ಸೌದಿ ಅರೇಬಿಯ: ಬಿನ್‌ಲಾದೆನ್ ಕಂಪೆನಿಯಿಂದ 50,000 ಕೆಲಸಗಾರರ ವಜಾ
ಜಿದ್ದಾ, ಎ. 30: ಬಿನ್ ಲಾದನ್ ಕಂಪೆನಿಯ ಸುಮಾರು 50,000 ಕೆಲಸಗಾರರಿಗೆ ಕಂಪೆನಿಯು ದೇಶದಿಂದ ಹೊರ ಹೋಗಲು ಅವಕಾಶ ನೀಡುವ ‘ಎಕ್ಸಿಟ್ ಓನ್ಲಿ’ ವಿಸಾಗಳನ್ನೇನೋ ನೀಡಿದೆ. ಆದರೆ, ತಮಗೆ ಸಿಗಬೇಕಾದ ಸವಲತ್ತುಗಳು ಹಾಗೂ ನಾಲ್ಕು ತಿಂಗಳಿಗೂ ಅಧಿಕ ಅವಧಿಯ ಬಾಕಿ ಸಂಬಳ ನೀಡದೆ ತಾವು ಸೌದಿ ಅರೇಬಿಯ ತೊರೆಯವುದಿಲ್ಲ ಎಂಬ ನಿಲುವಿಗೆ ಕೆಲಸಗಾರರು ಅಂಟಿಕೊಂಡಿದ್ದಾರೆ ಎಂದು ‘ಅಲ್-ವತನ್ ಆನ್‌ಲೈನ್’ ಶುಕ್ರವಾರ ವರದಿ ಮಾಡಿದೆ.
ಕೆಲಸಗಾರರು ಬಹುತೇಕ ಪ್ರತಿ ದಿನವೆಂಬಂತೆ ಧರಣಿ ನಡೆಸುತ್ತಿದ್ದಾರೆ ಎಂದು ಮೂಲವೊಂದು ಅಲ್-ವತನ್‌ಗೆ ಹೇಳಿದೆ. ಒಂದೋ ತುರ್ತು ಕೊನೆಯ ಎಕ್ಸಿಟ್ ವೀಸಾವನ್ನು ಪಡೆಯಿರಿ ಅಥವಾ ನಿಮ್ಮ ಬಾಕಿ ಸಂಬಳ ಸಂಪೂರ್ಣವಾಗಿ ಪಾವತಿಯಾಗುವವರೆಗೆ ಕಾಯಿರಿ ಎಂಬ ಆಯ್ಕೆಯನ್ನು ಕಂಪೆನಿಯು ಕೆಲಸಗಾರರಿಗೆ ನೀಡಿದೆ ಎನ್ನಲಾಗಿದೆ.
ಬಿನ್ ಲಾದನ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 50,000 ಕೆಲಸಗಾರರ ಗುತ್ತಿಗೆಗಳನ್ನು ರದ್ದುಪಡಿಸಿ ಅವರಿಗೆ ಅಂತಿಮ ಎಕ್ಸಿಟ್ ವೀಸಾಗಳನ್ನು ನೀಡಿದ ಬಳಿಕ ಕಂಪೆನಿ ಮತ್ತು ಕೆಲಸಗಾರರ ನಡುವೆ ಈ ಬಿಕ್ಕಟ್ಟು ಉಂಟಾಗಿದೆ. ಜಿದ್ದಾದ ಅಲ್-ಸಲಾಮ ಜಿಲ್ಲೆಯಲ್ಲಿರುವ ಕಂಪೆನಿಯ ಆಡಳಿತ ಕಚೇರಿಯ ಎದುರುಗಡೆ ಕೆಲಸಗಾರರು ನಿರಂತರವಾಗಿ ಧರಣಿ ನಡೆಸುತ್ತಿದ್ದಾರೆ.
ಆರು ತಿಂಗಳುಗಳಿಂದ ಸಂಬಳ ಪಡೆಯದ ಕೆಲಸಗಾರರೂ ಕಂಪೆನಿಯಲ್ಲಿದ್ದಾರೆ ಎಂದು ಬಿನ್ ಲಾದನ್ ಕಂಪೆನಿಯ ಮೂಲವೊಂದು ಅಲ್-ವತನ್‌ಗೆ ತಿಳಿಸಿದೆ. ಹಾಗಾಗಿ, ಮನೆ ಬಾಡಿಗೆ ನೀಡಲು, ಮಕ್ಕಳ ಶಾಲಾ ಶುಲ್ಕಗಳನ್ನು ಪಾವತಿಸಲು ಹಾಗೂ ಇತರ ಮನೆ ಖರ್ಚುಗಳಿಗಾಗಿ ಕೆಲಸಗಾರರು ಸಾಲ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎನ್ನಲಾಗಿದೆ.