ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಿರ್ಲಕ್ಷ ವಹಿಸಿದರೆ ಕಠಿಣ ಕ್ರಮ: ಸಚಿವ ರೈ ಎಚ್ಚರಿಕೆ

Update: 2016-05-05 12:19 GMT

ಮಂಗಳೂರು,ಮೇ 5: ದ.ಕ. ಜಿಲ್ಲೆಯಾದ್ಯಂತ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿರುವುದರಿಂದ ಜನರಿಗೆ ಕುಡಿಯುವ ನೀರು ಪೂರೈಸುವ ಉತ್ತರದಾಯಿತ್ವವನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಬೇಕು. ನಿರ್ಲಕ್ಷ ತೋರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಎಚ್ಚರಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ದ.ಕ. ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯ ಹೊರತಾಗಿಯೂ ಮಂಗಳೂರು ತಾಲೂಕಿನಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಬರದ ಛಾಯೆ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ರೈತರ ಮನವೊಲಿಸಿ ನೇತ್ರಾವತಿ ನದಿಯಿಂದ ಪಂಪಿಂಗ್ ಮಾಡದಂತೆ ಮನವಿ ಮಾಡಲಾಗಿದೆ. ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದೆ. ಅಧಿಕಾರಿಗಳು ಉದಾಸೀನ ತೋರಬಾರದು. ಸಾರ್ವಜನಿಕರಿಂದ ನೀರಿನ ಸಮಸ್ಯೆ ಕರೆಗೆ ಅಧಿಕಾರಿಗಳು ಪೂರಕವಾಗಿ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಅಥವಾ ಜಿಪಂನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಿಂದ ಪೂರ್ವಾನುಮತಿ ಇಲ್ಲದೆ ನೀರು ಪೂರೈಕೆಯ ಜವಾಬ್ದಾರಿ ವಹಿಸಿಕೊಂಡಿರುವ ಪಂಚಾಯತ್ ಅಭಿವೃದ್ದಿ ಅಧಿಕಾರಿ(ಪಿಡಿಒ)ಗಳು, ಇಂಜಿನಿಯರ್‌ಗಳು ಸೇರಿದಂತೆ ಅಧಿಕಾರಿಗಳು ರಜೆಯ ಮೇಲೆ ಅಥವಾ ಇತರ ಕಾರ್ಯದ ಮೇಲೆ ಕೇಂದ್ರ ಸ್ಥಾನವನ್ನು ಬಿಟ್ಟು ತೆರಳಬಾರದು. ಒಂದು ವೇಳೆ ರಜೆಗೆ ಹೋದಲ್ಲಿ ಮತ್ತೆ ಹಿಂದೆ ಬರುವುದು ಬೇಡ ಎಂದು ಸಚಿವ ರೈ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಉಳಾಯಿಬೆಟ್ಟು ಗ್ರಾಪಂನಲ್ಲಿನ ನೀರಿನ ಸಮಸ್ಯೆ ಕುರಿತ ಚರ್ಚೆಯ ವೇಳೆ ಅಲ್ಲಿನ ಪಿಡಿಒ ಗೈರುಹಾಜರಾಗಿದ್ದ ಬಗ್ಗೆ ಸಚಿವ ರೈ ಪ್ರಶ್ನಿಸಿದಾಗ ಅವರು ಮಾಹಿತಿ ಹಕ್ಕಿಗೆ ಸಂಬಂಧಿಸಿ ಬೆಂಗಳೂರಿಗೆ ನ್ಯಾಯಾಲಯಕ್ಕೆ ತೆರಳಿದ್ದಾರೆಂದು ಸಭೆಯಲ್ಲಿ ತಿಳಿಸಲಾಯಿತು. ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ವೇಳೆ ಅವರು ನ್ಯಾಯಾಲಯಕ್ಕೆ ಹೋಗುವುದು ಅನಿವಾರ್ಯವೇ ಎಂಬುದನ್ನು ಪರಿಶೀಲಿಸಿ, ಅಗತ್ಯವಾಗಿಲ್ಲ ಎಂದಾಗಿದ್ದಲ್ಲಿ ಅವರನ್ನು ಅಮಾನತುಗೊಳಿಸುವಂತೆ ಸಚಿವ ರೈ ಸೂಚಿಸಿದರು. ಸಭೆಯಲ್ಲಿ ಹಾಜರಿಲ್ಲದ ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಎಸ್‌ಎಫ್‌ಸಿ ಹಣದಿಂದ ಟ್ಯಾಂಕರ್ ನೀರು ಪೂರೈಕೆಗೆ ಸಲಹೆ

