ತುಂಬೆ ಶುದ್ಧೀಕರಣ ಘಟಕದಲ್ಲಿ ಭಾರೀ ಪ್ರಮಾಣದ ನೀರು ಪೋಲು!

Update: 2016-05-03 18:56 GMT

ಬಂಟ್ವಾಳ, ಮೇ 3: ದ.ಕ., ಉಡುಪಿ, ಕೊಡಗು ಜಿಲ್ಲೆ ಗಳನ್ನು ಹೊರೆತುಪಡಿಸಿ ಉಳಿದ ಎಲ್ಲ ಜಿಲ್ಲೆಗಳನ್ನು ಬರ ಪೀಡಿತ ಜಿಲ್ಲೆಗಳೆಂದು ರಾಜ್ಯ ಸರಕಾರ ಘೋಷಿಸಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಬರಿದಾಗಿದ್ದು, ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ. ಇದರಿಂದ ಮಂಗಳೂರು ಮಹಾನಗರ ಪಾಲಿಕೆಗೆ ಬರ ಬಿಸಿ ಮೂಡಿಸಿದೆ. ಕಳೆದ ವರ್ಷದ ಈ ದಿನದಂದು 13 ಅಡಿ ನೀರಿದ್ದ ತುಂಬೆ ಡ್ಯಾಂನಲ್ಲಿ ಇಂದು 6 ಅಡಿ ಮಾತ್ರ ನೀರಿದೆ. ಅಂದರೆ ಮಂಗಳೂರು ನಗರಕ್ಕೆ ಇನ್ನು 4-5 ದಿನ ಮಾತ್ರ ನೀರು ಪೂರೈಸಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಮಂಗಳೂರು ಮಹಾನಗರಕ್ಕೆ ನೀರು ಪೂರೈಸುವ ತುಂಬೆ ನೀರು ಶುದ್ಧೀಕರಣ ಘಟಕದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ!
ತುಂಬೆ ವೆಂಟೆಡ್ ಡ್ಯಾಂನ ಪಕ್ಕದಲ್ಲೇ ಇರುವ ಪಂಪ್‌ಹೌಸ್‌ನಿಂದ ತುಂಬೆ ಗ್ರಾಪಂನ ಬಳಿಯಿರುವ ನೀರು ಶುದ್ಧೀಕರಣ ಘಟಕಕ್ಕೆ ನದಿಯಿಂದ ನೀರನ್ನು ಪಂಪ್ ಮಾಡಲಾಗುತ್ತದೆ. ಇಲ್ಲಿ ನೀರನ್ನು ಶುದ್ಧೀಕರಿಸಿ ಬಳಿಕ ಮನಪಾಕ್ಕೆ ಪೂರೈಸಲಾಗುತ್ತದೆ. ಆದರೆ, ಶುದ್ಧೀಕರಣ ಘಟಕದಲ್ಲಿ ನೀರು ಶೇಖರಣೆಗೆ ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ದಿನನಿತ್ಯ ಭಾರೀ ಪ್ರಮಾಣದಲ್ಲಿ ನೀರು ವ್ಯರ್ಥವಾಗುತ್ತಿದೆ. ಘಟಕ ದಿಂದ ಹೊರ ಹರಿಯುವ ಈ ನೀರು ಮತ್ತೆ ಡ್ಯಾಂಗೆ ಸೇರದೆ ಡ್ಯಾಂ ಕೆಳಭಾಗದ ಉಪ್ಪುನೀರನ್ನು ಸೇರುತ್ತಿರುವುದು ಇದಕ್ಕೆ ಕಾರಣ. ಶುದ್ಧೀಕರಣ ಘಟಕದ ಶೇಖರಣಾ ಟ್ಯಾಂಕ್ ತುಂಬಿ ಟ್ಯಾಂಕ್‌ನಿಂದ ಭಾರೀ ಪ್ರಮಾಣದಲ್ಲಿ ಹೊರ ಭಾಗದಲ್ಲಿರುವ ಮೂರು ತೋಡುಗಳ ಮೂಲಕ ನದಿ ಸೇರುತ್ತಿದೆ. ಇದು ನಿತ್ಯ ಪ್ರಕ್ರಿಯೆಯಾಗಿದ್ದು, ಬರದಿಂದ ತತ್ತರಿಸಿರುವ ಈ ದಿನಗಳಲ್ಲಿ ವ್ಯರ್ಥವಾಗು ತ್ತಿರುವ ಈ ನೀರಿನ ಸದ್ಬಳಕೆಯಾದರೆ ಮಂಗಳೂರಿನ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರವಾಗುತ್ತಿತ್ತು ಎಂದು ಸ್ಥಳೀಯಾಡಳಿತ ಸಂಸ್ಥೆಗಳ ಪ್ರತಿನಿಧಿಗಳು ಅಭಿಪ್ರಾಯಪಡುತ್ತಾರೆ. ಇದಲ್ಲದೆ, ನೀರು ಶುದ್ಧೀಕರಣದ ವೇಳೆ ಹೊರ ಸೂಸಲ್ಪಡುವ ಮಲಿನ ನೀರು ಕೂಡಾ ಈ ತೋಡುಗಳ ಮೂಲಕ ನದಿ ಸೇರುತ್ತಿದೆ. ಈ ನೀರನ್ನು ಕೂಡಾ ಬಳಕೆಯೋಗ್ಯವನ್ನಾಗಿ ಮಾಡಬಹುದು. ಇಲ್ಲಿನ ಅಧಿಕಾರಿಗಳೇ ಹೇಳುವ ಪ್ರಕಾರ ಘಟಕದಿಂದ ಹೊರ ಸೂಸುವ ಮಲಿನ ನೀರನ್ನು ಶೇಖರಿಸಿ ಮತ್ತೆ ಶುದ್ಧೀಕರಿಸಿ ದಿನಬಳಕೆಗೆ ಉಪಯೋಗಿಸಬಹುದು. ರಾಜ್ಯದ ಬಹುತೇಕ ಮಹಾನಗರ ಪಾಲಿಕೆಗಳಲ್ಲಿ ಇಂತಹ ವ್ಯವಸ್ಥೆ ಇದೆ. ಆದರೆ ನಮ್ಮ ಘಟಕದಲ್ಲಿ ಆ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿ ನೀರು ಪೋಲಾಗುತ್ತಿದೆ ಎನ್ನುತ್ತಾರೆ. ''ಶುದ್ಧೀಕರಣದ ವೇಳೆ ಪೋಲಾಗುತ್ತಿರುವ ನೀರನ್ನು ಸಂಗ್ರಹಿಸಿ ಬಳಕೆಯೋಗ್ಯವನ್ನಾಗಿಸಲು ಅಗತ್ಯವಾದ ವ್ಯವಸ್ಥೆ ಕಲ್ಪಿಸುವಷ್ಟು ಅನುದಾನ ಸ್ಥಳೀಯ ಗ್ರಾಪಂನಲ್ಲಿಲ್ಲ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಕ್ಕೆ ಮನಪಾ ಹಾಗೂ ಜಿಪಂಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇದಕ್ಕೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ'' ಎಂದು ಸ್ಥಳೀಯ ತುಂಬೆ ಹಾಗೂ ಕಳ್ಳಿಗೆ ಗ್ರಾಪಂ ಜನಪ್ರತಿನಿಧಿಗಳು ಆರೋಪಿಸಿದ್ದಾರೆ.

