ಉದ್ಯೋಗ ಮೀಸಲಾತಿಗಾಗಿ ಹೋರಾಟ ಅನಿವಾರ್ಯ
ಮಾನ್ಯರೆ,
ಕಾರ್ಮಿಕರು ಸಿಡಿದೆದ್ದರೆ ಇಡೀ ದೇಶದ ಆಡಳಿತವೇ ನಡುಗುತ್ತದೆ ಎಂಬುದಕ್ಕೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಘಟನೆಯೇ ಸಾಕ್ಷಿ. ಕಳೆದ ಕೆಲವು ದಿನಗಳ ಹಿಂದೆ ಪಿ.ಎಫ್.ನಲ್ಲಿ ಮಾಡಿದ ಹೊಸ ಬದಲಾವಣೆಯ ವಿರುದ್ಧ ಬೆಂಗಳೂರಿನ ಕಾರ್ಮಿಕರು ನಡೆಸಿದ ಹೋರಾಟದ ಕಿಚ್ಚು ನಿಜಕ್ಕೂ ಪ್ರಶಂಸಿಸಬೇಕಾದುದು. ಪ್ರತಿಭಟನೆಯ ಬಿಸಿ ಕೇಂದ್ರ ಸರಕಾರಕ್ಕೆ ತಟ್ಟಿದ್ದೇ ತಡ ಹೊಸ ನೀತಿಯನ್ನು ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಸಿಕ ್ಕನಂತರ ಹೋರಾಟದ ಕಾವು ಕಡಿಮೆಯಾಗಿದ್ದರಿಂದ ಪ್ರತಿಭಟನೆ ನಿರತ ಕಾರ್ಮಿಕರಿಗಿಂತ ಹೆಚ್ಚಾಗಿ ಪೊಲೀಸ್ ಇಲಾಖೆ ನಿಟ್ಟುಸಿರು ಬಿಟ್ಟಿದೆ. ಪ್ರಜಾಪ್ರಭುತ್ವ ಮಾದರಿಯ ಆಡಳಿತದಲ್ಲಿ ಪ್ರಜೆಗಳಿಗೆ ಪ್ರತಿಭಟಿಸುವ ಹಕ್ಕು ಸಿಕ್ಕಿದಾಗಿನಿಂದ ದೇಶದಲ್ಲಿ ದಿನಂಪ್ರತಿ ವಿವಿಧ ಬೇಡಿಕೆಗಳ ಆಗ್ರಹಕ್ಕಾಗಿ ವಿವಿಧ ರೀತಿಯ ಪ್ರತಿಭಟನೆಗಳನ್ನು ನಾವು ನೋಡುತ್ತಿರುತ್ತೇವೆ. ಅದೆಷ್ಟೋ ನ್ಯಾಯದ ಬೇಡಿಕೆಗಾಗಿ ಹಗಲು ರಾತ್ರಿ ಮಾಡಿದ ಪ್ರತಿಭಟನೆಗಳು ಹಳ್ಳ ಹಿಡಿದಿರುವುದು ಸಂಬಂಧಪಟ್ಟ ಇಲಾಖೆಗೆ ಹೋದರೆ ತಿಳಿಯುತ್ತವೆ. ಇಂದಿನ ಯುವ ಸಮುದಾಯಕ್ಕೆ ಅದರಲ್ಲೂ ಕನ್ನಡಿಗರಿಗೆ ಖಾಸಗಿ ವಲಯದಲ್ಲಿ ಕೆಲಸ ಸಿಗಬೇಕಾದರೆ ಕನ್ನಡಪರ ಸಂಘಟನೆಗಳು ಒಗ್ಗೂಡಿ ಅಹಿಂಸಾತ್ಮಕ ಪ್ರತಿಭಟನೆ ಮಾಡುವುದರ ಅಗತ್ಯ. ಬೆಂಗಳೂರಿನಲ್ಲಿ ಸಾವಿರಾರು ಕಂಪೆನಿಗಳಿದ್ದರೂ ಕನ್ನಡಿಗರಿಗೆ ಕೆಲಸ ಕೊಡಿಸುವುದಕ್ಕೆ ಭಾಷೆಯ ಕಾರಣದಿಂದ, ನೆಲದ ಕಾರಣದಿಂದಾಗಿ ಹಿಂದೆ ಮುಂದೆ ನೋಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿಯ ನೀರು, ಆಹಾರ, ವಾಸಿಸಲು ಭೂಮಿ ಎಲ್ಲವೂ ಪಡೆದುಕೊಂಡು ಕನ್ನಡಿಗರಿಗೆ ಉದ್ಯೋಗ ಕೊಡಲು ಅಗುತ್ತಿಲ್ಲ ಎಂದಾದರೆ ಈ ನಾಡಿನ ಕನ್ನಡಪರ ಸಂಘಟನೆಗಳ ಜವಾಬ್ದಾರಿ ಅರ್ಥವಾಗುತ್ತಿಲ್ಲ. ವರ್ಷಕ್ಕೆ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರನ್ನು ನಂಬಿಕೊಂಡು ಉದ್ಯೋಗಕ್ಕಾಗಿ ಬರುವಾಗ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಸರಕಾರ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ವಿಶೇಷ ಮೀಸಲಾತಿಯನ್ನು ಜಾರಿಗೊಳಿಸಬೇಕು. ಅದು ಅನುಷ್ಠಾನಗೊಳ್ಳುವವರೆಗೂ ನಾಡಿನ ಸರ್ವತೋಮುಖ ಅಭ್ಯುದಯಕ್ಕೆ ಪ್ರಯತ್ನ ಪಡುವ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ಮಾಡಬೇಕಾಗಿದೆ.