ಬಿಹಾರ:ಮುಖ್ಯಮಂತ್ರಿಯತ್ತ ಚಪ್ಪಲಿ ಎಸೆದ ಯುವಕನ ಬಂಧನ
ಪಟ್ನಾ,ಮೇ 2: ಸೋಮವಾರ ಇಲ್ಲಿ ಜನತಾ ದರ್ಬಾರ್‌ನಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸುತ್ತಿದ್ದ ಮುಖ್ಯಮಂತ್ರಿ ನಿತೀಶ ಕುಮಾರ್ ಅವರತ್ತ ಯುವಕನೋರ್ವ ಚಪ್ಪಲಿಯನ್ನು ತೂರಿದ್ದು,ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಹೆಸರು ಕೂಡ ನಿತೀಶ ಕುಮಾರ ಆಗಿದ್ದು ಅರ್ವಾಲ್ ಜಿಲ್ಲೆಯವನಾಗಿದ್ದಾನೆ. ಮುಖ್ಯಮಂತ್ರಿಗಳು ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯವರೆಗೆ ಹೋಮ ಹವನಗಳನ್ನು ನಿಷೇಧಿಸಿರುವುದರಿಂದ ಈತ ಸಿಟ್ಟಾಗಿದ್ದ.
ಸುಡುಬಿಸಿಲಿನಲ್ಲಿ ಬೇಯುತ್ತಿರುವ ಬಿಹಾರದಲ್ಲಿ ಅಗ್ನಿ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ಸರಕಾರವು ಈ ಅವಧಿಯಲ್ಲಿ ಅಡುಗೆ ಮಾಡುವುದನ್ನು ಮತ್ತು ಹೋಮ-ಹವನಗಳನ್ನು ನಿಷೇಧಿಸಿದೆ.
ಅವರು(ಮುಖ್ಯಮಂತ್ರಿ) ಓರ್ವ ಹಿಂದುವಾಗಿ ಧಾರ್ಮಿಕ ಸಮಾರಂಭಗಳನ್ನು ಹೇಗೆ ನಿಷೇಧಿಸುತ್ತಾರೆ ಎಂದು ಆರೋಪಿ ನಿತೀಶ ಕುಮಾರ ತನ್ನನ್ನು ಬಂಧಿಸಿದ ಪೊಲೀಸರಿಗೆ ಪ್ರಶ್ನಿಸಿದ.
ನಾವು ಯುವಕನ ಹಿನ್ನೆಲೆ ಮತ್ತು ಇದರ ಹಿಂದೆ ಒಳಸಂಚೇನಾದರೂ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪಟ್ನಾದ ಎಸ್‌ಎಸ್‌ಪಿ ಮನು ಮಹಾರಾಜ್ ಸುದ್ದಿಗಾರರಿಗೆ ತಿಳಿಸಿದರು.
ನಿಷೇಧ ಆದೇಶದ ವಿರುದ್ಧ ಅಹವಾಲೊಂದನ್ನು ಮುಖ್ಯಮಂತ್ರಿಗಳಿಗೆ ನೀಡಲು ಬಂದಿದ್ದ ಆರೋಪಿ ಬಳಿಕ ಮನಸ್ಸು ಬದಲಿಸಿ ಅವರತ್ತ ಚಪ್ಪಲಿ ಎಸೆದಿದ್ದ.
ತಾನಾತನನ್ನು ಕ್ಷಮಿಸಿದ್ದೇನೆ,ಆತನನ್ನು ಬಿಟ್ಟುಬಿಡಿ ಎಂದು ಮುಖ್ಯಮಂತ್ರಿಗಳು ಪೊಲೀಸರಿಗೆ ಹೇಳಿದರು.
ಆರೋಪಿಯು ಈ ಹಿಂದೆ ಬಿಜೆಪಿ ನಾಯಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸುಶೀಲ ಕುಮಾರ ಮೋದಿಯವರ ಜನತಾ ದರ್ಬಾರ್‌ನಲ್ಲಿಯೂ ಗಲಾಟೆ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.