ದೇವಾಲಯಗಳ ಧ್ವಂಸಕ್ಕೆ ಅವಕಾಶ ನೀಡಲ್ಲ: ಹಫೀಝ್ ಸಯೀದ್

Update: 2016-05-03 12:16 GMT

ಇಸ್ಲಾಮಾಬಾದ್, ಮೇ 3: ಪಾಕಿಸ್ತಾನದಲ್ಲಿರುವ ಹಿಂದೂ ದೇವಾಲಯಗಳು ಹಾಗೂ ಮುಸ್ಲಿಮೇತರರ ಪ್ರಾರ್ಥನಾ ಮಂದಿರಗಳನ್ನು ಕೆಡವಲು ಅವಕಾಶ ನೀಡುವುದಿಲ್ಲ ಎಂದು ಆ ದೇಶದ ನಿಷೇಧಿತ ಭಯೋತ್ಪಾದಕ ಸಂಘಟನೆ ಜೆಯುಡಿ ಮುಖ್ಯಸ್ಥ ಹಫೀಝ್ ಸಯೀದ್ ಹೇಳಿದ್ದಾನೆ.

ತಮ್ಮ ಹಿಂದೂ ಬಾಂಧವರ ಪವಿತ್ರ ಸ್ಥಳಗಳನ್ನು ರಕ್ಷಿಸುವುದು ಮುಸ್ಲಿಮರ ಜವಾಬ್ದಾರಿ ಎಂದು ಸೋಮವಾರ ಸಿಂಧ್ ಪ್ರಾಂತದ ಮಾತ್ಲಿ ಪಟ್ಟಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಆತ ಹೇಳಿದ್ದಾನೆ.

ಭಾರತದೊಂದಿಗೆ ಗಡಿ ಹೊಂದಿರುವ ಸಿಂಧ್‌ನ ಬಡ ಹಾಗೂ ಬರಪೀಡಿತ ಥಾರ್ ವಲಯದಲ್ಲಿ ಧಾರ್ಮಿಕ ಶಾಲೆಗಳನ್ನು ಸ್ಥಾಪಿಸುವ ಮೂಲಕ ತನ್ನ ಸಂಘಟನೆಯು ಈ ಪ್ರದೇಶದಲ್ಲಿ ಉಗ್ರವಾದವನ್ನು ಬೆಳೆಸುತ್ತಿದೆ ಎಂಬ ಆರೋಪಗಳನ್ನು ಜಮಾತ್ ಉದ್ ದಾವ (ಜೆಯುಡಿ) ಮುಖ್ಯಸ್ಥ ತಳ್ಳಿಹಾಕಿದನು. ಇದೇ ಸಂದರ್ಭದಲ್ಲಿ ಸಯೀದ್ ಕಾಶ್ಮೀರಿ ಮುಸ್ಲಿಮರಿಗೆ ಬೆಂಬಲ ವ್ಯಕ್ತಪಡಿಸಿದನು ಎಂದು ‘ಡಾನ್’ ವರದಿ ಮಾಡಿದೆ.

ದೇಶ ವಿರೋಧಿ ಶಕ್ತಿಗಳು ಮತ್ತು ‘ರಾ’ ಏಜಂಟರ ವಿರುದ್ಧ ಹೋರಾಡಲು ಕಾನೂನು ಅನುಷ್ಠಾನ ಸಂಸ್ಥೆಗಳು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುತ್ತಿವೆ ಎಂದು ಹೇಳಿದ ಆತ, ಆದರೆ, ನವಾಝ್ ಶರೀಫ್ ಸರಕಾರ ಈ ವಿಷಯದಲ್ಲಿ ವೌನ ತಾಳಿದೆ ಎಂದನು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News