ಶೌಚ ಸೌಲಭ್ಯದಲ್ಲಿ ಸುಧಾರಣೆ: ಭಾರತೀಯನಿಗೆ ವಿಶ್ವಸಂಸ್ಥೆ ಗೌರವ
ವಿಶ್ವಸಂಸ್ಥೆ, ಮೇ 3: ಶೌಚ ಸೌಲಭ್ಯಗಳಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ತೆಗೆದುಕೊಂಡ ಮುಂದಾಳುತ್ವ ಹಾಗೂ ಹೊಸತನದ ಯೋಚನೆಗಳಿಗಾಗಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಸಾಮಾಜಿಕ ಕಾರ್ಯಕರ್ತರನ್ನು ವಿಶ್ವಸಂಸ್ಥೆಯ ಮುಖ್ಯಸ್ಥ ಬಾನ್ ಕಿ ಮೂನ್ ಕೊಂಡಾಡಿದ್ದಾರೆ.
ಬಡತನವನ್ನು ಹೋಗಲಾಡಿಸುವ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಮಾಡಿದ ಪ್ರಯತ್ನಗಳಿಗಾಗಿ ಭಾರತದ ಸ್ವಾಧ ಸ್ಯಾನಿಟೇಶನ್ ಸೋಶಿಯಲ್ ಬಿಸ್ನೆಸ್‌ನ ಸಹ ಸ್ಥಾಪಕ ಕೆ.ಸಿ. ಮಿಶ್ರಾ (56)ರ ಕಥನ ಸಾಕ್ಷಚಿತ್ರವೊಂದರಲ್ಲಿ ವಸ್ತುವಾಗಿದೆ.
‘‘ನೈಜ ಜಗತ್ತಿನ ಸಮಸ್ಯೆಗಳೊಂದಿಗೆ ವ್ಯವಹರಿಸುವಲ್ಲಿ ಅವರ ನಾಯಕತ್ವ ಮತ್ತು ಹೊಸತನದ ಯೋಚನೆಗಳು ನಮಗೆ ಪ್ರೇರಣೆ ನೀಡುತ್ತವೆ’’ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ತನ್ನ ಭಾಷಣದಲ್ಲಿ ಹೇಳಿದರು.
ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಕ್ರಮವೊಂದರಲ್ಲಿ ಸೋಮವಾರ ನಡೆದ ಚರ್ಚೆಯಲ್ಲಿ ಮಿಶ್ರಾ ಭಾಗವಹಿಸಿದರು. ಅವರ ಜೊತೆಗೆ ಕಾರ್ಯಕ್ರಮದಲ್ಲಿ ಎಸ್ಟೋನಿಯ, ಕೋಸ್ಟರಿಕ ಮತ್ತು ಉಗಾಂಡಗಳ ಸಾಮಾಜಿಕ ಕಾರ್ಯಕರ್ತರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.