ಕೆನಡಾ ಕಂಪೆನಿಯಿಂದ ಕ್ಯಾನ್ ನಲ್ಲಿ ಶುದ್ಧ ಗಾಳಿ : ಪ್ರತಿ ಉಸಿರಿಗೆ 12-50 ರೂಪಾಯಿ !
ಹೊಸದಿಲ್ಲಿ, ಮೇ 2: ಇದು ಗಾಳಿ ಮಾತು ಎಂದು ಸುಮ್ಮನಾಗಬೇಡಿ. ಉಸಿರಾಟದ ಶುದ್ಧ ಗಾಳಿಯ ಬೆಲೆ ನಿಮಗೆ ಗೊತ್ತೇ? ವಿಶ್ವ ಆರೋಗ್ಯ ಸಂಸ್ಥೆಯ ಸಮೀಕ್ಷೆ ಪ್ರಕಾರ ವಿಶ್ವದ ಅತ್ಯಂತ ವಾಯುಮಾಲಿನ್ಯದ ನಗರ ಎಂಬ ಕುಖ್ಯಾತಿಗೆ ಪಾತ್ರವಾದ ದೆಹಲಿಯ ಜನರನ್ನು ಕೇಳಿ ನೋಡಿ. ಬಹುಶಃ ಅವರ ಪ್ರಕಾರ ಶುದ್ಧ ಗಾಳಿಗೆ ಬೆಲೆ ಕಟ್ಟಲಾಗದು. ಆದರೆ ಕೆನಡಾ ಕಂಪೆನಿಯೊಂದು ಒಂದು ಉಸಿರಾಟದ ಶುದ್ಧ ಗಾಳಿಯ ಮೌಲ್ 12.5 ರೂಪಾಯಿ ಎಂದು ಅಂದಾಜು ಮಾಡಿದೆ.
ಕೆನಡಾದ ಪಶ್ಚಿಮ ಪ್ರಾಂತ್ಯ ಅಲ್ಬೆರ್ಟಾದ ವೈಟಾಲಿಟಿ ಏರ್ ಎಂಬ ಆರಂಭಿಕ ಕಂಪನಿಯೊಂದು ಕ್ಯಾನ್‌ಗಳಲ್ಲಿ ತುಂಬಿಸಿದ ಶುದ್ಧ ಗಾಳಿಯನ್ನು ಭಾರತದ ಗ್ರಾಹಕರಿಗೆ ಮಾರಾಟ ಮಾಡಲು ನಿರ್ಧರಿಸಿದೆ. ಚೀನಾ ಮಾರುಕಟ್ಟೆಗೆ 2015ರಲ್ಲಿ ಪ್ರವೇಶಿಸಿದಾಗ ಇದು ದೊಡ್ಡ ಸುದ್ದಿ ಮಾಡಿತ್ತು. ಬೀಜಿಂಗ್‌ನಲ್ಲಿ ಹೊಗೆ ಮಿಶ್ರಿತ ಮಂಜು ಅತ್ಯಧಿಕವಾಗಿದ್ದು, ಮಾಲಿನ್ಯ ಪ್ರಮಾಣ ದೆಹಲಿಗೆ ಸಮನಾಗಿದೆ.
"ಕಳೆದ ಬೇಸಿಗೆಯಲ್ಲಿ ಇದನ್ನು ವಿನೂತನ ಪ್ರಯತ್ನವಾಗಿ ಆರಂಭಿಸಲಾಯಿತು. ಕ್ಯಾಲ್ಗರಿಯಲ್ಲಿ ಕಾಳ್ಗಿಚ್ಚು ವ್ಯಾಪಿಸಿದಾಗ ಇಡೀ ದಟ್ಟಹೊಗೆಯಿಂದ ತುಂಬಿತ್ತು. ಜನ ನಮ್ಮ ಉತ್ಪನ್ನ ಬಳಸಲು ಆರಂಭಿಸಿದರು" ಎಂದು ಕಂಪನಿಯ ಸಂಸ್ಥಾಪಕ ಮೊಸೆಸ್ ಲ್ಯಾಮ್ ಹೇಳುತ್ತಾರೆ. ಖನಿಜಯುಕ್ತ ನೀರಿನ ಬಾಟಲಿಯ ಮಾದರಿಯಲ್ಲೇ ಇದು ಕೂಡಾ ಜನಪ್ರಿಯವಾಗುತ್ತದೆ ಎಂಬ ಆಶಯ ಅವರದ್ದು.
ಬೀಜಿಂಗ್ ಹಾಗೂ ಶಾಂಘೈ ಸೇರಿದಂತೆ ಚೀನಾದ ಏಳು ನಗರಗಳಲ್ಲಿ ಇದೀಗ ಈ ಸೌಲಭ್ಯ ಒದಗಿಸಲಾಗುತ್ತಿದೆ. ಈಗಾಗಲೇ ಚೀನಾಗೆ 12 ಸಾವಿರ ಕ್ಯಾನ್‌ಗಳನ್ನು ಕಳುಹಿಸಲಾಗಿದೆ. ಈ ಕ್ಯಾನ್‌ನಲ್ಲಿ ಕಂಪ್ರೆಸ್ಟ್ ಏರ್ ಇದ್ದು, ಇದನ್ನು ಮಾಸ್ಕ್ ಮೂಲಕ ಉಸಿರಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಎರಡು ಸುಗಂಧಿತ ಪ್ರಕಾರಗಳಲ್ಲಿ ಲಭ್ಯವಿದ್ದು, ಬ್ನಫ್ ಹಾಗೂ ಲೇಕ್ ಲೂಸ್ ಎಂಬ ಉತ್ಪನ್ನಗಳಿವೆ. ಬ್ನಫ್ ಎನ್ನುವುದು ಅಲ್ಬೆರ್ಟಾದ ರಾಷ್ಟ್ರೀಯ ಉದ್ಯಾನವನವಾಗಿದ್ದು, ಕೆನಡಾದ ನೈಸರ್ಗಿಕ ಖಜಾನೆ ಎನಿಸಿಕೊಂಡಿದೆ. ಈ ಗಾಳಿಯನ್ನು 3 ಹಾಗೂ 8 ಲೀಟರ್‌ಗಳ ಕ್ಯಾನ್‌ಗಳಲ್ಲಿ ನೀಡಲಾಗುತ್ತದೆ. ಇದರ ದರ 1450 ರೂಪಾಯಿ ಹಾಗೂ 2800 ರೂಪಾಯಿ.
ಆದರೆ ಗಾಳಿಯನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎನ್ನುವುದ ವ್ಯಾಪಾರ ರಹಸ್ಯ. ಬೃಹರ್ ವ್ಯಾಕ್ಯೂಮ್ ಪ್ರಕ್ರಿಯೆ ಮೂಲಕ ಎಂದು ಕಂಪೆನಿ ಹೇಳುತ್ತದೆ. ಸುಮಾರು 15 ಸಾವಿರ ಲೀಟರ್ ಗಾಳಿಯನ್ನು ಎಳೆದುಕೊಳ್ಳಲು 40 ಗಂಟೆ ಬೇಕಾಗುತ್ತದೆ ಎಂದು ಲ್ಯಾಮ್ ವಿವರಿಸುತ್ತಾರೆ.