ನಿಮ್ಮದೇ ಹಣದಿಂದ ಎಫ್-16 ಖರೀದಿಸಿ

Update: 2016-05-03 18:01 GMT

ವಾಶಿಂಗ್ಟನ್, ಮೇ 3: ನಿಮ್ಮದೇ ಹಣದಿಂದ ಎಫ್-16 ಯುದ್ಧ ವಿಮಾನಗಳನ್ನು ಖರೀದಿಸಿ ಎಂದು ಅಮೆರಿಕ ಪಾಕಿಸ್ತಾನಕ್ಕೆ ಸೂಚಿಸಿದೆ. ಪಾಕಿಸ್ತಾನಕ್ಕೆ ಮಾರಾಟ ಮಾಡುವ ಯುದ್ಧ ವಿಮಾನಗಳಿಗೆ ಅಮೆರಿಕದ ತೆರಿಗೆದಾರರ ಹಣದಿಂದ ಸಬ್ಸಿಡಿ ನೀಡಲು ಅಮೆರಿಕದ ಕೆಲವು ಉನ್ನತ ಸೆನೆಟರ್‌ಗಳು ತಡೆ ವಿಧಿಸಿದ್ದಾರೆ ಎಂದು ಅದು ಹೇಳಿದೆ.
‘‘ಯುದ್ಧ ವಿಮಾನಗಳ ಮಾರಾಟಕ್ಕೆ ಕಾಂಗ್ರೆಸ್ ಅನುಮೋದನೆ ನೀಡಿದೆಯಾದರೂ, ಮಾರಾಟದಲ್ಲಿ ಎಫ್‌ಎಂಎಫ್ (ವಿದೇಶಿ ಸೇನಾ ನೆರವು) ನಿಧಿಯನ್ನು ಬಳಸುವುದಕ್ಕೆ ತಮ್ಮ ಆಕ್ಷೇಪವಿದೆ ಎಂಬುದಾಗಿ ಕೆಲವು ಸದಸ್ಯರು ಹೇಳಿದ್ದಾರೆ. ಕಾಂಗ್ರೆಸ್‌ನ ಆಕ್ಷೇಪದ ಹಿನ್ನೆಲೆಯಲ್ಲಿ, ಖರೀದಿಗೆ ತಮ್ಮದೇ ನಿಧಿಯನ್ನು ಬಳಸಬೇಕು ಎಂಬುದಾಗಿ ನಾವು ಪಾಕಿಸ್ತಾನಕ್ಕೆ ಸೂಚಿಸಿದ್ದೇವೆ’’ ಎಂದು ಅಮೆರಿಕದ ವಿದೇಶ ಇಲಾಖೆಯ ವಕ್ತಾರ ಜಾನ್ ಕಿರ್ಬಿ ಸೋಮವಾರ ದೈನಂದಿನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆದಾಗ್ಯೂ, ಈ ನಿರ್ಧಾರವನ್ನು ಯಾವಾಗ ತೆಗೆದುಕೊಳ್ಳಲಾಯಿತು ಹಾಗೂ ಪಾಕಿಸ್ತಾನಕ್ಕೆ ಯಾವಾಗ ತಿಳಿಸಲಾಯಿತು ಎಂಬುದನ್ನು ಕಿರ್ಬಿ ಹೇಳಲಿಲ್ಲ.
ಎಂಟು ಎಫ್-16 ಯುದ್ಧ ವಿಮಾನಗಳನ್ನು ಪಾಕಿಸ್ತಾನಕ್ಕೆ ಸುಮಾರು 70 ಕೋಟಿ ಡಾಲರ್ (ಸುಮಾರು 4,650 ಕೋಟಿ ರೂಪಾಯಿ) ವೆಚ್ಚದಲ್ಲಿ ಮಾರಾಟ ಮಾಡುವ ತನ್ನ ನಿರ್ಧಾರವನ್ನು ವಿದೇಶಾಂಗ ಇಲಾಖೆಯು ಅಮೆರಿಕದ ಕಾಂಗ್ರೆಸ್‌ಗೆ ಫೆಬ್ರವರಿ 11ರಂದು ತಿಳಿಸಿತ್ತು.

