2 ಕೋಟಿ ಉಳಿತಾಯ ಇದ್ದರೂ ಬಿಕಾರಿಯಾಗಿದ್ದ "ಕನಕ"ಲತಾ
ಅಜ್ಮೀರ್: ಹೆಸರು ಕನಕಲತಾ. ದೇವಾಲಯ ಆವರಣದ ಪುಟ್ಟ ಕೋಣೆಯಲ್ಲಿ ವಾಸ. ನೆರೆಯವವರು ನೀಡಿದ ಭಿಕ್ಷೆಯಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಆ 70ರ ವೃದ್ಧೆ ನಿನ್ನೆ ಮೃತಪಟ್ಟಳು. ಅಂತ್ಯಸಂಸ್ಕಾರಕ್ಕಾಗಿ ಅಕ್ಕಪಕ್ಕದವರು ಒಂದಷ್ಟು ಹಣ ಕೂಡಿಸಿದರು. ಇದರಲ್ಲೇನು ವಿಶೇಷ ಎಂದು ಮೂಗು ಮುರಿಯಬೇಡಿ. ಆಕೆಯ ಕೊಠಡಿಯನ್ನು ಜಾಲಾಡಿದಾಗ ಒಂದಷ್ಟು ಬ್ಯಾಂಕ್ ಠೇವಣಿಪತ್ರಗಳು ದೊರೆತವು. ತೆರೆದು ನೋಡಿದಾಗ ಬರೋಬ್ಬರಿ ಎರಡು ಕೋಟಿ ರೂಪಾಯಿ ಠೇವಣಿ ಆಕೆಯ ಹೆಸರಿನಲ್ಲಿತ್ತು!
ಈ ಠೇವಣಿಗಳಿಗೆ ಯಾವ ನಾಮನಿರ್ದೇಶನವೂ ಇಲ್ಲದ್ದರಿಂದ ಬ್ಯಾಂಕುಗಳು ಇದೀಗ ಯಾರು ಈ ಠೇವಣಿಯ ಮೇಲೆ ಹಕ್ಕುಪ್ರತಿಪಾದನೆಗೆ ಮುಂದಾಗುತ್ತಾರೆ ಎಂದು ಎದುರು ನೋಡುತ್ತಿವೆ.
ಕನಕಲತಾಗೆ ಮಕ್ಕಳಿಲ್ಲ: ಗಂಡ ಪ್ರೇಮನಾರಾಯಣ್ ಕಳೆದ ವರ್ಷ ಮೃತಪಟ್ಟಿದ್ದರು. "ಆಕೆ ನುಲ್ಲಾ ಬಜಾರ್‌ನ ದೇವಸ್ಥಾನ ಆವರಣದ ಪುಟ್ಟ ಕೋಣೆಯಲ್ಲಿ ಅನಾಥೆಯಂತೆ ಬದುಕು ನಡೆಸುತ್ತಿದ್ದಳು" ಎಂದು ಸ್ಥಳೀಯರಾದ ರಾಜು ಮಿಶ್ರಾ ಹೇಳುತ್ತಾರೆ.
ಆಕೆಯ ಸ್ಥಿತಿ ಕಂಡು ನೆರೆಹೊರೆಯವರು ಆಕೆಗೆ ಆಹಾರ ಹಾಗೂ ಬಟ್ಟೆ ಮತ್ತಿತರ ಅಗತ್ಯ ವಸ್ತುಗಳನ್ನು ಒದಗಿಸುತ್ತಿದ್ದರು. ಗಂಡ ಕಳೆದ ವರ್ಷ ಮೃತಪಟ್ಟ ಬಳಿಕವಂತೂ ಆಕೆಗೆ ಏನೂ ಉಳಿದಿಲ್ಲ ಎಂದು ಹೇಳಲಾಗುತ್ತಿತ್ತು. ಎರಡು ವರ್ಷ ಹಿಂದೆ ಆಕೆಯ ಪತಿ ತೀವ್ರವಾಗಿ ಅಸ್ವಸ್ಥಗೊಂಡಾಗ ಕೂಡಾ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ದು ಸರದಿಯಲ್ಲಿ ನಿಂತು ಚಿಕಿತ್ಸೆ ಪಡೆದರು ಎಂದು ಭಾರತಿ ಎಂಬ ಮಹಿಳೆ ವಿವರಿಸುತ್ತಾರೆ.
