ಟ್ರಂಪ್ ಯಾಕೆ ಅಧ್ಯಕ್ಷರಾಗಲು ಹೊರಟಿದ್ದಾರೆ?!
ವಾಶಿಂಗ್ಟನ್, ಎ. 29: ಹೌದು, ಬಿಲಿಯಾಧೀಶ ಟಿವಿ ರಿಯಲಿಟಿ ಕಾರ್ಯಕ್ರಮಗಳ ತಾರೆ ಡೊನಾಲ್ಡ್ ಟ್ರಂಪ್ ಯಾಕೆ ಅಮೆರಿಕದ ಅಧ್ಯಕ್ಷರಾಗಲು ಹೊರಟಿದ್ದಾರೆ?
ಈ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ! ಆದರೆ, ಉತ್ತರ ಹೆಚ್ಚಿನವರಿಗೆ ಗೊತ್ತಿಲ್ಲ. ಆದರೆ, ಕೆಲವು ಮನೋವಿಶ್ಲೇಷಕರು ಮತ್ತು ಮಾಧ್ಯಮ ವರದಿಗಾರರಿಗೆ ಗೊತ್ತು. ಅವರು ಹೇಳುವುದೇನೆಂದರೆ, ಇದೆಲ್ಲ ಆರಂಭವಾಗಿದ್ದು 2011ರಲ್ಲಿ ನಡೆದ ಶ್ವೇತಭವನ ವರದಿಗಾರರ ಅಸೋಸಿಯೇಶನ್‌ನ ಔತಣಕೂಟದಲ್ಲಿ. ಅಲ್ಲಿ ಟ್ರಂಪ್ ಅಧ್ಯಕ್ಷ ಬರಾಕ್ ಒಬಾಮ ಮತ್ತು ‘ಸಾಟರ್ಡೆ ನೈಟ್ ಲೈವ್’ ಕಾರ್ಯಕ್ರಮದ ಹಾಸ್ಯಗಾರ ಸೆತ್ ಮೆಯರ್ಸ್ ಅವರ ಹಾಸ್ಯದ ವಸ್ತುವಾಗಿದ್ದರು.
ಆ ಅನುಭವದಿಂದ ಟ್ರಂಪ್ ಎಷ್ಟು ಅವಮಾನಿತರಾದರೆಂದರೆ, ಇದಕ್ಕೆ ಸೇಡು ತೀರಿಸಿಕೊಳ್ಳುವ ಛಲ ಅವರಲ್ಲಿ ಬೆಳೆಯಿತು ಎಂದು ಅಂದು ಉಪಸ್ಥಿತರಿದ್ದ ವರದಿಗಾರರು ಹೇಳುತ್ತಾರೆ. ‘‘ಆ ಸಂಜೆ ಅನುಭವಿಸಿದರು ಎನ್ನಲಾದ ಅವಮಾನ ಅವರನ್ನು ಅಧೀರನಾಗಿಸಲಿಲ್ಲ. ಬದಲಿಗೆ, ರಾಜಕೀಯ ಜಗತ್ತಿನಲ್ಲಿ ಸ್ಥಾನ ಪಡೆಯಲು ಅವಿರತ ಪ್ರಯತ್ನಗಳನ್ನು ನಡೆಸುವಂತೆ ಅವರನ್ನು ಪ್ರೇರೇಪಿಸಿತು’’ ಎಂದು ‘ನ್ಯೂಯಾರ್ಕ್ ಟೈಮ್ಸ್’’ ಕಳೆದ ತಿಂಗಳು ಬರೆದಿದೆ. ಆದರೆ, ಟ್ರಂಪ್ ಯಾಕೆ ಸ್ಪರ್ಧಿಸುತ್ತಿದ್ದಾರೆ ಎಂದು ಖಚಿತವಾಗಿ ತಿಳಿದಿರುವುದು ಟ್ರಂಪ್‌ಗೆ ಮಾತ್ರ. ಈ ಊಹಾಪೋಹಗಳೇನಿದ್ದರೂ ಆ ಸಂಜೆಯ ‘ಯೂ ಟ್ಯೂಬ್’ ಕ್ಲಿಪ್‌ಗಳನ್ನಾಧರಿಸಿದ್ದು. ಆದರೆ, ತನಗೆ ಅದು ಅಮೋಘ ಸಂಜೆಯಾಗಿತ್ತು ಹಾಗೂ ತಾನು ಅದನ್ನು ಆನಂದದಿಂದ ಕಳೆದೆ ಎಂದು ಟ್ರಂಪ್ ಹೇಳಿದ್ದಾರೆ.
‘‘ಅಧ್ಯಕ್ಷರು ನನ್ನ ಬಗ್ಗೆ ಹಾಸ್ಯ ಮಾಡುತ್ತಿದ್ದರು’’ ಎಂಬುದಾಗಿ ಅವರು ಈ ವಾರ ಸ್ಮರಿಸಿಕೊಂಡಿದ್ದಾರೆ. ‘‘ನಾನು ಅಲ್ಲಿನ ಕ್ಷಣಗಳನ್ನು ಆನಂದಿಸಿದೆ. ನಾನಲ್ಲಿ ಧನ್ಯತೆಯನ್ನು ಅನುಭವಿಸಿದೆ. ಅಧ್ಯಕ್ಷ (ಬರಾಕ್ ಒಬಾಮ)ರು ನನ್ನ ಬಗ್ಗೆ ಚೆನ್ನಾಗಿ ಮಾತನಾಡಿದರು’’ ಎಂದರು. ಆದರೆ, ಅವರು ಮೆಯರ್ಸ್‌ರ ಮಾತುಗಳು ಅವರಿಗೆ ಸಂತೋಷ ತಂದಿರಲಿಲ್ಲ. ‘‘ಅವರ ಮಾಮೂಲಿ ವರ್ತನೆ ನನಗೆ ಹಿಡಿಸಲಿಲ್ಲ. ಅವರ ನಿರ್ವಹಣೆ ಕೀಳು ಮಟ್ಟದ್ದಾಗಿತ್ತು ಹಾಗೂ ಅದು ಸರಿಯಿರಲಿಲ್ಲ’’ ಎಂದು ಟ್ರಂಪ್ ಹೇಳಿದ್ದಾರೆ.