ಸಮಾನ ಮನಸ್ಕ ಸಂಘಟನೆಗಳ ಒಕ್ಕೂಟದಿಂದ ಕಮಿಷನರ್‌ಗೆ ಮನವಿ

Update: 2016-05-03 18:56 GMT

ಮಂಗಳೂರು, ಮೇ 3: ಇತ್ತೀಚೆಗೆ ವಿಧ್ವಂಸಕ ಕೃತ್ಯದಿಂದ ಜೀವ ಕಳಕೊಂಡ ಅಮಾಯಕರಾದ ರಾಜು ಕೋಟ್ಯಾನ್, ಸೈಫಾನ್ ಹಾಗೂ ಗಾಯಾಳುಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಸಫ್ವಾನ್ ಮತ್ತು ಇಬ್ರಾಹೀಂ ಸಫ್ವಾನ್‌ರಿಗೆ ಸೂಕ್ತ ಪರಿಹಾರ ಕೊಡಿಸುವಂತೆ ಸಮಾನ ಮನಸ್ಕ ಸಂಘಟನೆಗಳ ಪರವಾಗಿ ಜಿಲ್ಲಾಧಿಕಾರಿ ಹಾಗೂ ಮಂಗಳೂರು ಪೊಲೀಸ್ ಕಮಿಷನರ್‌ಗೆ ಮನವಿ ಸಲ್ಲಿಸಲಾಯಿತು.
ಮೃತರಾದ ರಾಜು ಕೋಟ್ಯಾನ್, ಸೈಫಾನ್ ಮತ್ತು ಗಾಯಾಳುಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ತೀರಾ ಬಡ ಕುಟುಂಬಕ್ಕೆ ಸೇರಿದವರಾಗಿದ್ದು, ಅವರು ಯಾವುದೇ ಕಾನೂನು ವಿರೋಧಿ ಕೃತ್ಯ ಗಳಲ್ಲಿ ಭಾಗವಹಿಸಿದವರಲ್ಲ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಸರಕಾರದ ವತಿಯಿಂದ ಮೃತರ, ಗಾಯಾಳುಗಳ ಕುಟುಂಬಗಳಿಗೆ ಆರ್ಥಿಕ ಸಹಾಯ ಕೊಡಿಸುವಂತೆ ಮನವಿ ಮಾಡಲಾಯಿತು.

ಕಾನೂನು ಸುವ್ಯವಸ್ಥೆ, ಪ್ರಾಣ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳ ಸಂರ ಕ್ಷಣೆಯ ಹಿತದೃಷ್ಟಿಯಿಂದ ಉಳ್ಳಾಲ, ಸೋಮೇಶ್ವರ, ತಣ್ಣೀರುಬಾವಿ ಸಹಿತ ಕರಾವಳಿಯುದ್ದಕ್ಕೂ ವ್ಯಾಪಕವಾಗಿ ಹರಡಿಕೊಂಡಿರುವ ಗಾಂಜಾ, ಅಫೀಮು ಮುಂತಾದ ಮಾದಕ ವಸ್ತುಗಳ ಮಾರಾಟ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡುವಂತೆ ಆಗ್ರಹಿಸಲಾಯಿತು.

ನಿಯೋಗದಲ್ಲಿ ಮುಸ್ಲಿಮ್ ಸಂಘ ಟನೆಗಳ ಒಕ್ಕೂಟದ ದ.ಕ. ಜಿಲ್ಲಾಧ್ಯಕ್ಷ ಕೆ. ಅಶ್ರಫ್, ಮಂಗಳೂರಿನ ಹಿದಾಯ ಫೌಂಡೇಶನ್‌ನ ಅಧ್ಯಕ್ಷ ಇಮ್ತಿಯಾಝ್ ಜಿ.ಎ., ಹೈಲ್ಯಾಂಡ್ ಇಸ್ಲಾಮಿಕ್ ಫೋರಂನ ಸದಸ್ಯ ಮುಹಮ್ಮದ್ ರಿಝ್ವಾನ್, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಮಾಧ್ಯಮ ಕಾರ್ಯದರ್ಶಿ ಶಬ್ಬೀರ್ ಅಹ್ಮದ್, ಎಪಿಸಿಆರ್ ದ.ಕ. ಜಿಲ್ಲಾ ಸಂಚಾಲಕ ಅಡ್ವೊಕೇಟ್ ಸರ್ಫರಾಝ್, ಬ್ಯಾರಿ ಸಾಹಿತ್ಯ ಪರಿಷತ್‌ನ ಜಿಲ್ಲಾ ಉಪಾಧ್ಯಕ್ಷ ಹಮೀದ್ ಕುದ್ರೋಳಿ, ಸಿ.ಎಂ. ಮುಸ್ತಫಾ, ಪಿ.ಪಿ. ಮಜೀದ್, ಎಸ್‌ಐಒ ತಲ್ಹಾ ಇಸ್ಮಾಯೀಲ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News