ಉತ್ತರಾಖಂಡ ನಿಲ್ಲದ ಕಾಡ್ಗಿಚ್ಚು: ಬೆಂಕಿ ಆರಿಸಲು ವಾಯುಸೇನೆಯ ಹೆಲಿಕಾಪ್ಟರ್
ಡೆಹ್ರಾಡೂನ್, ಮೇ 1: ಅನಿಯಂತ್ರಿತವಾಗಿ ಹೆಚ್ಚುತ್ತಿರುವ ಉತ್ತರಾಖಂಡದ ಕಾಡ್ಗಿಚ್ಚು ತಹಬಂದಿಗೆ ತರಲಿಕ್ಕಾಗಿ ಕೆಂದ್ರ ದುರಂತ ನಿವಾರಣಾ ಪಡೆ ಸಜ್ಜಾಗಿದೆ ಎಂದು ವರದಿಯಾಗಿದೆ. ಉತ್ತರಾಖಂಡದ ಹದಿಮೂರು ಜಿಲ್ಲೆಗಳ 1900 ಹೆಕ್ಟೇರ್ ಕಾಡುಗಳನ್ನು ಸುಟ್ಟು ಬೂದಿ ಮಾಡುತ್ತಿರುವ ಬೆಂಕಿಯನ್ನು ನಂದಿಸಲು ಭಾರತ ವಾಯುಸೇನೆಯ ಎಂ.ಐ 17 ಹೆಲಿಕಾಪ್ಟರ್‌ಗಳು ರಾಜ್ಯಕ್ಕೆ ಈಗಾಗಲೇ ತಲುಪಿವೆ. ಹೆಲಿಕಾಪ್ಟರ್ ಉಪಯೋಗಿಸಿ ಬಲವಾಗಿ ನೀರು ಸುರಿದು ಬೆಂಕಿ ನಿಯಂತ್ರಿಸಲು ಸೇನೆ ಯತ್ನಿಸುತ್ತಿದೆ. ಚಮೇಲೆ, ಪೌರಿ, ರುದ್ರಪ್ರಯಾಗ, ತೆಹ್ರಿ, ಉತ್ತರಕಾಶಿ, ಅಲ್‌ಮೇರ,ಪಿತ್ತೋಡ್‌ಗಡ್, ನೈನಿತಾಲ್, ಪ್ರದೇಶಗಳ ಕಾಡುಗಳು ಅಗ್ನಿಗೆ ಬಲಿಯಾಗಿವೆ.
ಅಗ್ನಿ ನಂದಿಸಲಿಕ್ಕಾಗಿ 6,000 ಉದ್ಯೋಗಿಗಳನ್ನು ಸರಕಾರ ನೇಮಿಸಿದೆ. ಮೂರು ತುಕಡಿ ರಾಷ್ಟ್ರೀಯ ದುರಂತ ನಿವಾರಣೆ ಪಡೆ ಅಲ್ಲಿದೆ. ರಾಜ್ಯ ದುರಂತ ನಿವಾರಣಾ ಫೋರ್ಸ್, ಸೇನೆ ಇವರೆಲ್ಲ ಜಂಟಿಯಾಗಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣಾತೀತವಾದ್ದರಿಂದ ಕಳೆದ ದಿವಸ ರಾಜ್ಯಪಾಲರು ಕೇಂದ್ರ ಸರಕಾರದ ಸಹಾಯವನ್ನು ಯಾಚಿಸಿದ್ದರು. ಕೇಂದ್ರ ಗೃಹ ಸಚಿವ ರಾಜ್‌ನಾಥ್ ಸಿಂಗ್ ಮತ್ತು ಪ್ರಧಾನಿಯವರ ಕಚೇರಿಯಿಂದ ಫೋನ್ ಮುಖಾಂತರ ಸ್ಥಿತಿಗತಿಯನ್ನು ವಿಚಾರಿಸಲಾಗಿದೆ. ಫೆಬ್ರವರಿಯಿಂದ ರಾಜ್ಯದಲ್ಲಿ ಬೆಂಕಿ ಹಿಡಿದ 922 ಪ್ರಕರಣಗಳು ಘಟಿಸಿವೆ ಎಂದು ವರದಿಗಳು ತಿಳಿಸಿವೆ.