×
Ad

ನೀಟ್: ರಾಜ್ಯಗಳ ಮನವಿ ಆಲಿಕೆಗೆ ಸುಪ್ರೀಂ ಸಮ್ಮತಿ

Update: 2016-05-02 23:58 IST

ಹೊಸದಿಲ್ಲಿ, ಮೇ 2: ಎಂಬಿಬಿಎಸ್ ಹಾಗೂ ಬಿಡಿಎಸ್ ಕೋರ್ಸ್ ಗಳ ಪ್ರವೇಶಾತಿಗಾಗಿ ಪೂರ್ವನಿಗದಿತ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ನಡೆಸಲು ತಮಗೆ ಅನುಮತಿ ನೀಡಬೇಕೆಂದು ಕೋರಿ ಜಮ್ಮುಕಾಶ್ಮೀರ ಸಹಿತ ಕೆಲವು ರಾಜ್ಯಗಳು ಮತ್ತು ಕೆಲವು ಖಾಸಗಿ ವೈದ್ಯಕೀಯ ಕಾಲೇಜುಗಳು ಹೊಸತಾಗಿ ಸಲ್ಲಿಸಿರುವ ಮನವಿಯನ್ನು ಆಲಿಸಲು ಸುಪ್ರೀಂಕೋರ್ಟ್ ಸೋಮವಾರ ಸಮ್ಮತಿಸಿದೆ.

ಸಂಬಂಧಪಟ್ಟ ನ್ಯಾಯಪೀಠವು ಈ ಅರ್ಜಿಗಳ ಆಲಿಕೆಯನ್ನು ನಾಳೆ ನಡೆಸಲಿದೆಯೆಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠವು ತಿಳಿಸಿದೆ.

.....

ಲೋಕಸಭೆಯಲ್ಲಿ ತೀವ್ರ ವಿರೋಧ

ಹೊಸದಿಲ್ಲಿ, ಮೇ 2: ಈ ವರ್ಷದಿಂದ ವೈದ್ಯಕೀಯ ಶಿಕ್ಷಣ ಕೋರ್ಸ್ ಗಳಿಗೆ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಯನ್ನು ನಡೆಸುವ ನಿರ್ಧಾರಕ್ಕೆ ಲೋಕಸಭೆಯಲ್ಲಿ ವಿವಿಧ ಪಕ್ಷಗಳ ಸಂಸದರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ರೀತಿಯ ಪರೀಕ್ಷೆಯನ್ನು ನಡೆಸುವುದಕ್ಕೆ ಕೆಲವೊಂದು ಪ್ರಾಯೋಗಿಕ ಸಮಸ್ಯೆಗಳೂ ಇವೆಯೆಂದು ಕೇಂದ್ರ ಸರಕಾರ ಕೂಡ ಒಪ್ಪಿಕೊಂಡಿದೆ.

ದೇಶಾದ್ಯಂತ ವೈದ್ಯಕೀಯ ಕೋರ್ಸ್‌ಗಳಿಗೆ ನೀಟ್ ಪರೀಕ್ಷೆಯನ್ನು ನಡೆಸುವ ನಿರ್ಧಾರವನ್ನು ಸುಪ್ರೀಂಕೋರ್ಟ್ ಕೈಗೊಂಡಿದೆಯೇ ಹೊರತು ಕೇಂದ್ರ ಸರಕಾರವಲ್ಲವೆಂದು ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ನೀಟ್ ಪರೀಕ್ಷೆ ಕುರಿತಂತೆ ಸದನದ ಸದಸ್ಯರ ಕಳವಳಗಳನ್ನು ತಾನು ಆರೋಗ್ಯ ಸಚಿವರಿಗೆ ತಿಳಿಸಲಿದ್ದು, ಅವರು ಆ ಬಗ್ಗೆ ಕಾನೂನು ಅಧಿಕಾರಿಗಳ ಜೊತೆ ಸಮಾಲೋಚಿಸಲಿದ್ದಾರೆಂದು ಅವರು ತಿಳಿಸಿದ್ದಾರೆ. ನೀಟ್ ಪರೀಕ್ಷೆಯನ್ನು ನಡೆಸುವ ನಿರ್ಧಾರವು ಅವಸರದ್ದಾಗಿದೆ ಹಾಗೂ ಅಪ್ರಾಯೋಗಿಕವಾಗಿದೆ. ಇದು ವಿದ್ಯಾರ್ಥಿಗಳ ಪೋಷಕರಲ್ಲಿ ತೀವ್ರ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆಯೆಂದು ವೇಣುಗೋಪಾಲ್ ಹೇಳಿದ್ದಾರೆ.

