×
Ad

ಉತ್ತರಾಖಂಡ ಕಾಡ್ಗಿಚ್ಚಿನ ಹಿಂದೆ ಟಿಂಬರ್-ಭೂಮಾಫಿಯಾ?

Update: 2016-05-02 23:56 IST

ಡೆಹ್ರಾಡೂನ್, ಮೇ 2: ಬೆಟ್ಟರಾಜ್ಯ ಉತ್ತರಾಖಂಡವನ್ನು ಕಂಗೆಡಿಸಿದ ಭೀಕರ ಕಾಡ್ಗಿಚ್ಚಿಗೆ ಕಾರಣ ಏನು ಎಂಬ ಬಗ್ಗೆ ಹಲವಾರು ಊಹಾಪೋಹಗಳು ಹುಟ್ಟಿಕೊಂಡಿವೆ. ರಾಜ್ಯದ ಇತಿಹಾಸದಲ್ಲೇ ಅತ್ಯಂತ ಭೀಕರ ಎನಿಸಿದ ಈ ಕಾಡ್ಗಿಚ್ಚಿನ ಹಿಂದೆ ಮರ ಮಾರಾಟ ಹಾಗೂ ಭೂಮಾಫಿಯಾ ದಂಧೆ ಇದೆ ಎಂಬ ವಿಶ್ಲೇಷಣೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಕೆಲವರ ಪ್ರಕಾರ ಇದು ಮರ ಮಾರಾಟಗಾರರ ಕೃತ್ಯ. ಹಲವು ಮರಗಳು ಸುಟ್ಟರೆ ತಮಗೆ ಲಾಭವಾಗುತ್ತದೆ ಎಂಬ ಲೆಕ್ಕಾಚಾರದಿಂದ ಈ ಕೃತ್ಯ ಎಸಗಿದ್ದಾರೆ. ಪರಿಸರವಾದಿಗಳ ಪ್ರಕಾರ, ಈ ಭೀಕರ ಕಾಡ್ಗಿಚ್ಚಿನಿಂದಾಗಿ ಮಳೆ ಕಡಿಮೆಯಾಗಿ, ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕೊರತೆಯಾಗಲಿದೆ. ಅರಣ್ಯ ಪ್ರದೇಶದ ಮಣ್ಣು ಕೂಡಾ ಅಧಿಕ ಬಿಸಿಗೆ ಒಗ್ಗಿಕೊಳ್ಳುತ್ತದೆ.

ಈ ಮರ ಮಾರಾಟ ಮಾಫಿಯಾ ಅರಣ್ಯ ಅಭಿವೃದ್ಧಿ ನಿಗಮದ ಜತೆ ಕೈಜೋಡಿಸಿದೆ. ಸತ್ತ ಹಾಗೂ ಒಣ ಮರಗಳನ್ನು ನಿಗಮ ಹರಾಜಿನ ಮೂಲಕ ಮಾರಾಟ ಮಾಡುತ್ತದೆ. ಇದೀಗ ಸಾವಿರಾರು ಮರಗಳು ಸುಟ್ಟುಹೋಗಿವೆ. ಇವುಗಳ ಮಾರಾಟದಿಂದ ನಿಗಮಕ್ಕೆ ದೊಡ್ಡ ಆದಾಯ ಸಿಗಲಿದ್ದು, ಇದು ಮರ ಮಾರಾಟ ಮಾಫಿಯಾಗೆ ಕೂಡಾ ದೊಡ್ಡ ಮೊತ್ತದ ಲಾಭ ತರುತ್ತದೆ.
ಅರಣ್ಯ ನಾಶವಾದ ಪ್ರದೇಶವನ್ನು ಭೂ ಪರಿವರ್ತನೆ ಉದ್ದೇಶಗಳಿಗೆ ನೀಡಬಹುದು ಎಂಬ ಕಾರಣಕ್ಕೆ ಭೂ ಮಾಫಿಯಾ ಕೂಡಾ ಇದರ ಹಿಂದೆ ಕೆಲಸ ಮಾಡುತ್ತಿದೆ ಎನ್ನಲಾಗಿದೆ. ಆದರೆ ಸರಕಾರ ಇಂಥ ಪರಿಸ್ಥಿತಿ ಎದುರಿಸಲು ಸಜ್ಜಾಗಿಲ್ಲದೇ ಇದ್ದುದೇ ಈ ಭೀಕರತೆಗೆ ಕಾರಣ ಎಂದು ಪರಿಸರವಾದಿಗಳಾದ ಅನಿಲ್ ಜೋಶಿ ಹಾಗೂ ಸುರೇಶ್ ಭಾಯ್ ಅಭಿಪ್ರಾಯಪಡುತ್ತಾರೆ.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News