×
Ad

ತನ್ನ ವಿರುದ್ಧದ ಅರ್ಜಿಯನ್ನೇ ಪ್ರಧಾನಿ ವಿರುದ್ಧ ತಿರುಗಿಸಿದ ಚಾಣಾಕ್ಷ ಕೇಜ್ರಿವಾಲ್

Update: 2016-04-30 12:07 IST

ಹೊಸದಿಲ್ಲಿ, ಎ. 30: ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆಯನ್ನು ಅಡಗಿಸಿಡುವ ಪ್ರಯತ್ನ ಮಾಡುತ್ತಿದೆಯೆಂದು ಆರೋಪಿಸಿ ದೆಹಲಿ ಮುಖ್ಯಮಂತ್ರಿ ಕೇಂದ್ರ ಮಾಹಿತಿ ಆಯೋಗಕ್ಕೆ ಪತ್ರ ಬರೆದ ಮರುದಿನವೇ ಪ್ರಧಾನಿಯವರ ಶೈಕ್ಷಣಿಕ ಅರ್ಹತೆಯ ವಿವರ ಸಲ್ಲಿಸುವಂತೆ ಆಯೋಗ ಪ್ರಧಾನಿ ಕಾರ್ಯಾಲಯಕ್ಕೆ ಆದೇಶಿಸಿದೆ.

ಹೀಗೆ ಮಾಡಲು ತಾನು ಯಶಸ್ವಿಯಾಗಿದ್ದೇನೆಂದು ಹೇಳಿಕೊಳ್ಳಲು ಕೇಜ್ರಿವಾಲ್ ಸಾಮಾಜಿಕ ತಾಣ ಟ್ವಿಟ್ಟರ್ ಉಪಯೋಗಿಸಿ ಟ್ವೀಟ್ ಕೂಡ ಮಾಡಿಬಿಟ್ಟರಲ್ಲದೆ ಆಯೋಗದ ಆದೇಶದ ಪ್ರತಿಯೊಂದು ಲಭ್ಯವಿರುವ ಲಿಂಕ್ ಕೂಡ ನೀಡಿದ್ದರು.

ಈ ಆದೇಶವನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ತಿಳಿಯುವುದೇನೆಂದರೆ, ಕೇಜ್ರಿವಾಲ್ 2014ರ ಅಸೆಂಬ್ಲಿ ಚುನಾವಣೆ ವೇಳೆ ವಿಳಾಸ ಬದಲಿಸಲು ಅವರಿಗೆ ಹೇಗೆ ಅನುಮತಿಸಲಾಯಿತು ಎಂದು ಕೇಳುವ ಆರ್‌ಟಿಐ ಅರ್ಜಿಯೊಂದನ್ನು ಬಳಸಿಕೊಂಡು ಪ್ರಧಾನಿಯ ಶೈಕ್ಷಣಿಕ ಅರ್ಹತೆಯ ವಿವರಗಳನ್ನು ಕೇಳಲು ಸಫಲರಾಗಿ ತನ್ನ ವಿರುದ್ಧದ ಅರ್ಜಿಯನ್ನೇ ಪ್ರಧಾನಿ ವಿರುದ್ಧ ತಿರುಗಿಸಿದ ಚಾಣಾಕ್ಷರೆಂದು ತಿಳಿದು ಬರುತ್ತದೆ.

ಮಾರ್ಚ್ 2016ರಲ್ಲಿ ನೀರಜ್ ಸಕ್ಸೇನಾ ಎಂಬವರು ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಗೆ ಆರ್‌ಟಿಐ ಅರ್ಜಿಯೊಂದನ್ನು ಸಲ್ಲಿಸಿ ಕೇಜ್ರಿವಾಲ್ ನವೆಂಬರ್ 2014ರಲ್ಲಿ ಫಾರ್ಮ್ 8ಎ ಸಲ್ಲಿಸಿ ತಮ್ಮ ವಿಳಾಸವನ್ನು 514 ವಿಬಿಪಿ ಹೌಸ್, ರಫಿ ಮಾರ್ಗ್ ದೆಹಲಿ ಎಂದು ತಿಳಿಸಿ ನಂತರ ಅದನ್ನು ಹಿಂಪಡೆದು ಜನವರಿ 2,015ರಲ್ಲಿ ಇನ್ನೊಂದು ಫಾರ್ಮ್ 8ಎ ಸಲ್ಲಿಸಿ ತಮ್ಮ ವಿಳಾಸವನ್ನು ಬಿಕೆ ದತ್ತ್ ಕಾಲನಿ, ನವದೆಹಲಿಗೆ ಬದಲಿಸಿ ತಾನು ಈ ವಿಳಾಸದಲ್ಲಿ ಐದು ತಿಂಗಳಿಂದ ವಾಸವಾಗಿದ್ದೇನೆಂದು ಏಕೆ ತಿಳಿಸಿದ್ದಾಗಿ ಪ್ರಶ್ನಿಸಿದ್ದರು.

ಈ ಪ್ರಕರಣದ ವಿಚಾರಣೆ ವೇಳೆ ಕೇಜ್ರಿವಾಲ್ ತಾನು ತನ್ನ ಬಗ್ಗೆ ಎಲ್ಲಾ ಮಾಹಿತಿಯನ್ನು ಬಹಿರಂಗಪಡಿಸುವುದಾಗಿ ಹೇಳಿದರಲ್ಲದೆ, ಆಯೋಗ ಇದೇ ರೀತಿ ಮೋದಿಯವರ ಶೈಕ್ಷಣಿಕ ಅರ್ಹತೆಯ ವಿಚಾರದಲ್ಲೂ ಏಕೆ ಅನುಸರಿಸುತ್ತಿಲ್ಲವೆಂದು ಪ್ರಶ್ನಿಸಿದ್ದರು.

2014ರ ಲೋಕಸಭಾ ಚುನಾವಣೆ ಸ್ಪರ್ಧಿಸುವ ವೇಳೆ ಮೋದಿ ತಾನು ದೆಹಲಿ ವಿಶ್ವವಿದ್ಯಾಲಯದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದಾಗಿಯೂ ಗುಜರಾತ್ ವಿಶ್ವವಿದ್ಯಾಲಯದಿಂದ ಸ್ನಾತ್ತಕೋತ್ತರ ಪದವಿಯನ್ನು 1983ರಲ್ಲಿ ಪಡೆದಿದ್ದಾಗಿಯೂ ಹೇಳಿದ್ದರು. ಆದರೆ ದೆಹಲಿ ವಿಶ್ವವಿದ್ಯಾಲಯದಿಂದ ಮೋದಿ ಶೈಕ್ಷಣಿಕ ಅರ್ಹತೆಯ ವಿವರ ಪಡೆಯುವ ಯತ್ನಗಳು ಈ ಹಿಂದೆ ವಿಫಲವಾಗಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News