ನೀಟ್ ಪರೀಕ್ಷೆಗೆ ತನ್ನ ವಿರೋಧವಿಲ್ಲ. ಆದರೆ ಅದನ್ನು ಮುಂದಿನ ವರ್ಷದಿಂದ ಜಾರಿಗೊಳಿಸಬೇಕು. ಈಗಾಗಲೇ ಕೆಲವು ರಾಜ್ಯಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗಳನ್ನು ನಡೆಸಿರುವುದಾಗಿ ಅವರು ಸದನದ ಗಮನಸೆಳೆದರು. ನೀಟ್ ಪರೀಕ್ಷೆಯನ್ನು ಮೇ 1 ಹಾಗೂ ಜುಲೈ 24ರಂದು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ ಕೇಳಿದ ಪ್ರಶ್ನೆಗಳನ್ನು ಎರಡನೆ ಹಂತದ ಪರೀಕ್ಷೆಯಲ್ಲಿ ಕೇಳಲಾಗುವುದಿಲ್ಲವಾದ ಕಾರಣ , ವಿದ್ಯಾರ್ಥಿಗಳ ಮಧ್ಯೆ ತಾರತಮ್ಯವೆಸಗಿದಂತಾಗುತ್ದದೆಯೆಂದವರು ಆಪಾದಿಸಿದರು.

ನೀಟ್ ಪರೀಕ್ಷೆಯಿಂದಾಗಿ ಮಹಾರಾಷ್ಟ್ರದ ಶೇ.80ರಷ್ಟು ವಿದ್ಯಾರ್ಥಿಗಳು ಬಾಧಿತರಾಗಲಿದ್ದಾರೆ ಎಂದು ಇನ್ನೋರ್ವ ಕಾಂಗ್ರೆಸ್ ಸದಸ್ಯ ರಾಜೀವ್ ಸತಾವ್ ಟೀಕಿಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ವಿಶೇಷ ರಜಾಕಾಲದ ಅರ್ಜಿಯನ್ನು ಸಲ್ಲಿಸುವಂತೆಯೂ ಅವರು ಸರಕಾರವನ್ನು ಆಗ್ರಹಿಸಿದರು.

ನೀಟ್ ಪರೀಕ್ಷಾ ಪದ್ಧತಿಯನ್ನು ಆಳವಡಿಸಿಕೊಳ್ಳುವುದಕ್ಕೆ ರಾಜ್ಯಗಳಿಗೆ 2018ನೆ ಇಸವಿಯತನಕವೂ ಸಮಯಾವಕಾಶ ನೀಡಬೇಕೆಂದು ಕೆಲವು ಸದಸ್ಯರು ಒತ್ತಾಯಿಸಿದರು.

ಪ್ರವೇಶಾಕಾಂಕ್ಷಿಗಳಲ್ಲಿ ಮುಗಿಯದ ಗೊಂದಲ

ಹೊಸದಿಲ್ಲಿ, ಮೇ 2: ಎಲ್ಲ ವೈದ್ಯಕೀಯ ಕಾಲೇಜುಗಳಿಗೆ ಒಂದೇ ಪ್ರವೇಶ ಪರೀಕ್ಷೆ ಅಥವಾ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ(ನೀಟ್)ಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿದ್ದು, ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಈ ಬಗ್ಗೆ ವಿಚಾರಣೆಯನ್ನು ನಡೆಸಲಿದೆ. ಕೆಲವು ರಾಜ್ಯಗಳು ಮತ್ತು ಖಾಸಗಿ ಕಾಲೇಜುಗಳು ತಮ್ಮ ಸ್ವಂತ ಪರೀಕ್ಷೆಗಳನ್ನೇ ಮುಂದುವರಿಸಲು ಬಯಸಿವೆ.

ಈ ಕುರಿತ ಹತ್ತು ಬೆಳವಣಿಗೆಗಳು ಇಲ್ಲಿವೆ: ರವಿವಾರ ನಡೆದ ಮೊದಲ ಹಂತದ ನೀಟ್ ಪರೀಕ್ಷೆಗೆ ಆರು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಮೇ 1ರ ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆ(ಎಐಪಿಎಂಟಿ)ಯನ್ನು ಮೊದಲ ಹಂತದ ನೀಟ್ ಎಂದು ಪರಿಗಣಿಸಲಾಗುವುದು ಮತ್ತು ಇನ್ನು ಮುಂದೆ ರಾಜ್ಯ ಪರೀಕ್ಷೆಗಳಿರುವುದಿಲ್ಲ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರವಷ್ಟೇ ಎತ್ತಿ ಹಿಡಿದಿದ್ದರಿಂದ ಹೆಚ್ಚಿನ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಲುಕಿದ್ದರು.

ಎಐಪಿಎಂಟಿಗೆ ಅರ್ಜಿಯನ್ನು ಸಲ್ಲಿಸಿರದ ವಿದ್ಯಾರ್ಥಿಗಳಿಗೆ ಜು.24ರಂದು ನಡೆಯಲಿರುವ ಎರಡನೆ ಹಂತದ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಲಾಗುವುದು ಎಂದೂ ನ್ಯಾಯಾಲಯವು ಹೇಳಿದೆ. ಇವೆರಡೂ ಪರೀಕ್ಷೆಗಳ ಫಲಿತಾಂಶಗಳು ಆಗಸ್ಟ್ 17ರಂದು ಪ್ರಕಟವಾಗಲಿವೆ.

