ತೆಲಂಗಾಣ: ಬಾಯಾರಿಕೆಯಿಂದ ಇಬ್ಬರು ಮಕ್ಕಳ ಸಾವು
ಹೈದರಾಬಾದ್,ಮೇ 2: ಬಾಯಾರಿಕೆಯಿಂದ ಬಸವಳಿದಿದ್ದ ಇಬ್ಬರು ಮಕ್ಕಳು ಮೃತಪಟ್ಟು, ಅವರ ತಾಯಿ ಪ್ರಜ್ಞೆ ಕಳೆದುಕೊಂಡ ಘಟನೆ ಆದಿಲಾಬಾದ್ ಜಿಲ್ಲೆಯಲ್ಲಿ ರವಿವಾರ ಸಂಜೆ ನಡೆದಿದೆ.
ಸೋಮವಾರ ಚೆನ್ನುರ ಮಂಡಳದ ಮುದ್ದರಂ ಗ್ರಾಮದ ಬಳಿ ಅರಣ್ಯ ಪ್ರದೇಶದಲ್ಲಿ ಮಧು(12) ಮತ್ತು ಅಶೋಕ(8) ಅವರ ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದರು.
ತಾಯಿ ಮತ್ತು ಮಕ್ಕಳು ಮದುವೆಯೊಂದರಲ್ಲಿ ಪಾಲ್ಗೊಳ್ಳಲು ಲಿಂಗಪಲ್ಲಿಯಿಂದ ಮುದ್ದರಂ ಗ್ರಾಮಕ್ಕೆ ತೆರಳುತ್ತಿದ್ದರು.ಅರಣ್ಯದ ಮೂಲಕ ಹಾದುಹೋಗುತ್ತಿದ್ದಾಗ ವಿಪರೀತ ಧಗೆ ಮತ್ತು ಬಾಯಾರಿಕೆಯಿಂದ ಮಕ್ಕಳಿಬ್ಬರೂ ಕುಸಿದು ಬಿದ್ದಿದ್ದರು. ಮಕ್ಕಳಿಗಾಗಿ ನೀರನ್ನು ಹುಡುಕಾಡುತ್ತಿದ್ದ ತಾಯಿಯೂ ಕುಸಿದು ಬಿದ್ದಿದ್ದಳು.
ದನಗಾಹಿಯೋರ್ವ ನೀಡಿದ ಮಾಹಿತಿಯ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು,ಆಕೆಯ ಸ್ಥಿತಿ ಚಿಂತಾಜನಕವಾಗಿದೆ.
ತೆಲಂಗಾಣ ಸತತ ಎರಡನೇ ವರ್ಷವೂ ಬರದ ದವಡೆಯಲ್ಲಿ ಸಿಲುಕಿದೆ. ಈ ಬಾರಿ ಬಿಸಿಲಿನ ತಾಪಕ್ಕೆ ಸುಮಾರು 150 ಜನರು ಬಲಿಯಾಗಿದ್ದಾರೆ. ಆದಿಲಾಬಾದ್ ಜಿಲ್ಲೆಯಲ್ಲಿ 42 ರಿಂದ 45 ಡಿ.ಸೆ.ಗರಿಷ್ಠ ತಾಪಮಾನ ದಾಖಲಾಗಿದೆ.