ಪಾಕಿಸ್ತಾನ ಅಮೆರಿಕದ ವಸಾಹತು ಅಲ್ಲ

Update: 2016-05-03 17:55 GMT

ಇಸ್ಲಾಮಾಬಾದ್, ಮೇ 3: ಅಲ್‌ಖಾಯಿದ ಭಯೋತ್ಪಾದಕ ಉಸಾಮ ಬಿನ್ ಲಾದನ್‌ನ ವಾಸ ಸ್ಥಳವನ್ನು ಪತ್ತೆಹಚ್ಚಲು ಸಿಐಎಗೆ ಸಹಾಯ ಮಾಡಿದ್ದ ವೈದ್ಯರನ್ನು ಜೈಲಿನಿಂದ ಬಿಡುಗಡೆಗೊಳಿಸುವಂತೆ ತಾನು ಪಾಕಿಸ್ತಾನದ ಮೇಲೆ ಒತ್ತಡ ಹೇರುವೆ ಎಂಬ ಹೇಳಿಕೆ ನೀಡಿದ್ದ ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಡೊನಾಲ್ಡ್ ಟ್ರಂಪ್‌ಗೆ ಪಾಕಿಸ್ತಾನ ಕೋಪದ ಪ್ರತಿಕ್ರಿಯೆ ನೀಡಿದೆ.
ತಾನು ಅಧ್ಯಕ್ಷನಾಗಿ ಆಯ್ಕೆಯಾದರೆ, ಶಕೀಲ್ ಅಫ್ರಿದಿಯನ್ನು ಎರಡು ನಿಮಿಷಗಳಲ್ಲಿ ಪಾಕಿಸ್ತಾನ ಬಿಡುಗಡೆ ಮಾಡುವಂತೆ ಮಾಡುವೆ, ಯಾಕೆಂದರೆ ಪಾಕಿಸ್ತಾನ ಅಮೆರಿಕದಿಂದ ಭಾರೀ ಪ್ರಮಾಣದಲ್ಲಿ ಅಭಿವೃದ್ಧಿ ನೆರವು ಪಡೆಯುತ್ತಿದೆ ಎಂದು ‘ಫಾಕ್ಸ್ ನ್ಯೂಸ್’ಗೆ ಶುಕ್ರವಾರ ನೀಡಿದ್ದ ಸಂದರ್ಶನವೊಂದರಲ್ಲಿ ಟ್ರಂಪ್ ಹೇಳಿದ್ದರು.

‘‘ಟ್ರಂಪ್ ಭಾವಿಸಿರುವಂತೆ ಪಾಕಿಸ್ತಾನ ಅಮೆರಿಕದ ವಸಾಹತು ಅಲ್ಲ’’ ಎಂದು ಪಾಕಿಸ್ತಾನದ ಆಂತರಿಕ ಸಚಿವ ಚೌಧರಿ ನಿಸಾರ್ ಸೋಮವಾರ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ತಿಳಿಸಿದರು.
‘‘ಅಫ್ರಿದಿಯ ಹಣೆಬರಹವನ್ನು ನಿರ್ಧರಿಸುವುದು ಪಾಕಿಸ್ತಾನದ ನ್ಯಾಯಾಲಯಗಳು ಮತ್ತು ಪಾಕಿಸ್ತಾನ ಸರಕಾರ, ಡೊನಾಲ್ಡ್ ಟ್ರಂಪ್ ಅಲ್ಲ. ಅವರು ಅಮೆರಿಕದ ಅಧ್ಯಕ್ಷರಾದರೂ ಅದು ಅವರಿಗೆ ಸಾಧ್ಯವಿಲ್ಲ’’ ಎಂದು ಹೇಳಿಕೆ ತಿಳಿಸಿದೆ.
 
ಅಫ್ರಿದಿಯನ್ನು ಅಮೆರಿಕ ಹೀರೊ ಆಗಿ ಪರಿಗಣಿಸಿದೆ. ಆದರೆ, ಪಾಕಿಸ್ತಾನ ಅವರನ್ನು ಭಯೋತ್ಪಾದಕ ಗುಂಪು ಲಷ್ಕರೆ ಇಸ್ಲಾಮ್‌ನ ಸದಸ್ಯ ಎಂದು ಆರೋಪಿಸಿ 2012ರಲ್ಲಿ ಅವರಿಗೆ 33 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ, ತನ್ನ ಮೇಲಿನ ಆರೋಪವನ್ನು ಅವರು ನಿರಾಕರಿಸಿದ್ದಾರೆ. ಆದರೆ, ಈ ಶಿಕ್ಷೆಯನ್ನು ಮೇಲಿನ ನ್ಯಾಯಾಲಯವೊಂದು ರದ್ದುಪಡಿಸಿದೆ. ಈಗ ಅಫ್ರಿದಿ ಇನ್ನೊಂದು ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News