ಮಧ್ಯಪ್ರದೇಶ ಸಿಎಂ ಜತೆ ವೇದಿಕೆ ಹಂಚಿಕೊಂಡದ್ದೇ ಅಪರಾಧ: ದಲಿತ ಸರಪಂಚನಿಗೆ ಧರ್ಮದೇಟು

Update: 2016-05-01 18:26 GMT

ಭೋಪಾಲ್: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾಣ್ ಜತೆ ವೇದಿಕೆ ಹಂಚಿಕೊಂಡದ್ದು ಬುಂಡೇಲ್‌ಖಂಡ ಜಿಲ್ಲೆ ಟಿಕಂಘರ್ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಸರಪಂಚರೊಬ್ಬರಿಗೆ ದುಬಾರಿಯಾಗಿ ಪರಿಣಮಿಸಿದೆ. ಇದನ್ನೇ ನೆಪವಾಗಿಟ್ಟುಕೊಂಡು ಗ್ರಾಮದ ಮೇಲ್ವರ್ಗದವರು ಇವರ ಮೇಲೆ ಹಲ್ಲೆ ನಡೆಸಿದ್ದಾರೆ.

 ಗ್ರಾಮ ಉದಯ್ ಸೇ ಭಾರತ್ ಉದಯ್ ಅಭಿಯಾನ ಕಾರ್ಯಕ್ರಮದಲ್ಲಿ ಗ್ರಾಮದ ಸರಪಂಚ ಅಲಖ್ ಪ್ರಸಾದ್ ವಾಲ್ಮೀಕಿ ಹಾಗೂ ಗ್ರಾಮಪಂಚಾಯ್ತಿ ಕಾರ್ಯದರ್ಶಿ ಬ್ರಿಜ್ ಕಿಶೋರ್ ರಾಯ್ ಅವರ ವಿರುದ್ಧ ಮೇಲ್ವರ್ಗಕ್ಕೆ ಸೇರಿದ ನೋಡೆಲ್ ಅಧಿಕಾರಿ ಸುರೇಶ್ ಅಹಿರ್ವಾರ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ ಎಂದು ಆಪಾದಿಸಲಾಗಿದೆ. ನಿನ್ನೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಗ್ರಾಮದ ಸರಪಂಚರು ಗ್ರಾಮ ಸಂಸದ್ ಕಾರ್ಯಕ್ರಮದಲ್ಲಿ ಸ್ವಾಗತಿಸಿದ್ದರು.

ಸೇಂದ್ರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ಆರು ಮಂದಿ ಆರೋಪಿಗಳ ವಿರುದ್ಧ ದೂರು ನೀಡಲಾಗಿದೆ. ಜತೆಗೆ ಜಾತಿನಿಂದನೆ ಮಾಡಿದ್ದಾಗಿಯೂ ಆರೋಪಿಸಲಾಗಿದೆ. ಹಲ್ಲೆ ನಡೆಸಿದ ಜತೆಗೆ ಪಂಚಾಯ್ತಿ ದಾಖಲೆಗಳನ್ನು ಸಾರ್ವಜನಿಕರ ಎದುರೇ ಹರಿದು ಹಾಕಿದ್ದಾರೆ. ಗ್ರಾಮಸಭೆ ನಡೆಯುತ್ತಿದ್ದಾಗಲೇ ಈ ಕೃತ್ಯ ಎಸಗಿದ್ದಾರೆ ಎಂದು ಆಪಾದಿಸಲಾಗಿದೆ.

ಈ ಮಧ್ಯೆ ನೋಡಲ್ ಅಧಿಕಾರಿ, ಸರಪಂಚ ಹಾಗೂ ಇತರರ ವಿರುದ್ಧ ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಎರಡೂ ದೂರುಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸೇಂದ್ರಿ ಠಾಣೆ ಅಧಿಕಾರಿ ಸುಬೋಧ್ ಮಿಶ್ರಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News