ಪಂಜಾಬ್ ತಂಡದ ನಾಯಕತ್ವದಲ್ಲಿ ಬದಲಾವಣೆ?
ಮುಂಬೈ, ಎ.29: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಡೇವಿಡ್ ಮಿಲ್ಲರ್ ಪ್ರಸ್ತುತ ಐಪಿಎಲ್‌ನಲ್ಲಿ ನಾಯಕತ್ವದಲ್ಲಿ ವಿಫಲರಾಗಿದ್ದಾರೆ. ಮಾತ್ರವಲ್ಲ ಬ್ಯಾಟಿಂಗ್‌ನಲ್ಲೂ ಉತ್ತಮ ಸ್ಕೋರ್ ದಾಖಲಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ತಂಡದ ನಾಯಕತ್ವದಿಂದ ಬದಲಾಯಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ದಕ್ಷಿಣ ಆಫ್ರಿಕದ ಮಿಲ್ಲರ್ ಬದಲಿಗೆ ಮುರಳಿ ವಿಜಯ್ ನಾಯಕನಾಗಿ ಆಯ್ಕೆಯಾಗುವ ನಿರೀಕ್ಷೆಯಿದೆ. ಆದರೆ, ಟೀಮ್ ಮ್ಯಾನೇಜ್‌ಮೆಂಟ್ ಈ ಕುರಿತು ಅಧಿಕೃತ ಹೇಳಿಕೆ ನೀಡಿಲ್ಲ. ಭಾರತದ ಟೆಸ್ಟ್ ಸ್ಪೆಷಲಿಸ್ಟ್ ವಿಜಯ್ ಮೇ1ರಂದು ರಾಜ್‌ಕೋಟ್‌ನಲ್ಲಿ ನಡೆಯಲಿರುವ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದ ವೇಳೆಯೇ ತಂಡದ ನಾಯಕತ್ವವಹಿಸಿಕೊಳ್ಳಬಹುದು.
26ರ ಹರೆಯದ ಮಿಲ್ಲರ್ ಈ ವರ್ಷದ ಐಪಿಎಲ್‌ನಲ್ಲಿ ಆಡಿರುವ 6 ಪಂದ್ಯಗಳ ಪೈಕಿ ಕೇವಲ 76 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮಿಲ್ಲರ್ ನಾಯಕತ್ವದಲ್ಲಿ ಪಂಜಾಬ್ ತಂಡ ಐದು ಪಂದ್ಯಗಳನ್ನು ಸೋತು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.
ಐಪಿಎಲ್ ನಡೆಯುತ್ತಿರುವಾಗಲೇ ತಂಡದ ನಾಯಕನನ್ನು ಬದಲಾಯಿಸುವುದು ಇದೇ ಮೊದಲಲ್ಲ. ಆಡಮ್ ಗಿಲ್‌ಕ್ರಿಸ್ಟ್(2009, ಪಂಜಾಬ್), ರಿಕಿ ಪಾಂಟಿಂಗ್(2013, ಮುಂಬೈ ಇಂಡಿಯನ್ಸ್), ಡೇನಿಯಲ್ ವೆಟೋರಿ(2012, ಆರ್‌ಸಿಬಿ), ಕುಮಾರ ಸಂಗಕ್ಕರ(2012, ಹೈದರಾಬಾದ್) ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್(2013, ಪುಣೆ) ಟೂರ್ನಿಯ ನಡುವೆಯೇ ನಾಯಕತ್ವವನ್ನು ಕಳೆದುಕೊಂಡಿದ್ದರು.
ಐಪಿಎಲ್‌ನಲ್ಲಿ ವಿದೇಶಿ ಆಟಗಾರರಿಗೆ ನಾಯಕತ್ವದ ಜವಾಬ್ದಾರಿ ತುಂಬಾ ಕಠಿಣ ಕೆಲಸ.ಎಬಿ ಡಿವಿಲಿಯರ್ಸ್ ಹಾಗೂ ಶೇನ್ ವಾರ್ನ್ ಹೊರತುಪಡಿಸಿ ಉಳಿದ ವಿದೇಶಿ ಆಟಗಾರರು ಐಪಿಎಲ್ ನಾಯಕರಾಗಿ ವಿಫಲರಾಗಿದ್ದಾರೆ.