×
Ad

ನೀಟ್ ಮೂಲಕ ಎಂಬಿಬಿಎಸ್-ಬಿಡಿಎಸ್‌ಪ್ರವೇಶ ಪರೀಕ್ಷೆಗೆ ಸುಪ್ರೀಂ ಅನುಮೋದನೆ

Update: 2016-04-28 23:56 IST

ಹೊಸದಿಲ್ಲಿ, ಎ.28: ಈ ಸಾಲಿಗೆ ಎರಡು ಹಂತಗಳಲ್ಲಿ, ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್‌ಗಳ ಪ್ರವೇಶಕ್ಕೆ ಏಕೈಕ ಸಾಮಾನ್ಯ ಪರೀಕ್ಷೆಯಾಗಿರುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸುವುದಕ್ಕೆ ಸುಪ್ರೀಂಕೋರ್ಟ್ ಇಂದು ವೇದಿಕೆ ಸಿದ್ಧಪಡಿಸಿದೆ.

ಮೇ 1ಕ್ಕೆ ನಿಗದಿಪಡಿಸಲಾಗಿರುವ ಅಖಿಲ ಭಾರತ ವೈದ್ಯಕೀಯ ಪೂರ್ವ ಪರೀಕ್ಷೆಯನ್ನು (ಎಐಪಿಎಂಟಿ) ಎನ್‌ಇಇಟಿ (ನೀಟ್)-1 ಎಂದು ಪರಿಗಣಿಸುವಂತೆ ಕೇಂದ್ರ ಸರಕಾರ ಸಿಬಿಎಸ್‌ಇ ಹಾಗೂ ಭಾರತೀಯ ವೈದ್ಯಕೀಯ ಮಂಡಳಿಗಳು ಮುಂದಿರಿಸಿರುವ ವೇಳಾಪಟ್ಟಿಯನ್ನು ಸುಪ್ರೀಂಕೋರ್ಟ್ ಅನುಮೋದಿಸಿದೆ.

ಎಐಪಿಎಂಟಿಗೆ ಅರ್ಜಿ ಸಲ್ಲಿಸದವರಿಗೆ ಜು.24ರಂದು ನಡೆಯಲಿರುವ ನೀಟ್-2 ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಸೆ.30ರೊಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ಸಂಯುಕ್ತ ಫಲಿತಾಂಶವನ್ನು ಆ.17 ರಂದು ಪ್ರಕಟಿಸಲಾಗುವುದೆಂದು ಮೂಲಗಳು ತಿಳಿಸಿವೆ.

 ನೀಟ್‌ನ ವ್ಯಾಪ್ತಿಗೆ ಬರುವ ಎಲ್ಲ ಸರಕಾರಿ ಕಾಲೇಜುಗಳು, ಪರಿಗಣಿತ ವಿಶ್ವವಿದ್ಯಾನಿಲಯಗಳು ಹಾಗೂ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಈ ಆದೇಶ ಅನ್ವಯವಾಗುತ್ತದೆ.

ಈಗಾಗಲೇ ಪರೀಕ್ಷೆಗಳನ್ನು ನಡೆಸಿರುವ ಅಥವಾ ಪ್ರತ್ಯೇಕವಾಗಿ ಪರೀಕ್ಷೆ ನಡೆಸಲು ನಿರ್ಧರಿಸುವ ಕಾಲೇಜುಗಳಿಗೆ ಇದು ಅನ್ವಯವಾಗುವುದಿಲ್ಲ.

ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ರಾಜ್ಯಗಳು, ಕರ್ನಾಟಕ ವೈದ್ಯಕೀಯ ಕಾಲೇಜುಗಳ ಸಂಘಟನೆ ಹಾಗೂ ಸಿಎಂಸಿ ವೆಲ್ಲೂರಿನಂತಹ ಅಲ್ಪಸಂಖ್ಯಾತರ ಸಂಸ್ಥೆಗಳು ತಮ್ಮ ಮೇಲೆ ನೀಟ್ ಹೇರುವಂತಿಲ್ಲವೆಂದು ಪ್ರತಿಪಾದಿಸಿದ್ದವು.

ಆದರೆ ಈ ಎಲ್ಲ ವಿರೋಧಗಳನ್ನು ತಿರಸ್ಕರಿಸಿ ತೀರ್ಪು ಘೋಷಿಸುವುದರೊಂದಿಗೆ ಸುಪ್ರೀಂಕೋರ್ಟ್ ಎಲ್ಲ ಅನಿಶ್ಚಿತತೆಗಳಿಗೆ ತೆರೆಯೆಳೆದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News