ಅಧಿಕಾರಿಗಳಲ್ಲೇ ಗೊಂದಲ
ನೀರು ಪೋಲಾಗುತ್ತಿರುವ ಬಗ್ಗೆ ತುಂಬೆ ನೀರು ಶುದ್ಧೀಕರಣ ಘಟಕದ ಅಧಿಕಾರಿಗಳು ಹಾಗೂ ಮನಪಾ ಅಧಿಕಾರಿಗಳು ವ್ಯತಿರಿಕ್ತ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಮೂಡಿ ಸುತ್ತಿದ್ದಾರೆ. ಘಟಕದಿಂದ ಹೊರ ಹರಿಯುತ್ತಿರುವುದು ಮಲಿನ ನೀರು ಎಂದು ಶುದ್ಧೀಕರಣ ಘಟಕದ ಅಧಿಕಾರಿಗಳು ಹೇಳಿದರೆ, ಮಂಗಳೂರು ನಗರದ ಎತ್ತರ ಪ್ರದೇಶಗಳಿಗೆ ನೀರು ತಲುಪುವಂತೆ ಮಾಡಲು ನೀರಿನ ಪ್ರೆಷರ್ ಹೆಚ್ಚಿಸುವುದು ನೀರು ಪೋಲಾಗಲು ಕಾರಣ ಎಂದು ಮನಪಾ ಅಧಿಕಾರಿಗಳು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ನೀರು ಪೋಲಾಗುತ್ತಿರುವುದಂತು ಸತ್ಯ.

