ಅಸಾರಾಮ್ ನಂತೆ ರಾಮದೇವ್ ಜೈಲಿಗೆ ಹೋಗುತ್ತಾರೆ ಎಂದಿದ್ದ ಲಾಲೂರಿಂದ ಈಗ ಗುಣಗಾನ !
ಪಾಟ್ನಾ, ಮೇ 4: ಆರ್ ಜೆ ಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಈಗ ಯೋಗ ಗುರು ರಾವದೇವ್ ಅವರ ಅಭಿಮಾನಿಯಾಗಿ ಬಿಟ್ಟಿದ್ದಾರೆಂದು ಅನಿಸುತ್ತದೆ. ಬುಧವಾರದಂದು ರಾವದೇವ್ ಲಾಲೂರನ್ನು ಭೇಟಿಯಾದರು. ರಾಮದೇವ್ ಅವರು ಭಾರೀ ಯಶಸ್ಸು ಪಡೆದಿರುವುದರಿಂದ ಜನರಿಗೆ ಮತ್ಸರ ಉಂಟಾಗುತ್ತಿದೆಯೆಂದು ಲಾಲು ಈ ಸಂದರ್ಭದಲ್ಲಿ ಹೇಳಿದರು.
ಆದರೆ ಈ ಹಿಂದೆ ಬಾಬಾ ರಾಮದೇವ್ ಅವರನ್ನು ಟೀಕಿಸಿರುವ ಲಾಲು ಈಗ ಅವರನ್ನು ಹೊಗಳಿರುವುದು ಹಲವರಿಗೆ ಆಶ್ಚರ್ಯ ಮೂಡಿಸಿದೆ. ಮೇಲಾಗಿ ರಾಮದೇವ್ ಬಿಜೆಪಿ ಬೆಂಬಲಿಗರಾಗಿದ್ದು ಮೋದಿಯವರ ಪರವಾಗಿ ಲೋಕಸಭಾ ಚುನಾವಣೆ ಸಮಯ ಪ್ರಚಾರ ನಡೆಸಿರುವುದರಿಂದ ಅವರ ಹಾಗೂ ಲಾಲು ಭೇಟಿ ಮಹತ್ವ ಪಡೆದಿದೆ.
ಒಂದೊಮ್ಮೆಅಸಾರಾಂ ಗತಿಯೇ ರಾಮದೇವ್ ಅವರಿಗೂ ಆಗಲಿದೆಯಂದು ಹೇಳಿದ ಲಾಲು ಈಗ ರಾಮದೇವ್ ಅವ ಗುಣಗಾ ಮಾಡುತ್ತಿರುವುದು ವಿಶೇಷವಾಗಿದೆ. ಜನವರಿ 2014ರಲ್ಲಿ ಲಾಲು ರಾಮದೇವ್ ಅವರನ್ನು ಟೀಕಿಸುತ್ತಾ ‘‘ಅವರು ಮೋದಿಯ ರಾಜಕೀಯ ಗುರುವಿನಂತೆ ವರ್ತಿಸುತ್ತಿದ್ದಾರೆ. ನಿಜವಾದ ಪುಣ್ಯ ಪುರುಷ ಹಾಗೂ ರಾಮದೇವ್ ಅವರಂತಹ ವಂಚಕರ ನಡುವಿನ ವ್ಯತ್ಯಾಸವನ್ನು ಜನರು ಅರಿಯಬೇಕು,’’ಎಂದಿದ್ದರು.
ಜನವರಿ 2015ರಲ್ಲಿ ಮತ್ತೆ ರಾಮದೇವ್ ಅವರನ್ನು ಟೀಕಿಸಿದ್ದ ಲಾಲು, ಕಪ್ಪು ಹಣದ ಬಗ್ಗೆ ಅವರೇಕೆ ಮೌನ ತಾಳಿದ್ದಾರೆಂದು ಪ್ರಶ್ನಿಸಿದ್ದರು.
ಅಕ್ಟೋಬರ್ 2015ರಲ್ಲಿ ಮತ್ತೊಂದು ಸ್ವಾರಸ್ಯಕರ ಘಟನೆ ನಡೆದಿತ್ತು. ಯೋಗಗುರು ತನ್ನನ್ನು ಕಂಸನ ವಂಶದವನೆಂದು ಜರಿದಿರುವ ಹಿನ್ನೆಲೆಯಲ್ಲಿ ಪತ್ರಕರ್ತರು ಅವರ ಪ್ರತಿಕ್ರಿಯೆ ಕೇಳಿದಾಗ ‘‘ಪ್ರಾಣಿಗಳ ಎಲುಬುಗಳನ್ನು ತಮ್ಮ ಔಷಧಿಗಳಲ್ಲಿ ಉಪಯೋಗಿಸಿದ ಆರೋಪ ರಾಮದೇವ್ ಮೇಲಿತ್ತು,’’ಎಂದು ಲಾಲು ತಿರುಗೇಟು ನೀಡಿದ್ದರು.
ತೀರಾ ಇತ್ತೀಚೆಗೆ ಅಂದರೆ ಎಪ್ರಿಲ್ 14ರಂದು ‘‘ಈ ಎಲ್ಲಾ ಹೈ-ಫೈ ಸಂತರ ಆಸ್ತಿಯನ್ನು ತನಿಖೆಗೊಳಪಡಿಸಬೇಕು. ಈ ಹಿಂದೆ ಅವರು ಮುಲಾಯಂ ಅವರ ಗುಣಗಾನ ಮಾಡುತ್ತಿದ್ದರೆ ಈಗ ನರೇಂದ್ರ ಮೋದಿ ಹಾಗೂ ಬಿಜೆಪಿಯ ಬೆನ್ನು ಬಿದ್ದಿದ್ದಾರೆ,’’ ಎಂದು ಲಾಲು ಹೇಳಿದ್ದರು.