ಹಸಿದಿದ್ದರೆ ಸ್ವಲ್ಪ ಆಹಾರ ಕದಿಯುವುದು ಅಪರಾಧವಲ್ಲ: ಇಟಲಿ ಸುಪ್ರೀಂ ಕೋರ್ಟ್
ರೋಮ್, ಮೇ 3: ಯಾರಾದರೂ ಹಸಿದಿದ್ದರೆ ಹಾಗೂ ಮನೆಯಿಲ್ಲದಿದ್ದರೆ, ಸ್ವಲ್ಪ ಆಹಾರವನ್ನು ಕದಿಯುವುದನ್ನು ಅಪರಾಧ ಎಂಬಂತೆ ಪರಿಗಣಿಸಬಾರದು ಎಂದು ಇಟಲಿಯ ಅತ್ಯುನ್ನತ ನ್ಯಾಯಾಲಯ ಹೇಳಿದೆ.
2011ರಲ್ಲಿ ಯುಕ್ರೇನ್ ಪ್ರಜೆ ರೋಮನ್ ಒಸ್ಟ್ರಿಕೊವ್ ಉತ್ತರ ಇಟಲಿಯ ಗೆನೋ ನಗರದಲ್ಲಿ ಅಲೆಮಾರಿ ಬದುಕು ಸಾಗಿಸುತ್ತಿದ್ದರು. ಒಂದು ದಿನ ಸೂಪರ್ ಮಾರ್ಕೆಟ್ ಒಂದರಿಂದ 4.71 ಡಾಲರ್ (ಸುಮಾರು 313 ರೂಪಾಯಿ) ವೌಲ್ಯದ ಚೀಸ್ ಮತ್ತು ಸಾಸ್ ಕದಿಯಲು ಪ್ರಯತ್ನಿಸುವಾಗ ಸಿಕ್ಕಿಬಿದ್ದರು.
ಕಳ್ಳತನ ಸಾಬೀತಾಗಿ ಆರು ತಿಂಗಳ ಶಿಕ್ಷೆ ಹಾಗೂ 100 ಯುರೋ ದಂಡ ವಿಧಿಸಲ್ಪಟ್ಟಿತು.
ಆದರೆ, ಆತನನ್ನು ಕಳ್ಳತನದ ಆರೋಪದಲ್ಲಿ ಶಿಕ್ಷಿಸಬಾರದು, ಕಳ್ಳತನಕ್ಕೆ ಪ್ರಯತ್ನಿಸಿದ ಆರೋಪದಲ್ಲಿ ಶಿಕ್ಷಿಸಬೇಕು ಎಂಬ ತಾಂತ್ರಿಕ ಅಂಶವನ್ನು ಮುಂದಿಟ್ಟುಕೊಂಡು ಸರಕಾರಿ ಪ್ರಾಸಿಕ್ಯೂಟರ್ ಮೇಲ್ಮನವಿ ಸಲ್ಲಿಸಿದರು.
ಆಗ ಇಟಲಿಯ ಸುಪ್ರೀಂ ಕೋರ್ಟ್ ಈ ತೀರ್ಪನ್ನು ವಜಾಗೊಳಿಸಿತು.
‘‘ಆರೋಪಿಯ ಪರಿಸ್ಥಿತಿ ಮತ್ತು ಆತ ಆ ಆಹಾರ ಪದಾರ್ಥಗಳನ್ನು ಪಡೆದ ಸನ್ನಿವೇಶಗಳು, ತನ್ನ ತಕ್ಷಣದ ಅಗತ್ಯವಾದ ಹಸಿವನ್ನು ನಿವಾರಿಸುವುದಕ್ಕಾಗಿ ಆತ ಸ್ವಲ್ಪ ಆಹಾರವನ್ನು ತೆಗೆದುಕೊಂಡನೆಂಬುದನ್ನು ತೋರಿಸುತ್ತದೆ. ಅದನ್ನು ಅಪರಾಧ ಎಂಬುದಾಗಿ ಭಾವಿಸಬಾರದು’’ ಎಂದು ಅದು ತನ್ನ ತೀರ್ಪಿನಲ್ಲಿ ಹೇಳಿದೆ.