ಕುಡಿಯುವ ನೀರನ್ನು ಪೋಲು ಮಾಡಬೇಡಿ: ಎ.ಬಿ.ಇಬ್ರಾಹೀಂ

Update: 2016-05-03 19:03 GMT

ಮಂಗಳೂರು, ಮೇ 3: ದ.ಕ. ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ವಿಪರೀತವಾದ ಬಿಸಿಲಿನ ತಾಪದಿಂದ ಭೂಮಿಯಲ್ಲಿಯ ಅಂತರ್ ಜಲಮಟ್ಟ ಕುಸಿಯುತ್ತಿದ್ದು ದ.ಕ. ಜಿಲ್ಲೆಯಲ್ಲಿ ಅಲ್ಲಲ್ಲಿ ತೆರೆದ ಬಾವಿ, ಕೊಳವೆ ಬಾವಿ, ಕೆರೆಗಳಂತಹ ಸಾರ್ವಜನಿಕ ಜಲಾಶಯಗಳು ಬತ್ತಿ ಹೋಗಿವೆ. ಪ್ರಾಣಿ ಪಕ್ಷಿಗಳಿಗೆ ಹಾಗೂ ಜನ ಸಾಮಾನ್ಯರಿಗೂ ಕುಡಿಯುವ ನೀರಿನ ಜಲಾಕ್ಷಮ ಉಂಟಾಗಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಕುಡಿಯುವ ನೀರಿನ ಬಗ್ಗೆ ಸಮಸ್ಯೆ ಈಗಾಗಲೇ ತಲೆದೋರಿದೆ. ಆದ್ದರಿಂದ ನೀರನ್ನು ಪೋಲು ಮಾಡದೆ ಮಿತವಾಗಿ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮನವಿ ಮಾಡಿದ್ದಾರೆ.

ಕಳೆದ ಸಾಲಿನಲ್ಲಿ ಈ ಅವಧಿಯಲ್ಲಿ ಬಿದ್ದಿರುವ ಮಳೆ 94.2 ಮಿ.ಮೀ. ಆಗಿದ್ದರೆ, ಈ ಬಾರಿ ಕೇವಲ 9.4 ಮಿ.ಮೀ. ಮಳೆ ಆಗಿರುವುದು ಮತ್ತು ಸರಾಸರಿ ಗರಿಷ್ಠ 38 ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶ ಏರಿರುವುದು ಜಲಕ್ಷಾಮಕ್ಕೆ ಪ್ರಮುಖ ಕಾರಣವಾಗಿದೆ. ಎಪ್ರಿಲ್ ಕೊನೆಯಲ್ಲಿ ಅಥವಾ ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆ ಬಾರದೆ ತುಂಬೆಯ ವೆಂಟೆಡ್ ಡ್ಯಾಮ್‌ನಲ್ಲಿ ಹರಿದು ಬರುವ ನೀರಿನ ಶೇಖರಣೆ ಕುಸಿಯುತ್ತಿದೆ. ಪ್ರಸಕ್ತ ಲಭ್ಯ ಇರುವ ನೀರನ್ನು ಕೃಷಿ ಉದ್ದೇಶ ಅಥವಾ ಇತರೆ ಉದ್ದೇಶಗಳ ಉಪಯೋಗಕ್ಕೆ ನಿಯಂತ್ರಣಗೊಳಿಸಿ ನೀರು ಅಪವ್ಯಯವಾಗದಂತೆ ಜಾಗ್ರತೆ ವಹಿಸಿ ಮಳೆ ಪ್ರಾರಂಭವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಉಪಯೋಗಿಸಲು ಒತ್ತು ನೀಡಿ ಹಿತಮಿತವಾಗಿ ಬಳ ಸಲು ಜನಸಾಮಾನ್ಯರು ಕ್ರಮ ವಹಿಸಬೇಕಾಗಿದೆ. ನಗರ ಸ್ಥಳೀಯ ಸಂಸ್ಥೆಗಳು ಕುಡಿಯುವ ನೀರಿನ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರನ್ನು ಮಳೆ ಪ್ರಾರಂಭವಾಗುವ ಅವಧಿವರೆಗೆ ದಿನನಿತ್ಯ ಸೀಮಿತ ಅವಧಿಯಲ್ಲಿ ಸರಬರಾಜು ಮಾಡಲು ಸೂಕ್ತ ಯೋಜನೆ ರೂಪಿಸಲು ಕೂಡ ತಿಳಿಸಲಾಗಿದೆ. ಆದ್ದರಿಂದ ನಗರ ಪ್ರದೇಶದ ಎಲ್ಲಾ ನಾಗರಿಕರು, ನೀರನ್ನು ಹಿತಮಿತವಾಗಿ ಬಳಸುವಂತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಜನರು ತುಂಬೆ ವೆಂಟೆಡ್ ಡ್ಯಾಮ್‌ಗೆ ಹರಿದು ಬರುವ ನೀರಿಗೆ ತಡೆ ಒಡ್ಡಿ ಕೃಷಿಗೆ ನೀರನ್ನು ಬಳಸಿ ಕುಡಿಯುವ ನೀರಿನ ಅಭಾವಕ್ಕೆ ಕಾರಣವಾಗದಂತೆ ಜಿಲ್ಲಾಡಳಿತದಿಂದ ವಿನಂತಿಸಲಾಗಿದೆ. ಜಿಲ್ಲೆಯ ಪಕ್ಷಿ ಸಂಕುಲ ಕೂಡ ಕುಡಿಯುವ ನೀರಿನ ಅಭಾವ ಎದುರಿಸುವುದರಿಂದ ಚಿಕ್ಕ ಪಾತ್ರೆಯಲ್ಲಿ ನೀರನ್ನು ತುಂಬಿ ಮನೆಯ ತಾರಸಿನ ಮೇಲೆ ಇಟ್ಟು ಪಕ್ಷಿಗಳಿಗೂ ನೀರು ಒದಗಿಸಿ ಮಾನವೀಯತೆಯನ್ನು ಮೆರೆಯಬೇಕೆಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News