ವಿಜಯ ಮಲ್ಯ ಉಚ್ಚಾಟನೆಗೆ ಶಿಫಾರಸು
Update: 2016-05-04 23:32 IST
ಹೊಸದಿಲ್ಲಿ, ಮೇ 4: ವಿಜಯ ಮಲ್ಯರನ್ನು ರಾಜ್ಯ ಸಭೆಯಿಂದ ತಕ್ಷಣವೇ ಉಚ್ಚಾಟಿಸುವಂತೆ ಮೇಲ್ಮನೆಯ ನೈತಿಕ ಸಮಿತಿಯು ಬುಧವಾರ ಶಿಫಾರಸು ಮಾಡಿದೆ. ಆ ಮೂಲಕ ಪ್ರಬಲ ಸಂದೇಶವೊಂದನ್ನು ಕಳುಹಿಸುವ ಆಶಾಭಾವವನ್ನು ಅದು ವ್ಯಕ್ತಪಡಿಸಿದೆ.
ಸಾಲ ಬಾಕಿದಾರ ಮಲ್ಯರ ನಡವಳಿಕೆಯು ರಾಜ್ಯಸಭಾ ಸದಸ್ಯನೊಬ್ಬನಿಗೆ ಹೇಳಿದುದಲ್ಲ ವೆಂದು ಸಮಿತಿಯ ಸದಸ್ಯರು ಅಭಿಪ್ರಾಯಿಸಿದ್ದಾರೆ.
ಅಂತಹ ಕಠಿಣ ಕ್ರಮ ಕೈಗೊಳ್ಳುವುದರಿಂದ ಈ ಮಹಾನ್ ಸಂಸ್ಥೆಯ ಘನತೆ ಹಾಗೂ ಗೌರವವನ್ನು ಎತ್ತಿ ಹಿಡಿಯಲು, ತಪ್ಪಿತಸ್ಥ ಸದಸ್ಯರ ವಿರುದ್ಧ ಅಗತ್ಯವಾದಾಗ ಅಂತಹ ಕ್ರಮ ಕೈಗೊಳ್ಳುವುದಕ್ಕೆ ಸಂಸತ್ತು ಬದ್ಧವೆಂಬ ಸಂದೇಶ ಸಾರ್ವಜನಿಕರಿಗೆ ತಲುಪುತ್ತದೆಯೆಂದು, ಅಧ್ಯಕ್ಷ ಕರಣ್ ಸಿಂಗ್ ರಾಜ್ಯಸಭೆಯಲ್ಲಿ ಮಂಡಿಸಿದ ತನ್ನ 10ನೆ ವರದಿಯಲ್ಲಿ ನೈತಿಕ ಸಮಿತಿಯು ಹೇಳಿದೆ.