ಉಳ್ಳಾಲ ನಗರ ಸಭೆಯಲ್ಲಿ ಒಂದು ತಿಂಗಳಿನಿಂದ ಟ್ಯಾಂಕರ್ ನೀರು ಪೂರೈಕೆಗೆ 3 ಲಕ್ಷ ರೂ. ಬಿಲ್ ಆಗಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಹಣದ ಕೊರತೆ ಇದೆ ಎಂದು ಅಧಿಕಾರಿಗಳು ಸಭೆಯಲ್ಲಿ ತಿಳಿಸಿದಾಗ, ಸ್ಥಳೀಯ ನಗರ ಸಭೆ ಆದಾಯದಿಂದಲೇ ನೀರು ಪೂರೈಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಈ ಸಂದರ್ಭ ಎಸ್‌ಎಫ್‌ಸಿ ನಿಧಿಯನ್ನು ನೀರು ಪೂರೈಕೆಗೆ ಬಳಸಲು ಅವಕಾಶವಿದೆ ಎಂಬ ಅಧಿಕಾರಿಯೊಬ್ಬರು ತಿಳಿಸಿದಾಗ, ಆ ನಿಧಿಯನ್ನು ಬಳಸಿ ಮೊದಲು ಜನರಿಗೆ ನೀರು ಕೊಡಿ. ನಿಗದಿತ ಅವಧಿಯಲ್ಲಿ ಅಗತ್ಯವಿರುವಲ್ಲಿ ಬೋರ್‌ವೆಲ್‌ಗಳನ್ನು ಕೊರೆಯುವ ಕಾರ್ಯ ಮಾಡಿ ಎಂದು ಸಚಿವ ಖಾದರ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ತುರ್ತು ಕುಡಿಯುವ ನೀರಿನ ತೀರ್ಮಾನ ಅನುಷ್ಠಾನಗೊಳಿಸಿ

  ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಈಗಾಗಲೇ ಹಲವಾರು ಸಭೆಗಳನ್ನು ನಡೆಸಿ ಹಲವಾರು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಆದರೆ ಅವುಗಳನ್ನು ಅನುಷ್ಠಾನಗೊಳಿಸಲಾಗುತ್ತಿಲ್ಲ ಎಂದು ಶಾಸಕ ಐವನ್ ಡಿಸೋಜಾ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಮೇಯರ್ ಹರಿನಾಥ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮೂಡಾ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಜಿ.ಪಂ. ಸಿಇಒ ಪಿ.ಐ. ಶ್ರೀವಿದ್ಯಾ, ಮನಪಾ ಆಯುಕ್ತ ಡಾ. ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕೈಗಾರಿಕೆಗಳಿಗೆ ನೀರು ಪೂರೈಕೆ ಸ್ಥಗಿತ ಅವಧಿ ವಿಸ್ತರಣೆ: ಜಿಲ್ಲಾಧಿಕಾರಿ

ಕುಡಿಯುವ ನೀರಿನ ಕೊರತೆ ಹಿನ್ನೆಲೆಯಲ್ಲಿ ನೇತ್ರಾವತಿ ನದಿಯಿಂದ ನೀರು ಬಳಸುತ್ತಿರುವ ಕೈಗಾರಿಕೆಗಳಿಗೆ ಮತ್ತೆ ಮುಂದಿನ 10 ದಿನಗಳವರೆಗೆ ಹಾಗೂ ಕೃಷಿಗೆ 10 ಮುಂದಿನ 5 ದಿನಗಳ ಕಾಲ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದರು.

ಖಾಸಗಿ ಬೋರ್‌ವೆಲ್, ಬಾವಿಗಳ ಒತ್ತುವರಿಗೆ ನಿರ್ದೇಶನ

ನೀರಿನ ಸಮಸ್ಯೆ ಇರುವಲ್ಲಿ ಸ್ಥಳೀಯವಾಗಿ ಸಾರ್ವಜನಿಕ ಬೋರ್‌ವೆಲ್, ಬಾವಿಗಳಲ್ಲಿ ನೀರು ಲಭ್ಯ ಇಲ್ಲವಾದಲ್ಲಿ ಖಾಸಗಿಯವರ ಬೋರ್‌ಬೆಲ್, ಬಾವಿಗಳನ್ನು ಒತ್ತುವರಿ ಮಾಡಿಕೊಂಡು ನೀರು ಪೂರೈಸಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಎಂಎಸ್‌ಇಝೆಡ್‌ನಲ್ಲಿರುವ ನೀರಿನ ಸಂಗ್ರಹ ಪರಿಶೀಲನೆಗೆ ನಿರ್ದೇಶನ

ಎಂಎಸ್‌ಇಝೆಡ್, ಎಂಆರ್‌ಪಿಎಲ್‌ಗಳಲ್ಲಿ ಸ್ವಚ್ಛ ನೀರು ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿಯಿದೆ ಎಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಇದನ್ನು ಉಲ್ಲೇಖಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ, ಎಂಎಸ್‌ಇಝೆಡ್‌ನಲ್ಲಿ ಲಭ್ಯವಿರುವ ನೀರಿನ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿ ಅದನ್ನು ಸಂಗ್ರಹಿಸಿ ನಗರಕ್ಕೆ ಪೂರೈಕೆ ಮಾಡಬೇಕು ಎಂದು ನಿರ್ದೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News