×
Ad

ಉದ್ಯೋಗಿಗಳು ಮರೆಮಾಚಿದ ಆದಾಯಕ್ಕೆ ದಂಡ ಇಲ್ಲ

Update: 2016-04-28 23:47 IST

ಮುಂಬೈ, ಎ.28: ಉದ್ಯೋಗಿಗಳು ಮರೆಮಾಚಿದ ಆದಾಯದ ಮೇಲೆ ವಿಧಿಸಿದ್ದ ದಂಡವನ್ನು ರದ್ದುಮಾಡುವ ಮಹತ್ವದ ತೀರ್ಪನ್ನು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ ನೀಡಿದೆ. ಮಂಡಳಿಯ ಈ ಉದಾರ ನೀತಿಯಿಂದಾಗಿ ಲಕ್ಷಾಂತರ ಮಂದಿ ಉದ್ಯೋಗಿಗಳು ನಿರಾಳವಾಗಿದ್ದಾರೆ.


ಉದ್ಯೋಗಿಗಳು ಆನ್‌ಲೈನ್ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡಬಹುದಾಗಿದ್ದ ಪೋರ್ಟೆಲ್‌ನಪಂಚಿಂಗ್ ದೋಷದಿಂದಾಗಿ ವೇತನ ಪಡೆಯುವ ಉದ್ಯೋಗಿಗಳ ಆದಾಯ ಪ್ರಮಾಣವನ್ನು ನಿಗದಿತ ವೇತನಕ್ಕಿಂತ ಕಡಿಮೆ ತೋರಿಸುತ್ತಿತ್ತು. ಇಂಥ ಪ್ರಕರಣಗಳ ವಿರುದ್ಧ ತೆರಿಗೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡು, ವಾಸ್ತವ ಆದಾಯ ಮರೆ ಮಾಚಲಾಗಿದೆ ಎಂಬ ಆರೋಪದಲ್ಲಿ ಅವರ ವಿರುದ್ಧ ದೊಡ್ಡ ಮೊತ್ತದ ದಂಡ ವಿಧಿಸಿದ್ದರು.
ಇದು ಪೋರ್ಟೆಲ್ ದೋಷದಿಂದಾಗಿರುವ ಪ್ರಮಾದವಾಗಿರುವುದರಿಂದ ತೆರಿಗೆಪಾವತಿದಾರರ ಮೇಲೆ ವಿಧಿಸಿದ ದಂಡವನ್ನು ರದ್ದು ಮಾಡಲು ನ್ಯಾಯಮಂಡಳಿ ನಿರ್ಧರಿಸಿತು. ತೆರಿಗೆಪಾವತಿದಾರ ಉದ್ಯೋಗಿಗೆ ವಾಸ್ತವವಾಗಿ ತೆರಿಗೆ ತಪ್ಪಿಸುವ ಉದ್ದೇಶ ಇರಲಿಲ್ಲ ಅಥವಾ ಮರುಪಾವತಿ ಪಡೆಯುವ ಪ್ರತಿಪಾದನೆ ಮಾಡಿರಲಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಆದಾಯ ತೆರಿಗೆ ಅಧಿಕಾರಿಗಳಲ್ಲಿ ಉದ್ಯೋಗಿಗಳ ಪರವಾಗಿ ಉದ್ಯೋಗದಾತರು ಪ್ರತಿ ಮೂರು ತಿಂಗಳಿಗೊಮ್ಮೆ ಸಲ್ಲಿಸುವ ಮೂಲದಲ್ಲೇ ಕಡಿತ ಮಾಡಿಕೊಳ್ಳುವ ಆದಾಯ ತೆರಿಗೆ ವಿವರಗಳು ಇರುತ್ತವೆ. ವರ್ಷದ ಕೊನೆಗೆ ಉದ್ಯೋಗದಾತರು ಫಾರಂ ಸಂಖ್ಯೆ 16ರಲ್ಲಿ ಈ ವಿವರಗಳನ್ನು ದಾಖಲಿಸುತ್ತಾರೆ. ಆದ್ದರಿಂದ ವೇತನದಾರರು ತೆರಿಗೆ ತಪ್ಪಿಸಲು ಅಥವಾ ಆದಾಯ ಮರೆಮಾಚಲು ಸಾಧ್ಯವಿಲ್ಲ ಎಂದು ನ್ಯಾಯಮಂಡಳಿ ಸ್ಪಷ್ಟಪಡಿಸಿದೆ.
2010-11ರ ಈ ಪ್ರಕರಣದಲ್ಲಿ ರಿಚಾ ದುಬೆ ಎಂಬ ಉದ್ಯೋಗಿ ಆ ಹಣಕಾಸು ವರ್ಷದಲ್ಲಿ ಎರಡು ಕಂಪೆನಿಗಳಿಂದ 21.48 ಲಕ್ಷ ವೇತನ ಪಡೆದಿದ್ದರು. ಆದರೆ ಆನ್‌ಲೈನ್ ಪೋರ್ಟೆಲ್ ಮೊದಲ ಕಂಪನಿಯಿಂದ ಪಡೆದಿದ್ದ 2.09 ಲಕ್ಷ ರೂಪಾಯಿ ಆದಾಯವನ್ನಷ್ಟೇ ಪಂಚ್ ಮಾಡಿಕೊಂಡಿತ್ತು. ಇದರಿಂದ ವಾಸ್ತವ ಆದಾಯ ಮರೆಮಾಚಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ದಂಡ ವಿಧಿಸಿತ್ತು. ಇದರ ವಿರುದ್ಧ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಅರ್ಜಿ ಸಲ್ಲಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News