ನೀಟ್ ಫಲಿತಾಂಶದ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ನ್ಯಾಯಾಲಯವು ಎಲ್ಲ ಮೆಡಿಕಲ್ ಕಾಲೇಜುಗಳಿಗೆ ಆದೇಶಿಸಿದೆ. ಇದರರ್ಥ ಏಮ್ಸ್‌ನಂತಹ ಪ್ರತಿಷ್ಠಿತ ಸಂಸ್ಥೆಗಳು ಇನ್ನು ಮುಂದೆ ತಮ್ಮದೇ ಆದ ಪ್ರವೇಶ ಪರೀಕ್ಷೆಗಳನ್ನು ನಡೆಸುವಂತಿಲ್ಲ.

ನ್ಯಾಯಾಲಯದ ನಿರ್ಣಯವು ಹೆಚ್ಚಿನ ವಿದ್ಯಾರ್ಥಿಗಳಿಗೆ, ವಿಶೇಷವಾಗಿ ರಾಜ್ಯ ಶಿಕ್ಷಣ ಮಂಡಳಿಗಳ ವಿದ್ಯಾರ್ಥಿಗಳಿಗೆ ಆಘಾತವನ್ನುಂಟು ಮಾಡಿದೆ. ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಧೀನದ ನೀಟ್‌ನ ಪಠ್ಯಕ್ರಮವು ರಾಜ್ಯಗಳಿಗಿಂತ ಭಿನ್ನವಾಗಿದೆ ಮತ್ತು ಕಠಿಣವಾಗಿದೆ ಎನ್ನುವುದು ಈ ವಿದ್ಯಾರ್ಥಿಗಳ ಅಳಲು.

ಕೇಂದ್ರೀಯ ಮಂಡಳಿಯು ನಡೆಸುವ ಅಖಿಲ ಭಾರತ ಪರೀಕೆಯು ಸಂಪೂರ್ಣವಾಗಿ ವಿಭಿನ್ನ ಮಾದರಿಯನ್ನು ಅನುಸರಿಸುತ್ತದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಎರಡನೆ ಹಂತದ ಪರೀಕ್ಷೆಗೆ ಹಾಜರಾಗಲಿರುವ ವಿದ್ಯಾರ್ಥಿಗಳಿಗೆ ಸಿದ್ಧತೆಗಾಗಿ ಹೆಚ್ಚಿನ ಸಮಯಾವಕಾಶ ದೊರೆಯುತ್ತಿದೆ ಮತ್ತು ಇದರಿಂದ ತಮಗೆ ಅನ್ಯಾಯವಾದಂತಾಗಿದೆ ಎಂದು ರವಿವಾರ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಹು ಪ್ರವೇಶ ಪರೀಕ್ಷೆಗಳು ಮತ್ತು ಭ್ರಷ್ಟಾಚಾರವನ್ನು ತೊಡೆದು ಹಾಕಲು ನೀಟ್ ನೆರವಾಗಲಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿಯು ನಂಬಿದೆ.

ಸರ್ವೋಚ್ಚ ನ್ಯಾಯಾಲಯವು 2013ರಲ್ಲಿ ನೀಟ್ ಪರೀಕ್ಷೆಯನ್ನು ಕಾನೂನು ಬಾಹಿರ ಮತ್ತು ಅಸಾಂವಿಧಾನಿಕ ಎಂದು ಘೋಷಿಸಿತ್ತು. ಮುಂದಿನ ವರ್ಷದಿಂದ ಎಲ್ಲ ಎಂಬಿಬಿಎಸ್ ಮತ್ತು ಬಿಡಿಎಸ್ ಪರೀಕ್ಷೆಗಳಿಗೆ ಒಂದೇ ಹಂತದಲ್ಲಿ ನೀಟ್ ನಡೆಯಲಿದೆ.

ಆಂಧ್ರ ಪ್ರದೇಶ,ಮಹಾರಾಷ್ಟ್ರ,ತಮಿಳುನಾಡು ಮತ್ತು ಕರ್ನಾಟಕಗಳಂತಹ ರಾಜ್ಯಗಳು ಪ್ರತ್ಯೇಕ ಪರೀಕ್ಷೆಗಳನ್ನು ನಡೆಸಲು ಅವಕಾಶ ನೀಡಬೇಕೇ ಬೇಡವೇ ಎಂಬ ಬಗ್ಗೆ ಸರ್ವೋಚ್ಚ ನ್ಯಾಯಾಲಯವು ಮೇ 3ರಂದು ವಿಚಾರಣೆ ನಡೆಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News