ಪೋಲಾದರೂ ನಮಗೆ ನೀಡುತ್ತಿಲ್ಲ
ಮನಪಾಗೆ ಸೇರಿದ ತುಂಬೆ ವೆಂಟೆಡ್ ಡ್ಯಾಂ, ಪಂಪ್‌ಹೌಸ್, ನೀರು ಶುದ್ಧೀಕರಣ ಘಟಕ ಇರುವ ತುಂಬೆ ಹಾಗೂ ಕಳ್ಳಿಗೆ ಗ್ರಾಮ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆ ಉದ್ಭವಿಸಿದೆ. ಕಡಿದಾದ ಗುಡ್ಡ ಪ್ರದೇಶಗಳನ್ನೇ ಹೊಂದಿರುವ ಕಳ್ಳಿಗೆ ಗ್ರಾಮದಲ್ಲಿ ಇದು ಇನ್ನೂ ಗಂಭೀರವಾಗಿದೆ. ''ನೀರಿಗಾಗಿ ನಾವು ಇಷ್ಟೆಲ್ಲ ಸಂಕಷ್ಟಕ್ಕೊಳಗಾಗಿದ್ದರೂ ತುಂಬೆ ನೀರು ಶುದ್ಧೀಕರಣ ಘಟಕದಲ್ಲಿ ನಮ್ಮ ಕಣ್ಣೆದುರೇ ದಿನನಿತ್ಯ ಭಾರೀ ಪ್ರಮಾಣದಲ್ಲಿ ನೀರು ಪೋಲಾಗುತ್ತಿರುವುದು ಕಂಡರೆ ಬೇಸರವಾಗುತ್ತದೆ'' ಎಂದು ನೀರು ಶುದ್ಧೀಕರಣ ಘಟಕದ ಸಮೀಪದ ನಿವಾಸಿಗಳು ಹೇಳುತ್ತಾರೆ.
ನೀರು ಶುದ್ಧೀಕರಣ ಘಟಕದ ಟ್ಯಾಂಕ್ ಭರ್ತಿಗೊಂಡು ಹೊರ ಹರಿಯುವ ನೀರನ್ನು ಒಂದೆಡೆ ಶೇಖರಿಸಿ ಪಂಪ್ ಮೂಲಕ ಸ್ಥಳೀಯ ಗ್ರಾಮಗಳಿಗೆ ಒದಗಿಸುವಂತೆ ಮನಪಾಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ಈ ಬಗ್ಗೆ ಮನಪಾ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯ ಗ್ರಾಮ ಪಂಚಾಯತ್‌ನ ಪ್ರತಿನಿಧಿಗಲು ತಮ್ಮ ವಿಫಲ ಪ್ರಯತ್ನದ ಬಗ್ಗೆ ಹೇಳುತ್ತಾರೆ.

ಅಧಿಕಾರಿಗಳ ನಿರ್ಲಕ್ಷ
 ತುಂಬೆ ಡ್ಯಾಂನಲ್ಲಿ ನೀರಿನ ಅಭಾವ ಉಂಟಾಗಿ ರುವುದರಿಂದ ಎಚ್ಚೆತ್ತುಕೊಂಡಿರುವ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಇದೀಗ ಪರ್ಯಾಯ ನೀರಿನ ಮೂಲಗಳನ್ನು ಹುಡುಕಲು ಶುರು ಮಾಡಿದ್ದಾರೆ. ಅದರಂತೆ ಮನಪಾ ವ್ಯಾಪ್ತಿಯಲ್ಲಿ ಈಗಾಗಲೇ 200 ನೀರಿನ ಮೂಲಗಳನ್ನು ಗುರುತಿಸಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಟ್ಯಾಂಕರ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳುತ್ತಿದ್ದಾರೆ. ಎಎಂಆರ್ ಡ್ಯಾಂನಿಂದ ಸರಾಗವಾಗಿ ತುಂಬೆ ಡ್ಯಾಂವರೆಗೆ ನೀರು ಹರಿಯುವಂತಾಗಲು ಲಕ್ಷಾಂತರ ರೂ. ವ್ಯಹಿಸಿ ಬಂಡೆ ಒಡೆಯುವ ಕಾರ್ಯ ಮಾಡಲಾಗುತ್ತಿದೆ. ಇಷ್ಟೆಲ್ಲ ದುಬಾರಿ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ತುಂಬೆ ನೀರು ಶುದ್ಧೀಕರಣ ಘಟಕದಲ್ಲಿ ದಿನ ನಿತ್ಯ ವ್ಯರ್ಥವಾಗುತ್ತಿರುವ ಭಾರೀ ಪ್ರಮಾಣದ ನೀರನ್ನು ಮರುಬಳಕೆ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ತೋರು ತ್ತಿದ್ದಾರೆ ಸ್ಥಳೀಯರು ಆರೋಪಿಸುತ್ತಿದ್ದಾರೆ.

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News