 ಈ ನಿರ್ಧಾರವನ್ನು ಭಾರತ ಪ್ರತಿಭಟಿಸಿತು ಹಾಗೂ ತನ್ನ ಪ್ರತಿಭಟನೆಯನ್ನು ತಿಳಿಯಪಡಿಸುವುದಕ್ಕಾಗಿ ಅಮೆರಿಕದ ರಾಯಭಾರಿ ರಿಚರ್ಡ್‌ವರ್ಮರನ್ನು ಕರೆಸಿತು.
ಅಮೆರಿಕ ದಲ್ಲಿ ಸೆನೆಟರ್ ಬಾಬ್ ಕಾರ್ಕರ್ ನೇತೃತ್ವದ ಅಮೆರಿಕದ ಉನ್ನತ ಸಂಸದರು ಮಾರಾಟಕ್ಕೆ ತಡೆ ಹೇರಿದರು. ಪಾಕಿಸ್ತಾನಕ್ಕೆ ಯುದ್ಧ ವಿಮಾನಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲು ಅಮೆರಿಕದ ಪ್ರಜೆಗಳ ತೆರಿಗೆ ಹಣವನ್ನು ಬಳಸುವುದಕ್ಕೆ ಅವರು ವಿರೋಧ ವ್ಯಕ್ತಪಡಿಸಿದ್ದರು. ಅದೂ ಅಲ್ಲದೆ, ಈ ವಿಮಾನಗಳನ್ನು ಪಾಕಿಸ್ತಾನ ಭಾರತದ ವಿರುದ್ಧ ಬಳಸಬಹುದು ಎಂಬ ಭೀತಿಯನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಬೇರೆ ಕಡೆಯಿಂದ ಪಡೆಯುವೆ: ಪಾಕ್

ಇಸ್ಲಾಮಾಬಾದ್, ಮೇ 3: ಎಫ್-16 ಯುದ್ಧ ವಿಮಾನಗಳ ಖರೀದಿಗೆ ಅಮೆರಿಕ ಹಣ ಒದಗಿಸದಿದ್ದರೆ ಪಾಕಿಸ್ತಾನ ಬೇರೆ ಕಡೆಯಿಂದ ಈ ವಿಮಾನಗಳನ್ನು ಪಡೆದುಕೊಳ್ಳುವುದು ಎಂದು ಪಾಕಿಸ್ತಾನದ ಪ್ರಧಾನಿಯ ವಿದೇಶ ವ್ಯವಹಾರಗಳ ಸಲಹೆಕಾರ ಸರ್ತಾಝ್ ಅಝೀಝ್ ಎಚ್ಚರಿಸಿದ್ದಾರೆ.

ಈಗಿನ ಒಪ್ಪಂದದ ಪ್ರಕಾರ, 8 ಎಫ್-16 ವಿಮಾನಗಳನ್ನು ಖರೀದಿಸಲು ಪಾಕಿಸ್ತಾನ 27 ಕೋಟಿ ಡಾಲರ್ (1,793 ಕೋಟಿ ರೂಪಾಯಿ) ಮೊತ್ತವನ್ನು ಪಾವತಿಸಬೇಕಾಗಿತ್ತು. ಉಳಿದ 2,857 ಕೋಟಿ ರೂಪಾಯಿ ಮೊತ್ತವನ್ನು ಅಮೆರಿಕ ಭರಿಸಬೇಕಾಗಿತ್ತು. ಎಫ್-16 ವಿಮಾನಗಳ ಪರಿಣಾಮಕಾರಿ ಕಾರ್ಯನಿರ್ವಹಣೆಗಾಗಿ ಪಾಕಿಸ್ತಾನ ಆ ವಿಮಾನಗಳನ್ನು ಬಯಸಿತ್ತು. ಆದರೆ, ಭಯೋತ್ಪಾದಕರ ವಿರುದ್ಧದ ಸಮರದಲ್ಲಿ ಆ ವಿಮಾನಗಳ ಬದಲು ಜೆಎಫ್-17 ತಂಡರ್ ವಿಮಾನಗಳನ್ನು ಬಳಸಬಹುದಾಗಿದೆ ಎಂದು ಅಝೀಝ್ ಹೇಳಿರುವುದಾಗಿ ‘ಡಾನ್’ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News