ಪ್ರಧಾನಿ ಮೋದಿ ಎಂ ಎ ಸರ್ಟಿಫಿಕೇಟ್ ನಲ್ಲಿ ಮತ್ತಷ್ಟು ಎಡವಟ್ಟುಗಳು !
ಹೊಸದಿಲ್ಲಿ, ಮೇ 4: ಇತ್ತೀಚೆಗೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಪ್ರಧಾನಿ ನರೇಂದ್ರ ಮೋದಿಯವರ ಎಂ ಎ ಸರ್ಟಿಫಿಕೇಟಿನ ನಕಲನ್ನು ಪ್ರಕಟಿಸಿತ್ತು. ಮೋದಿಯ ಡಿಗ್ರಿ ಸರ್ಟಿಫಿಕೇಟ್ ಗಳನ್ನು ಬಹಿರಂಗಗೊಳಿಸಬೇಕೆಂದು ಗುಜರಾತ್ ಹಾಗೂ ದೆಹಲಿ ವಿಶ್ವವಿದ್ಯಾಲಯಗಳಿಗೆ ಮುಖ್ಯ ಮಾಹಿತಿ ಆಯುಕ್ತ ಎಂ ಶ್ರೀಧರ್ ಆಚಾರ್ಯುಲು ಅವರ ಆದೇಶದಿಂದ ಪ್ರಧಾನ ಮಂತ್ರಿಗಳ ಕಾರ್ಯಾಲಯ ತನ್ನ ಅಸಮಾಧಾನ ವ್ಯಕ್ತಪಡಿಸಿದೆಯೆಂದೂ ಟೈಮ್ಸ್ ವರದಿ ಹೇಳಿತ್ತು.
ಗುಜರಾತ್ ವಿಶ್ವವಿದ್ಯಾಲಯ ಸೋರಿಕೆ ಮಾಡಿದ ಮೋದಿಯ ದಾಖಲಾತಿ ಅರ್ಜಿಯಲ್ಲಿದ್ದ ಎಡವಟ್ಟುಗಳಂತೆ ಅವರ ಎಂ ಎ ಡಿಗ್ರಿ ಸರ್ಟಿಫಿಕೇಟಿನಲ್ಲೂ ಹಲವು ಎಡವಟ್ಟುಗಳಿವೆಯೆಂದು ತಿಳಿಯಲಾಗಿದೆ.
‘‘ಅದೊಂದು ಡುಪ್ಲಿಕೇಟ್ ಸರ್ಟಿಫಿಕೇಟ್. ಆರ್ಟಿಐ ಪ್ರಕಾರ ನಮಗೆ ಮೂಲ ಪ್ರತಿಯನ್ನು ಒದಗಿಸಬೇಕು. ಅದು ಪ್ರಮಾಣೀಕೃತ ಎಂದು ತಿಳಿಸುತ್ತದೆ. ಹಾಗಾದರೆ ಗುಜರಾತ್ ವಿಶ್ವವಿದ್ಯಾಲಯದಲ್ಲಿ ಅವರ ಸರ್ಟಿಫಿಕೇಟ್ ಇದೆಯೆಂದು ಅರ್ಥ. ಇಲ್ಲಿ ಮೋದಿಯವರ ಮೇಜರ್ ವಿಷಯ ‘ಎಂಟೈರ್ ಪೊಲಿಟಿಕಲ್ ಸಾಯನ್ಸ್.’ ಪ್ರಾಯಶಃ ಮೇಜರ್ ಸಬ್ಜೆಕ್ಟ್ ವಿಚಾರದಲ್ಲಿ ಎಂಟೈರ್ ಪದ ಪ್ರಯೋಗ ಮಾಡಿರುವ ಪ್ರಥಮ ಉದಾಹರಣೆ ಇದೆಂದು ಹೇಳಬಹುದು. ಮೇಲಾಗಿ ಇಲ್ಲಿ ಅವರ ತಂದೆ ದಾಮೋದರ್ ದಾಸ್ ಹೆಸರಿನ ಆಂಗ್ಲ ಸ್ಪೆಲ್ಲಿಂಗ್ ಕೂಡ ಭಿನ್ನವಾಗಿದೆ. ಅಂದ ಹಾಗೆ ಇದು ಮೋದಿಯವರ ನಾಲ್ಕನೇ ಅವತಾರವೆಂದೇ ಹೇಳಬಹುದು. ಮೊದಲನೆಯದು ಅವರ ಜನ್ಮ ದಿನಾಂಕಕ್ಕೆ ಸಂಬಂಧ ಪಟ್ಟಿದ್ದಾದರೆ, ಎರಡನೆಯದು ಎಂ ಎನ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭ 1967ರಲ್ಲಿ ಹಿಮಾಲಯಕ್ಕೆ ಹೋಗಿರುವುದು, ಮೂರನೆಯದು ಈಗ ಬೇರೆ ಮಧ್ಯ ಹೆಸರಿನೊಂದಿಗಿನ ಅವರ ಅವತಾರ. ಮೇಲಾಗಿ ಈ ಸರ್ಟಿಫಿಕೇಟಿನಲ್ಲಿ 01-04-2016 ದಿನಾಂಕ ನಮೂದಿಸಲಾಗಿದೆ. ಅದು ಮೂರ್ಖರ ದಿನವಾಗಿದೆ. ಅದಕ್ಕಿಂತ ಮೊದಲು ಮುಖ್ಯ ಚುನಾವಣಾ ಆಯುಕ್ತರು ಯಾವುದೇ ದಾಖಲೆಯ ಪ್ರತಿ ನೀಡಲು ಆದೇಶಿಸಿಲ್ಲ ಹಾಗೂ ವಿಶ್ವವಿದ್ಯಾಲಯ ಈ ಹಿಂದೆ ಆರ್‌ಟಿಐ ಕಾರ್ಯಕರ್ತರಿಗೆ ಅವರ ದಾಖಲೆಯ ಪ್ರತಿಗಳನ್ನು ನಿರಾಕರಿಸಿತ್ತು. ಹಾಗಿರುವಾಗಿ ಗುಜರಾತ್ ವಿಶ್ವವಿದ್ಯಾಲಯದಿಂದ ಏಕೆ ದಾಖಲೆಯ ನಕಲನ್ನು ಕೇಳಲಾಯಿತು? ಅದನ್ನು ಅನುಮತಿಸಿದವರು ಯಾರು?’’ ಎಂದು ಅಹಮದಾಬಾದ್ ಮೂಲದ ಆರ್‌ಟಿಐ ಕಾರ್ಯಕರ್ತ ರೋಶನ್ ಶಾ ಹೇಳುತ್ತಾರೆ.
ಗುಜರಾತ್ ವಿಶ್ವವಿದ್ಯಾಲಯ ಕಳೆದ ವಾರ ಬಹಿರಂಗಗೊಳಿಸಿದ ಮೋದಿಯವರ ಪ್ರವೇಶಾತಿ ಸರ್ಟಿಫಿಕೇಟ್ ಪ್ರಧಾನಿಯವರ ಜನ್ಮ ದಿನಾಂಕವನ್ನು ಅವರ ಅಧಿಕೃತ ಪುಟದಲ್ಲಿರುವ ಜನ್ಮ ದಿನಾಂಕದಿಂದ ಒಂದು ವರ್ಷ ಹೆಚ್ಚೇ ತೋರಿಸಿದೆ.