ಪ್ರಧಾನ ಆರೋಪಿಯ ಬಂಧನ

Update: 2016-05-04 18:30 GMT

ಲಕ್ನೊ, ಮೇ 4: ಸಿಬಿಐ ಹಾಗೂ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ (ಯುಪಿಎಸ್‌ಟಿಎಫ್) ಜಂಟಿ ತಂಡವೊಂದು ಸೀಟಿಗಾಗಿ ನೋಟು ಬಹುಕೋಟಿ ರೂ.ವ್ಯಾಪಂ ಹಗರಣದ ಪ್ರಧಾನ ಆರೋಪಿಗಳಲ್ಲೊಬ್ಬನಾದ ರಮೇಶ್ ಶಿವಹರೆ ಅಲಿಯಾಸ್ ಚಂದ್ರ ಎಂಬಾತನನ್ನು ಬಂಧಿಸಿದೆ.

ಮಹೋಬಾ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷೆ ಅಂಶು ಎಂಬಾಕೆಯ ಗಂಡನಾಗಿರುವ ಶಿವಹರೆಯನ್ನು ಕಾನ್ಪುರದ ಕಲ್ಯಾಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಆವಾಸ್ ವಿಕಾಸ್ ಕಾಲನಿಯಿಂದ ಮಂಗಳವಾರ ರಾತ್ರಿ ಬಂಧಿಸಲಾಗಿದೆ. ಬಹುಹಂತಗಳ ಹಗರಣದಲ್ಲಿ ಒಬ್ಬ ರೂವಾರಿಯೆಂದು ಹೆಸರು ಹೊರಬಿದ್ದ ನಾಲ್ಕು ವರ್ಷಗಳ ಬಳಿಕ ಆತನ ಬಂಧನವಾಗಿದೆ.

ಶಿವಹರೆಯ ಬಂಧನವನ್ನು ಖಚಿತ ಪಡಿಸಿರುವ ಯುಪಿಎಸ್‌ಟಿಎಫ್‌ನ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅರವಿಂದ ಕುಮಾರ್, ಹಗರಣದಲ್ಲಿ ಭಾಗಿಯಾಗಿದ್ದ ಕುರಿತು ಆತ ತಪ್ಪೊಪ್ಪಿಕೊಂಡಿದ್ದಾನೆಂದು ತಿಳಿಸಿದ್ದಾರೆ. ಇಂದು ನಸುಕಿನ ವರೆಗೆ ಪೊಲೀಸ್ ಠಾಣೆಯಲ್ಲಿ ಶಿವಹರೆಯ ವಿಚಾರಣೆ ನಡೆಸಲಾಗಿದೆ.

ಹಲವು ಆರೋಪಿಗಳು, ಫಲಾನುಭವಿಗಳು, ಭ್ರಷ್ಟಾಚಾರ ವಿರೋಧಿಗಳು ಹಾಗೂ ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿದ ಬಳಿಕ, 2015ರ ಜುಲೈಯಲ್ಲಿ ಮಧ್ಯಪ್ರದೇಶ ವೃತ್ತಿಪರ ಪರೀಕ್ಷಾ ಮಂಡಳಿ ಅಥವಾ ವ್ಯಾಪಂ ಹಗರಣದ ತನಿಖೆಯನ್ನು ಸಿಬಿಐ ವಹಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News