿಗೆ ಬರೆದಿದ್ದ ಪತ್ರವೊಂದರಲ್ಲಿ ವಿಷದವಾಗಿ ವಿವರಿಸಿದ್ದಾನೆಂದು ಮಹ್ತಾಬ್ ತಿಳಿಸಿದರು.
ಕೋಜಿನೂರ್ ರಾಷ್ಟ್ರದ ಗೌರವ ಎಂದು ಉಲ್ಲೇಖಿಸಿದ ಅವರು, ಅದು ಇಂಗ್ಲೆಂಡ್‌ನ ರಾಣಿಗೆ ಹೋದ ರೀತಿಯು ಒಂದು ‘ವಂಚನೆಯ ಕೃತ್ಯ’ ಹಾಗೂ ‘ಬಲಾತ್ಕಾರದಿಂದ ಒಪ್ಪಿಸಿದುದಾಗಿದೆ.’ ವಸಾಹತುಶಾಹಿ ಆಡಳಿತದ ಕಾಲದಲ್ಲಿ ಬ್ರಿಟಿಷರು ಬಹಿರಂಗವಾಗದ ಸುಲಿಗೆಯನ್ನು ನಡೆಸಿದ್ದರು. ಸ್ವರ್ಣ ಮಂದಿರ ಹಾಗೂ ಕಾಶಿ ವಿಶ್ವನಾಥ ದೇವಾಲಯಗಳಿಗೆ ದಾನ ನೀಡಿದ್ದಂತೆಯೇ ಕೊಹಿನೂರು ವಜ್ರವನ್ನು ಪುರಿಯ ದೇವಾಲಯಕ್ಕೆ ನೀಡಲು ಮಹಾರಾಜರು ಬಯಸಿದ್ದರೆಂದು ಅವರು ವಿವರಿಸಿದರು.
ಯಾವ ಪರಿಸ್ಥಿತಿಯಲ್ಲಿ ವಜ್ರವನ್ನು ಒಯ್ಯಲಾಗಿತ್ತೆಂಬುದನ್ನು ವಿವರಿಸುವ ಲಿಖಿತ ದಾಖಲೆಯನ್ನು ಸರಕಾರವು ಪತ್ರಾಗಾರಗಳಿಂದ ಪಡೆಯಬೇಕು. ಕೊಹಿನೂರು ವಜ್ರವು ಭಗವಾನ್ ಶ್ರೀಕೃಷ್ಣನೊಂದಿಗೆ ಸಂಬಂಧ ಹೊಂದಿದ್ದ ‘ಶ್ಯಮಂತಕ ಮಣಿಯಾಗಿದೆ’ಯೆಂದು ಮಹ್ತಾಬ್ ಪ್ರಬಲ ಮನವಿ ಮಾಡಿದರು.
ತನ್ನೆಲ್ಲ ಸಂಪತ್ತನ್ನು ಹಿಂದಿರುಗಿಸಿದರೆ ಬ್ರಿಟಿಷ್ ವಸ್ತು ಸಂಗ್ರಹಾಲಯ ಹಾಗೂ ಖಜಾನೆಗಳು ಬರಿದಾಗ ಬಹುದೆಂಬ ಬ್ರಿಟಿನ್ ಪ್ರಧಾನಿಯ ಹೇಳಿಕೆಯನ್ನು ಗಣಿಸದೆ ಕೊಹಿನೂರನ್ನು ಹಿಂದಿರುಗಿಸುವಂತೆ ಬ್ರಿಟನ್‌ನ ಮನವೊಲಿಸಬೇಕು ಎಂದವರು ಹೇಳಿದರು.
ವಿಜಯ್ ಮಲ್ಯರನ್ನು ಉಲ್ಲೇಖಿಸಿದ ಮಹ್ತಾಬ್, ಇತ್ತೀಚೆಗೆ ಪಾಸ್‌ಪೋರ್ಟ್ ರದ್ದುಪಡಿಸಲಾಗಿರುವ ಮದ್ಯದೊರೆಯ ಕಳಂಕಿತ ಹಣದಿಂದ ಟಿಪ್ಪು ಸುಲ್ತಾನನ ಖಡ್ಗವನ್ನು ದೇಶಕ್ಕೆ ಮರಳಿ ತರಲಾಗಿದೆಯೆಂಬುದನ್ನು ಜ್ಞಾಪಿಸಿದರು.
ಕೊಹಿನೂರ್‌ನ ಕುರಿತು ಸುಪ್ರೀಂಕೋರ್ಟ್‌ಗೆ ತಿಳಿಸಿದ ನಿಲುವಿಗಾಗಿ ಸರಕಾರದ ವಿರುದ್ಧ ದಾಳಿ ನಡೆಸಿದ ಎಸ್‌ಎಡಿ ಸಂಸದ ಪ್ರೇಂಸಿಂಗ್ ಚಂದು ಮಜ್ರಾ, ಅದನ್ನು ಹಿಂದೆ ತರಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಈ ಸಂಬಂಧ ಸದನವು ಸರ್ವಾನುಮತದ ನಿರ್ಣಯವೊಂದನ್ನು ಮಂಜೂರು ಮಾಡಬೇಕೆಂದೂ ಅವರು ಒತ್ತಾಯಿಸಿದರು.