ಕೆಲ ವರ್ಷಗಳ ಹಿಂದೆ ಪುಟ್ಟ ಕೊಠಡಿಯನ್ನು ಬಾಡಿಗೆಗೆ ಪಡೆದು ವಾಸವಾಗಿದ್ದರು. ಅವರು ಬಡವರು. ಆದರೆ ಒಳ್ಳೆಯವರು. ಯಾರಿಗೂ ಅವರಿಂದ ತೊಂದರೆ ಇರಲಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಎರಡು ದಿನಗಳಿಂದ ಆಕೆ ದೇವಾಲಯ ಆವರಣದಲ್ಲಿ ಕಾಣಿಸಿಕೊಳ್ಳದಿದ್ದಾಗ ಜನ ಹೋಗಿ ಆಕೆಯ ಕೊಠಡಿಯಲ್ಲಿ ನೋಡಿದರು. ಆಗ ಆಕೆ ಮೃತಪಟ್ಟಿರುವುದು ಪತ್ತೆಯಾಯಿತು.
ದೇವಸ್ಥಾನದ ಅರ್ಚಕರು ಹಾಗೂ ಸ್ಥಳೀಯರು ಆಕೆಯ ಕೊಠಡಿಗೆ ಹೋಗಿ ನೋಡಿದಾಗ ಕೆಲ ಹಳೆ ಬಟ್ಟೆಗಳು ಮತ್ತು ಹಳೆಯ ಪೀಠೋಪಕರಣ ಇತ್ತು. ಆಕೆಯ ಮಂಚದ ಕೆಳಗೆ ಇದ್ದ ಒಂದು ಕಬ್ಬಿಣದ ಪೆಟ್ಟಿಗೆ ತೆರೆದು ನೋಡಿದಾಗ, ವಿವಿಧ ಬ್ಯಾಂಕ್‌ಗಳ ಠೇವಣಿ ಪ್ರಮಾಣಪತ್ರಗಳು ಪತ್ತೆಯಾದವು. ಎಲ್ಲವನ್ನೂ ಲೆಕ್ಕ ಹಾಕಿದಾಗ ಅದು ಎರಡು ಕೋಟಿ ರೂಪಾಯಿ ಇತ್ತು ಎಂದು ವಿವರಿಸುತ್ತಾರೆ. ಇದೀಗ ಆಕೆಯ ಅಳಿಯ ಎಂದು ಹೇಳಿಕೊಂಡು ಛತ್ತೀಸ್‌ಗಢದಿಂದ ಒಬ್ಬ ವ್ಯಕ್ತಿ ಬಂದಿದ್ದು, ಆಕೆಯ ಸಂಪತ್ತಿನ ಬಗ್ಗೆ ಹಕ್ಕು ಪ್ರತಿಪಾದಿಸಿದ್ದು, ಅದನ್ನು ಮಾನ್ಯಮಾಡುವುದು ಬ್ಯಾಂಕುಗಳಿಗೆ ಬಿಟ್ಟ ವಿಚಾರ ಎಂದು ನುಲ್ಲಾ ಬಜಾರ್‌ನ ಮುಕೇಶ್ ಹೇಳುತ್ತಾರೆ. ಆ ಹಣದಲ್ಲಿ ಅವರ ಹೆಸರಲ್ಲಿ ದೇವಸ್ಥಾನ ನಿರ್ಮಿಸುವುದು ತನ್ನ ಗುರಿ ಎಂದು ಆ ವ್ಯಕ್ತಿ ಹೇಳಿಕೊಂಡಿದ್ದಾನೆ.