ಅನಧಿಕೃತ ಮನೆಗಳ ಸಕ್ರಮಕ್ಕೆ ನಿಯಮ ತಿದ್ದುಪಡಿ: ಸಚಿವ ಖಾದರ್

Update: 2016-05-05 11:52 GMT

ಮಂಗಳೂರು, ಮೇ 5: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸರಕಾರಿ ಜಮೀನುಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ಭೂ ಕಂದಾಯ ನಿಯಮ 1966ಕ್ಕೆ ತಿದ್ದುಪಡಿ ತರಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತಿದ್ದುಪಡಿಯ ಮೂಲಕ ಅನಧಿಕೃತ ವಾಸನ ಮನೆಗಳ ಸಕ್ರಮಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಇದರನ್ವಯ 2012 ಜನವರಿ1ರ ಪೂರ್ವದಲ್ಲಿ ನಿರ್ಮಿಸಲಾಗಿರುವ 30್ಡ40, 40್ಡ60 ಮತ್ತು 50್ಡ80 ಅಡಿ ವಿಸ್ತೀರ್ಣದ ವಾಸದ ಮನೆಗಳನ್ನು ಸಕ್ರಮಗೊಳಿಸಲು ಅವಕಾಶವಿದೆ.

2013ರಂದು ಚಾಲ್ತಿಯಲ್ಲಿದ್ದ ಮಾರ್ಗಸೂಚಿ ಬೆಲೆಯನ್ನು ಆಧರಿಸಿ, ಅನಧಿಕೃತ ಮನೆಗಳ ಸಕ್ರಮಕ್ಕೆ ದರವನ್ನು ಪ್ರತಿ ಚದರಡಿ ಲೆಕ್ಕದಲ್ಲಿ ಕ್ರಮವಾಗಿ ಮಾರ್ಗಸೂಚಿ ಬೆಲೆಯ ಶೇ.10, ಶೇ.20 ಮತ್ತು ಶೇ.30ರಷ್ಟು ಮತ್ತು ಪರಿಶಿಷ್ಟರಿಗೆ ಜಾತಿ, ಪಂ., ಅಂಗವಿಕಲರು, ಮಾಜಿ ಸೈನಿಕರು ಹಾಗೂ ಪೌರ ಕಾರ್ಮಿಕರಿಗೆ ಸದರಿ ದರದ ಅರ್ಧದಷ್ಟು ದರ ನಿಗದಿಗೊಳಿಸಿ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದು ನಿಗದಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದರು.


ಮೇ 7, 8ರಂದು ತೊಕ್ಕೊಟ್ಟಿನಲ್ಲಿ ಅಬ್ಬಕ್ಕ ಉತ್ಸವ

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಈ ಬಾರಿ ಮೇ 7 ಮತ್ತು 8ರಂದು ತೆೊಕ್ಕೊಟ್ಟು ಸಮೀಪದ ಕಲ್ಲಾಪು ಯುನಿಟಿ ಸಭಾಂಗಣದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.
ಮೇ 7ರಂದು ಮಧ್ಯಾಹ್ನ 2 ಗಂಟೆಗೆ ಅಂಬಿಕಾ ರಸ್ತೆಯ ಗಟ್ಟಿ ಸಮಾಜ ಭವನದಿಂದ ಸಮ್ಮೇಳನಾಂಗಣಕ್ಕೆ ಮಹಿಳಾ ಕಲಾ ತಂಡಗಳಿಂದ ‘ಜಾನಪದ ದಿಬ್ಬಣ’ ಸಾಂಸ್ಕೃತಿಕ ಮೆರವಣಿಗೆಯನ್ನು ಏರ್ಪಡಿಸಲಾಗಿದೆ.

ಸಂಜೆ 5 ಗಂಟೆಗೆ ರಾಣಿ ಅಬ್ಬಕ್ಕ ವೇದಿಕೆಯಲ್ಲಿ ರಾಜ್ಯ ಮಹಿಳಾ ಮತ್ತು ಅಭಿವೃದ್ಧಿ, ವಿಕಲ ಚೇತನ, ಹಿರಿ ನಾಗರಿಕ ಸಬಲೀಕರಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆ ಉಮಾಶ್ರೀ ವೀರ ರಾಣಿ ಅಬ್ಬಕ್ಕ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಮೇ 1ರಂದು ನಡೆದ ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ ಮತ್ತು ಪಾಣಿ ಅಬ್ಬಕ್ಕ ಕಲಾ ವೈಭವ ಸ್ಪರ್ಧಾ ವಿಜೇತರಿಗೆ ಉದ್ಘಾಟನಾ ಸಮಾರಂಭದಲ್ಲಿ ನಗದು ಬಹುಮಾನಗಳನ್ನು ನೀಡಲಾಗುವುದು ಎಂದರು.

ಮೇ 8ರಂದು ಸಂಜೆ 5 ಗಂಟೆಗೆ ನಡೆಯುವ ಸಮಾರೋಪದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದು, ಹಿರಿಯ ಲೇಖಕಿ ಬಿ.ಎಂ.ರೋಹಿಣಿ ಅವರಿಗೆ ಅಬ್ಬಕ್ಕ ಪ್ರಶಸ್ತಿ ಹಾಗೂ ಕನ್ನಡ ಚಲನಚಿತ್ರ ನಟಿ ಹರಿಣಿ ಮತ್ತು ಅಂತಾರಾಷ್ಟ್ರೀಯ ಕ್ರೀಡಾಪಟು ಲಲಿತಾ ಜಯರಾಂ ಅವರಿಗೆ ಅಬ್ಬಕ್ಕ ಪುರಸ್ಕಾರಗಳನ್ನು ಪ್ರದಾನ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.

ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ದಿನಕರ್ ಉಳ್ಳಾಲ್ ಮಾತನಾಡಿ, ಕಾರ್ಯಕ್ರಮದಲ್ಲಿ ಸಚಿವರಾದ ಯು.ಟಿ.ಖಾದರ್, ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ., ರಝಾಕ್, ಸುಹಾಸಿನಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News